Advertisement

ಮಂಗಳೂರಿನಲ್ಲಿ ಗೈಲ್‌ ಸಿಟಿ ಗ್ಯಾಸ್‌: ಮಾರ್ಚ್‌ನೊಳಗೆ ಪಿಎನ್‌ಜಿ ವಿತರಣೆ ಆರಂಭ

12:44 AM Nov 30, 2019 | mahesh |

ಮಂಗಳೂರು: ಕೊಚ್ಚಿ-ಮಂಗಳೂರು ಗ್ಯಾಸ್‌ ಪೈಪ್‌ಲೈನ್‌ ನಿರ್ಮಾಣ ಕಾಮಗಾರಿ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಅದೇ ವೇಳೆಗೆ ಮಂಗಳೂರು ನಗರದಲ್ಲಿ ಅನಿಲ ಪೂರೈಕೆ (ಸಿಟಿ ಗ್ಯಾಸ್‌) ವ್ಯವಸ್ಥೆಯೂ ಆರಂಭಗೊಳ್ಳಲಿದೆ. ಜತೆಗೆ ನಗರದಲ್ಲಿ ಕನಿಷ್ಠ 10 ಗ್ಯಾಸ್‌ ವಿತರಣ ಸ್ಟೇಷನ್‌ ತೆರೆಯಲು ನಿರ್ಧರಿಸಲಾಗಿದೆ ಎಂದು ಗೈಲ್‌ ಗ್ಯಾಸ್‌ ಸಂಸ್ಥೆಯ ಸಿಜಿಡಿ ಯೋಜನಾ ಡಿಜಿಎಂ ವಿಲೀನ್‌ ಝುಂಕೆ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್‌ ಅಂತ್ಯದೊಳಗೆ ನಗರದ 10 ಸಾವಿರ ಮನೆಗಳಿಗೆ ಪಿಎನ್‌ಜಿ (ಪೈಪ್ಡ್ ನ್ಯಾಚುರಲ್‌ ಗ್ಯಾಸ್‌) ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕದ್ರಿ, ಬಿಜೈ, ಅತ್ತಾವರ, ಫ‌ಳ್ನೀರು ಪ್ರದೇಶಗಳಲ್ಲಿ ಸದ್ಯ ನೋಂದಣಿ ನಡೆಸಲಾಗುತ್ತಿದೆ. ಸುಮಾರು 1 ಸಾವಿರ ಗ್ರಾಹಕರು ಈಗಾಗಲೇ ಕೇವಲ 1 ತಿಂಗಳಿನಲ್ಲಿ ನೋಂದಣಿ ಮಾಡಿದ್ದಾರೆ. ನಗರದಲ್ಲಿ ಪೂರ್ಣಮಟ್ಟದಲ್ಲಿ ಸಿಟಿ ಗ್ಯಾಸ್‌ ಜಾರಿಯಾದ ಬಳಿಕ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಭಾಗಗಳಲ್ಲಿ ಗ್ಯಾಸ್‌ ವಿತರಣೆ ಜಾರಿಗೆ ಬರಲಿದೆ ಎಂದರು.

ಕಂಪೆನಿಯ ಮಾರ್ಕೆಟಿಂಗ್‌ ಡಿಜಿಎಂ ಸುನಿಲ್‌ ಕುಮಾರ್‌ ಝಾ ಮಾತನಾಡಿ, ಗೈಲ್‌ ಗ್ಯಾಸ್‌ ಎಲ್ಲ ವರ್ಗಗಳ ಗ್ರಾಹಕರನ್ನು ತಲಪುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ವಿವಿಧ ರೀತಿಯ ಸ್ಕೀಂಗಳನ್ನು ಯೋಜಿಸಿದೆ. ಯಾವುದೇ ಯೋಜನೆಯಲ್ಲೂ ನೋಂದಣಿ ವೇಳೆ ಹಣ ಸಂಗ್ರಹ ಇಲ್ಲ. ಬದಲಾಗಿ ಯಾವಾಗ ಗ್ಯಾಸ್‌ ಸಂಪರ್ಕ ಪೂರ್ಣಗೊಂಡು, ಬಳಕೆಗೆ ಸಿದ್ಧವಾಗಲಿದೆಯೋ ಆ ವೇಳೆ ಹಣ ಪಡೆಯಲಾಗುವುದು. ಇದಕ್ಕಾಗಿ ಮೂರು ರೀತಿಯ ಸ್ಕೀಂ ಪರಿಚಯಿಸಲಾಗಿದೆ. 1ನೇ ಸ್ಕೀಂ ಪ್ರಕಾರ, 5,000 ರೂ.ಗಳ ಪ್ಲಾನ್‌ ಇದ್ದು, ಪ್ರಸ್ತುತ 1,000 ರೂ. ರಿಯಾಯಿತಿ ಘೋಷಿಸಲಾಗಿದೆ. 4,000 ರೂ. ರಿಫ‌ಂಡೆಬಲ್‌ ಸಂಪರ್ಕ ಸೆಕ್ಯೂರಿಟಿ ಡೆಪಾಸಿಟ್‌ ಮತ್ತು 500 ರೂ. ಪೇಮೆಂಟ್‌ ಸೆಕ್ಯೂರಿಟಿ ಡಿಪಾಸಿಟ್‌ ನೀಡಬೇಕು. 2ನೇ ಸ್ಕೀಂ ಪ್ರಕಾರ ಸಂಪರ್ಕ ಸೆಕ್ಯೂರಿಟಿ ಡೆಪಾಸಿಟ್‌ ಇಲ್ಲ, 1 ಸಾವಿರ ದಿನಗಳಿಗೆ ಪ್ರತಿ ದಿನಕ್ಕೆ 5 ರೂ. ನಂತೆ ಪಾವತಿ (ರಿಫ‌ಂಡೆಬಲ್‌) ಮತ್ತು 500ರೂ. ಪೇಮೆಂಟ್‌ ಸೆಕ್ಯೂರಿಟಿ ಡೆಪಾಸಿಟ್‌ (ರಿಫ‌ಂಡೆಬಲ್‌)ಇರಲಿದೆ. 3ನೇ ಸ್ಕೀಂನಲ್ಲಿ ಸಂಪರ್ಕ ಸೆಕ್ಯೂರಿಟಿ ಡೆಪಾಸಿಟ್‌ ಇಲ್ಲ, ಪ್ರತಿದಿನಕ್ಕೆ 1ರೂ. (ತೆರಿಗೆ ಪ್ರತ್ಯೇಕ) ಬಾಡಿಗೆ (ನಾನ್‌-ರಿಫ‌ಂಡೆಬಲ್‌), 500 ರೂ. ಪೇಮೆಂಟ್‌ ಸೆಕ್ಯೂರಿಟಿ ಡೆಪಾಸಿಟ್‌(ರಿಫ‌ಂಡೆಬಲ್‌) ಇರಲಿದೆ ಎಂದರು.

ಮೊದಲಿಗೆ ಎಂಸಿಎಫ್‌ಗೆ ಗ್ಯಾಸ್‌
ವಿಲೀನ್‌ ಝುಂಕೆ ಮಾತನಾಡಿ, ಗ್ಯಾಸ್‌ ಪೈಪ್‌ಲೈನ್‌ನಡಿ ಮೂಲ್ಕಿಯಿಂದ ಅರ್ಕುಳವರೆಗೆ ಒಟ್ಟು 40 ಕಿ.ಮೀ. ಉದ್ದದ ಪೈಪ್‌ಲೈನ್‌ ನಿರ್ಮಾಣವಾಗಲಿದೆ. ನಗರ ವ್ಯಾಪ್ತಿಯಲ್ಲಿ 10 ಕಿ.ಮೀ. ಮುಖ್ಯ ಪೈಪ್‌ಲೈನ್‌ ನಿರ್ಮಾಣವಾಗುತ್ತದೆ. ವಿವಿಧ ತೈಲ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, 8 ಪೆಟ್ರೋಲ್‌ ಬಂಕ್‌ ಬದಿಯಲ್ಲೇ ಗ್ಯಾಸ್‌ ವಿತರಣ ಸ್ಟೇಷನ್‌ ಕೂಡ ಸ್ಥಾಪನೆಯಾಗಲಿದೆ. ಮೊದಲು ಎಂಸಿಎಫ್ಗೆ ಅನಿಲ ಪೂರೈಕೆ ಮಾಡಿ, ಬಳಿಕ ಎಸ್‌ಇಝಡ್‌, ಎಂಆರ್‌ಪಿಎಲ್‌, ಬಿಎಎಸ್‌ಎಫ್ನಂತಹ ಕಾರ್ಖಾನೆಗಳಿಗೆ ಪಿಎನ್‌ಜಿ ವಿತರಣೆ ಮಾಡುವ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next