ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್‌ನಲ್ಲಿ “ಮಸ್ಕತ್ ಕರ್ನಾಟಕ ಸಂಘ’ ದಿಂದ 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರು ರಾಜವಂಶದ ಅರಸರಾಗಿರುವ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ತೃಷಿಕಾ ಕುಮಾರಿಯವರು ಮಸ್ಕತ್‌ಗೆ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಾರ್ಯಕ್ರಮಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು ಹಾಗೂ ಮಸ್ಕತ್‌ನಲ್ಲಿರುವ ಕನ್ನಡಿಗರ ಪ್ರೀತಿ ಮತ್ತು ಅಭಿಮಾನವನ್ನು ಕಂಡು ತುಂಬಾ ಸಂತಸವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಒಮಾನ್ ಕನ್ನಡತಿ ಡಾ| ಕವಿತಾ ರಾಮಕೃಷ್ಣರವರು 24 ಕ್ಯಾರೆಟ್ ಬಂಗಾರದಿಂದ ತಯಾರಿಸಿದ ತಂಜಾವೂರು ಚಿತ್ರಶೈಲಿಯಲ್ಲಿ ರಚಿಸಿದ “ಗಂಡಭೇರುಂಡ’ ಕಲಾಕೃತಿಯನ್ನು ಮಹಾರಾಜ ಯದುವೀರ್ ಒಡೆಯರ್ ಅವರಿಗೆ ಕೊಡುಗೆಯನ್ನಾಗಿ ನೀಡಿದರು. ಈ ಹಿಂದೆ ರಾಜಮಾತೆ ಪ್ರಮೋದ ಒಡೆಯರ್‌ಅವರಿಗೂ ಸಹ ತಂಜಾವೂರು ಚಿತ್ರಶೈಲಿಯ ಕಲಾಕೃತಿಯನ್ನು ನೀಡಲಾಗಿತ್ತು.
ಬಹುಮಖ ಪ್ರತಿಭೆಯ ಶ್ರೀಮತಿ ಡಾ| ಕವಿತಾ ರಾಮಕೃಷ್ಣ ಅವರು ತಂಜಾವೂರು ಶೈಲಿಯ ಚಿತ್ರಕಲೆ ರಚಿಸುವುದರಲ್ಲಿ ನಿಪುಣರು, ಸಂಸ್ಕೃತ ವಿಷಯದಲ್ಲಿ ಚಿನ್ನದ ಪದಕ ವಿಜೇತರು. ಒಮಾನ್‌ನಲ್ಲಿ ಯೋಗ ಶಿಕ್ಷಣವನ್ನು ಒಮಾನ್ ರಾಜವಂಶಸ್ಥರೂ ಸೇರಿದಂತೆ ಹಲವರಿಗೆ ಯೋಗಭ್ಯಾಸವನ್ನು ಕಲಿಸಿಕೊಟ್ಟ ಹೆಗ್ಗಳಿಕೆ ಇವರಿಗಿದೆ. ಒಮಾನ್ ರಾಷ್ಟ್ರದ ರಾಜಪರಿವಾರ, ಒಮಾನ್ ಸರಕಾರದ ಮಂತ್ರಿಗಳು, ಸರಕಾರದ ವಿವಿಧ ಪ್ರಮುಖ ಹುದ್ದೆಯಲ್ಲಿರುವ ಗಣ್ಯರು, ಭಾರತ ಸರಕಾರದ ರಾಯಭಾರಿಗಳು, ಕರ್ನಾಟಕದ ಪ್ರತಿಷ್ಠಿತ ಗಣ್ಯವ್ಯಕ್ತಿಗಳು, ಮೈಸೂರು ಮಹಾರಾಣಿ, ಕರ್ನಾಟಕ ಮುಖ್ಯಮಂತ್ರಿಗಳು, ಮಂತ್ರಿಗಳು, ಕೇಂದ್ರ ಮಂತ್ರಿಗಳು ಹೀಗೆ ಹಲವಾರು ಜನರಿಗೆ ಅವರು ಸ್ವತಃ ರಚಿಸಿದ ತಂಜಾವೂರು ಶೈಲಿಯ ಚಿತ್ರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ವರದಿ: ಪಿ.ಎಸ್.ರಂಗನಾಥ, ಮಸ್ಕತ್