Advertisement

ಬರ್ತ್‌ಡೇಗೆ ಗಿಫ್ಟ್ ತಗೊಂಡಿದೀನಿ, ಏನಂತ ಗೆಸ್‌ ಮಾಡು…

06:00 AM Aug 28, 2018 | |

ಪ್ರೀತಿಯ ನನ್ನವನೇ,
ಏಕವಚನದಲ್ಲಿ ಕರೀತಿದಾಳಲ್ಲ, ಎಷ್ಟು ಇವಳ ಧೈರ್ಯ ಅಂದುಕೊಂಡೆಯಾ?ಆ ಪ್ರೀತಿಯಲ್ಲೇ ಬಹುವಚನವಿದೆ ಗೆಳೆಯಾ, ಅಲ್ಲಲ್ಲ ಇನಿಯಾ… ಅದಕ್ಕೂ ಮಿಗಿಲಾದವನೇ; ಮದುವೆಯಾಗಿ ಆರು ವರ್ಷ ಕಳೆದರೂ ನಿನ್ನ ಬಣ್ಣಿಸಲು, ಕರೆಯಲು ಸರಿಯಾದ ಶಬ್ದ ಸಿಕ್ಕಿಲ್ಲ ಕಣೋ. ಎಲ್ಲರಂತೆ ಬಹುವಚನದಲ್ಲಿ ಓಯ್‌, ಇವರೇ ಎಂದೆಲ್ಲ ಕರೆಯುವುದು ಹಳೆ ಫ್ಯಾಷನ್‌ ಅಂತೆ. ಆಧುನಿಕರಂತೆ ನಿನ್ನ ಹೆಸರಿಡಿದು ಕರೆಯುವುದರಲ್ಲಿ ಏಕೋ ನನಗೆ ಖುಷಿಯಿಲ್ಲ. ಗುಂಡು, ರಾಜಾ, ಸ್ವಾಮಿ ಎಂದೆಲ್ಲ ನಿಕ್‌ ನೇಮಿನಿಂದ ಕರೆದರೂ ತೃಪ್ತಿಯಿಲ್ಲ. ಹೆಸರು ಯಾವುದಾದರೇನು ಪ್ರೀತಿ ಮುಖ್ಯವೆಂಬುದು ನಿನ್ನದೇ ಮಾತು. ಅದನ್ನೇ ನಂಬಿ ಮನಸ್ಸಿಗೆ ಅನಿಸಿದಂತೆ ಕರೆದಾಗ ನೀನು ಓಗೊಡುತ್ತೀಯಲ್ಲ, ಅದೇ ನನಗೆ ಸಮಾಧಾನ.

Advertisement

  ವರ್ಷಗಳು ಉರುಳುತ್ತಾ ಹೋದಂತೆ ಆಕರ್ಷಣೆ ಕಡಿಮೆಯಾಗಬೇಕು. ಆದರೆ, ನಿನ್ನ ವಿಷಯದಲ್ಲಿ ಹಾಗಾಗ್ತಾ ಇಲ್ಲ. ದಿನಗಳು ಉರುಳುತ್ತಾ ಹೋದಂತೆಲ್ಲಾ ನಿನ್ನ ಮೇಲಿನ ಪ್ರೀತಿ ಹೆಚ್ಚುತ್ತಲೇ ಇದೆ. ನಿನ್ನೆಮೊನ್ನೆ ಪರಿಚಯವಾದವನಂತೆ, ಇಷ್ಟು ವರ್ಷ ಕಳೆದೇ ಇಲ್ಲವೆಂಬಂತೆ. ಯುಗಯುಗಾದಿ ಕಳೆದಂತೆ ಮತ್ತೆ ಯುಗಾದಿ ಬಂದು ಹೊಸತನ ತಂದಂತೆ ನಮ್ಮ ಪ್ರೀತಿ.

  ಹೊಸ ಹೊಸ ಅಡಿಗೆ ಪ್ರಯೋಗಗಳನ್ನು ಮಾಡಿ ಬಡಿಸಿದಾಗ ರುಚಿಯಿದ್ದರೂ ಇಲ್ಲದಿದ್ದರೂ ತಿಂದು ಪ್ರತಿಕ್ರಿಯಿಸಿದಾಗ ಇನ್ನೊಮ್ಮೆ ಹೊಸದೇನೋ ಮಾಡುವ ಉತ್ಸಾಹ. ಪ್ರಯತ್ನಿಸಿ ಪ್ರಯತ್ನಿಸಿ ಚೆನ್ನಾಗಿ ಆಗುತ್ತೆ ಎಂದು ನೀನು ನೀಡುವ ಪ್ರೋತ್ಸಾಹ.

ಪ್ರೀತಿಯೆಂದರೆ ಸರಸ ವಿರಸಗಳು ಸಾಮಾನ್ಯ. ಮೂಗಿನ ತುದಿಯಲ್ಲೇ ಕೋಪವಿರುವ ನಾನು ಜಗಳ ತೆಗೆದಾಗ ಮೌನವಾಗಿದ್ದು, ಕೋಪ ತಣ್ಣಗಾದ ಮೇಲೆ ತಪ್ಪು ನನ್ನದಾಗಿದ್ದರೆ ನಿಧಾನಕ್ಕೆ ತಿದ್ದುವ ಗುಣ ಹೊಂದಿರುವ ನಿನ್ನನ್ನು ಪಡೆದಿರುವ ನಾನೇ ಧನ್ಯ. 

ಪ್ರತಿ ಬಾರಿ ನಿನ್ನ ಹುಟ್ಟುಹಬ್ಬಕ್ಕಾಗಿ ಏನು ಬೇಕೆಂದು ಕೇಳಿದಾಗ ನನಗೇನೂ ಬೇಡವೆಂದು ಸರ್‌ಪ್ರೈಸಾಗಿ ನನಗೆ ಉಡುಗೊರೆ ನೀಡುವಾಗ ಅದ್ಯಾಕೋ ಅತಿಯಾಯ್ತು ಎನಿಸಿದರೂ ನೀನೇ ಗ್ರೇಟ್‌ ಕಣೋ. ನಿನ್ನ ಹುಟ್ಟುಹಬ್ಬಕ್ಕೂ ನನಗ್ಯಾಕೆ ಎಂದು ಕೇಳಿದಾಗ ,ಏನೋ ಡಿಫ‌ರೆಂಟ್‌ ಎನ್ನುವ ನಿನ್ನ ಉತ್ತರ. ಈ ಬಾರಿ ನಿನಗಾಗಿ ನಾನೇ ಗಿಫ್ಟನ್ನು ಸಿದ್ಧ ಪಡಿಸಿದ್ದೇನೆ.ಅದೇನೆಂದು ಗೆಸ್‌ ಮಾಡು ನೋಡೋಣ.ನಿನ್ನ ಇಷ್ಟದ ಜಾಮೂನು, ಬರ್ಫಿಗಳಂತೂ ಅಲ್ಲ. ನಿನ್ನ ಇಷ್ಟದ ಪುಸ್ತಕವಂತೂ ಅಲ್ಲ. ವಜ್ರ, ಬಂಗಾರವಂತೂ ಅಲ್ಲವೇ ಅಲ್ಲ. ಏನಿರಬಹುದು, ಗೆಸ್‌ ಮಾಡಿ ಹೇಳು ನೋಡೋಣ.

Advertisement

ಇಂತಿ ನಿನ್ನ ಪ್ರೀತಿಯ,
ನಿನ್ನವಳು 

Advertisement

Udayavani is now on Telegram. Click here to join our channel and stay updated with the latest news.

Next