ಹೆಲ್ಸಿಂಕಿ: ಫಿನ್ಲ್ಯಾಂಡ್ ನಲ್ಲಿ ನಡೆಯುತ್ತಿರುವ “ಗೀಬೀ ಬಾಕ್ಸಿಂಗ್’ ಕೂಟದಲ್ಲಿ ಭಾರತದ 5 ಮಂದಿ ಪೈನಲ್ ಪ್ರವೇಶಿಸಿದ್ದಾರೆ. 60 ಕೆಜಿ ವಿಭಾಗದಲ್ಲಿ 3 ಬಾರಿಯ ಏಶ್ಯನ್ ಗೇಮ್ಸ್ ಪದಕ ವಿಜೇತ ಶಿವ ಥಾಪ ರಶ್ಯದ ಮಿಖೈಲ್ ವರ್ಲಮೋವ್ ಅವರನ್ನು 5-0 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಅವರ ಎದುರಾಳಿ ಆತಿಥೇಯ ನಾಡಿನ ಆಸ್ಲ್ಯಾನ್ ಖಾಟೆವ್.
ಭಾರತೀಯರ ಮುಖಾಮುಖೀ
56 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಬಾಕ್ಸರ್‌ಗಳೇ ಮುಖಾಮುಖೀಯಾಗಲಿರುವುದು ವಿಶೇಷ. ಮೊಹಮ್ಮದ್ ಹುಸಾಮುದ್ದಿನ್ ಮತ್ತು ಕವೀಂದರ್ ಸಿಂಗ್ ಬಿಷ್ಟ್ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಫೈನಲ್‌ಗೇರಿದ್ದು, ಪರಸ್ಪರ ಎದುರಾಗಲಿದ್ದಾರೆ.
ಹುಸಾಮುದ್ದಿನ್ ಕಜಕಿಸ್ಥಾನದ ಝನ್‌ಬೋಲತ್ ಕೈದಿರ್‌ಬೆಯೇವ್ ವಿರುದ್ಧ ಭಾರೀ ಹೋರಾಟದ ಬಳಿಕ 3-2 ಅಂತರ ದಿಂದ ಜಯಿಸಿದರೆ, ಬಿಷ್ಟ್ ಫ್ರಾನ್ಸ್‌ನ ಜೋರ್ಡನ್ ರೋಡ್ರಿಗಸ್ ಅವರನ್ನು ಸೋಲಿಸಿದರು. 69 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ “ಇಂಡಿಯನ್ ಓಪನ್’ ಬೆಳ್ಳಿ ಪದಕ ವಿಜೇತ ದಿನೇಶ್ ದಾಗರ್ ರಷ್ಯಾದ ಸರ್ಗಿ ಸೊಬಿಲಿನ್‌ಸ್ಕಿ ಅವರನ್ನು 4-1 ಅಂಕದಿಂದ ಮಣಿಸಿ ಫೈನಲ್ ತಲುಪಿದ್ದಾರೆ. ಇವರ ಎದುರಾಳಿ ಇಂಗ್ಲೆಂಡ್‌ನ ಪ್ಯಾಟ್ ಮೆಕ್ ಕೊರ್‌ಮಾಕ್. 49 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಗೋವಿಂದ ಸಹಾನಿ ರಶ್ಯದ ಆರ್ಟಿಯಾಸ್ ಸೊಜಾನ್ ಅವರನ್ನು 5-0 ಅಂಕಗಳಿಗೆ ಪರಾಭವಗೊಳಿಸಿ ಫೈನಲ್‌ಗೆ ಕಾಲಿಟ್ಟಿದ್ದಾರೆ. ಇಲ್ಲಿನ ಎದುರಾಳಿ ಥಾಯ್ಲೆಂಡ್‌ನ ಥಿಟಿಸನ್ ಪಾನ್ಮೊಡ್.
ಸುಮೀತ್, ನವೀನ್‌ಗೆ ಕಂಚು
ಸೆಮಿಫೈನಲ್ ಪ್ರವೇಶಿಸಿದ್ದ ಸುಮೀತ್ (91 ಕೆಜಿ) ಹಾಗೂ ಮಾಜಿ ಯೂತ್ ವಿಶ್ವ ಚಾಂಪಿಯನ್ ಸಚಿನ್ ಸಿವಾಚ್ (52 ಕೆಜಿ) ಸೋಲನುಭವಿಸಿ ಕಂಚಿಗೆ ತೃಪ್ತಿಪಟ್ಟರು.