Advertisement

ಸೋಲ್ ಗೆಲುವು

10:01 AM Jul 09, 2019 | mahesh |

ರಾಜ್ಯ ಗಡಿಯನ್ನಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಗಡಿಗಳನ್ನೂ ದಾಟಿರುವ ಹೆಮ್ಮೆ ಸಾಂಪ್ರದಾಯಿಕ ಕೊಲ್ಲಾಪುರಿ ಪಾದರಕ್ಷೆಯದು. ಕೊಲ್ಲಾಪುರಿ ಪಾದರಕ್ಷೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಾಮರಸ್ಯದ ಕೊಂಡಿಯೂ ಹೌದು. ಇಂಥ ಹಿರಿಮೆಯ ಪಾದರಕ್ಷೆಯ ಮುಕುಟಕ್ಕೆ ಇತ್ತೀಚಿಗಷ್ಟೆ ಜಿ.ಐ. ಟ್ಯಾಗ್‌(ಭೌಗೋಳಿಕ ಸೂಚಕ) ಗೌರವ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಲೇಖಕರು ಕೊಲ್ಲಾಪುರಿ ಪಾದರಕ್ಷೆ ಹಾಗೂ ಅದರಿಂದ ಬದುಕು ಕಟ್ಟಿಕೊಂಡವರ ಕಥಾನಕವನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ…

Advertisement

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ ನಾಲ್ಕು ಸ್ಥಳಗಳು “ಕೊಲ್ಹಾಪುರೀಸ್‌’ ಎಂಬ ಪದವನ್ನು ಬಳಸುವ, ಮತ್ತು ಆ ಪಾದರಕ್ಷೆಗಳನ್ನು ತಯಾರಿಸುವ ಅಧಿಕೃತ ಮತ್ತು ವಿಶೇಷ ಹಕ್ಕು ಪಡೆದುಕೊಂಡಿವೆ. ಜೊತೆಗೆ, ತಮ್ಮ ಊರಿನ ಹೆಸರಿನ ಚಪ್ಪಲಿಯ ಗೌರವ, ಬೇರೆ ಕಡೆಯವರಿಗೆ ಏಕೆ ಸಿಗಬೇಕು ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಬೌದ್ಧಿಕ ಆಸ್ತಿ ಹಕ್ಕನ್ನು ದಯಪಾಲಿಸುವ ಜಿ.ಐ ಟ್ಯಾಗ್‌ ಅನ್ನು ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರದ ಜೊತೆಗೆ, ಮಹಾರಾಷ್ಟÅದ ಕೊಲ್ಹಾಪುರ, ಸತಾರಾ, ಸಾಂಗ್ಲಿ ಮತ್ತು ಸೋಲಾಪುರಕ್ಕೆ ನೀಡಲಾಗಿದೆ. ಕೊಲ್ಲಾಪುರಿ ಚಪ್ಪಲಿಗಳು ಮಹಾರಾಷ್ಟ್ರದ ಪಟ್ಟಣದಿಂದ ತಮ್ಮ ಹೆಸರನ್ನು ಪಡೆದುಕೊಂಡಿವೆ, ಆದರೆ ಇದನ್ನು ಕರ್ನಾಟಕದ ಗಡಿ ಜಿಲ್ಲೆಗಳನ್ನೂ ಮೀರಿದ ಭೂಪ್ರದೇಶದಲ್ಲಿ ತಯಾರಿಸಲಾಗುತ್ತದೆ ಎಂಬುದು ವಿಶೇಷ.

ಕೊಲ್ಲಾಪುರಿಯ ಪುಟ್ಟ ಇತಿಹಾಸ
ಕೊಲ್ಲಾಪುರಿಯ ಉಗಮದ ಕುರಿತು ಹಲವು ಭಿನ್ನಾಭಿಪ್ರಾಯಗಳಿವೆ. ಮಹಾರಾಷ್ಟ್ರದ ಕೊಲ್ಲಾಪುರ ಈ ಪಾದರಕ್ಷೆಗಳ ಜನ್ಮಸ್ಥಳವೆಂದು ಕೆಲವರು ಹೇಳಿದರೆ, ಕರ್ನಾಟಕ ಚರ್ಮೋದ್ಯೋಗ ಮಂಡಳಿ ಹೇಳುವಂತೆ ಕೊಲ್ಲಾಪುರಿ ಪಾದರಕ್ಷೆಗಳು ಜನ್ಮ ತಳೆದಿದ್ದು ಕರ್ನಾಟಕದ ಕಾಪ್ಸಿ ಎಂಬ ಹಳ್ಳಿಯಲ್ಲಿ. ಕಾಪ್ಸಿಯಲ್ಲಿ ಸಿದ್ದವಾದ ಚಪ್ಪಲಿಗಳನ್ನು ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಮಾರಾಟ ಮಾಡುತ್ತಿದ್ದರಂತೆ. ಆಗಲೇ ಇದಕ್ಕೆ ಕೊಲ್ಲಾಪುರಿ ಚಪ್ಪಲಿ ಎಂಬ ಹೆಸರು ಬಂದಿದ್ದು ಎಂಬ ಮಾತೂ ಇದೆ.

ಇಂದು ಕರ್ನಾಟಕದ ಅಥಣಿ, ನಿಪ್ಪಾಣಿ ಸುತ್ತಲಿನ ಹಳ್ಳಿಗಳಲ್ಲಿ ಮಹಾರಾಷ್ಟ್ರದ ಸಾಂಗ್ಲಿ, ಮೀರಜ, ಕಾಪ್ಲಿ, ರಾಧಾನಗರಿ ಹಾಗೂ ಕಾಗಲ್‌ದಲ್ಲಿ ಬೃಹತ್‌ ಪ್ರಮಾಣದಲ್ಲಿ ಇದರ ತಯಾರಿಕೆ ನಡೆಯುತ್ತದೆ. ಇದೊಂದು ಗೃಹ ಉದ್ಯೋಗ. ಚರ್ಮ ಹಾಗು ಕಚ್ಚಾ ವಸ್ತುಗಳನ್ನು ಪಡೆದು ಮನೆಯಲ್ಲೇ ತಯಾರಿಸಿ ಕಂಪನಿಗೆ ಮಾರಾಟ ಮಾಡಬಹುದು.

Advertisement

ಜಿ.ಐ ಟ್ಯಾಗ್‌ ಎಂದರೇನು?
“ಜಿ.ಐ ಟ್ಯಾಗ್‌’ ಎಂಬುದು ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಎಂಬುದರ ಶಾರ್ಟ್‌ ಫಾರ್ಮ್. ವಸ್ತು, ವಿಷಯಗಳಿಗೆ ಜಾಗತಿಕವಾಗಿ ಪೇಟೆಂಟ್‌, ಟ್ರೇಡ್‌ಮಾರ್ಕ್‌ ನೀಡುವ ಸಂಸ್ಥೆ ಸಿಜಿಪಿಡಿಟಿಎಂ, ನಿರ್ದಿಷ್ಟ ಪ್ರದೇಶದ ಹೆಗ್ಗುರುತಾದ ಸಾಂಪ್ರದಾಯಿಕ ವಸ್ತುಗಳಿಗೆ ಜಿ.ಐ ಟ್ಯಾಗ್‌ಅನ್ನು ದಯಪಾಲಿಸುತ್ತದೆ. ಭಾರತದಲ್ಲಿ ಜಿ.ಐ ಟ್ಯಾಗ್‌ ಪಡೆದ ಮೊದಲ ವಸ್ತು “ಡಾರ್ಜಿಲಿಂಗ್‌ ಟೀ’. ಜಿ.ಐ ಟ್ಯಾಗ್‌ಗೆ 10 ವರ್ಷಗಳ ವ್ಯಾಲಿಡಿಟಿ ಕೂಡಾ ಇರುತ್ತದೆ. ನಂತರ ಅದನ್ನು ನವೀಕರಣಗೊಳಿಸಬಹುದು.

ಅದರಿಂದ ಸಿಗುವ ಲಾಭ?
ಜಿ.ಐ ಟ್ಯಾಗ್‌ನಿಂದ ಆಯಾ ವಸ್ತುಗಳ ಮಾರುಕಟ್ಟೆ ದೊಡ್ಡದಾಗುತ್ತದೆ. ಈಗ ಕೊಲ್ಲಾಪುರಿ ಪಾದರಕ್ಷೆ ತಯಾರಕರು ತಮ್ಮ ಉತ್ಪನ್ನವನ್ನು ಹೆಚ್ಚು ಹೆಚ್ಚು ರಫ್ತು ಮಾಡುವುದು ಸಾಧ್ಯವಾಗುತ್ತದೆ ಎನ್ನುವುದು ಮಾರುಕಟ್ಟೆ ಪರಿಣತರ ಅಭಿಪ್ರಾಯ. ಉದಾಹರಣೆಗೆ ತಯಾರಕರು ಆನ್‌ಲೈನ್‌ ಶಾಪಿಂಗ್‌ನ ದೈತ್ಯ ಕಂಪನಿಗಳಾದ ಅಮೇಝಾನ್‌, ಫ್ಲಿಪ್‌ಕಾರ್ಟ್‌ನಂಥ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ, ನಕಲಿ ಕೊಲ್ಲಾಪುರಿ ಪಾದರಕ್ಷೆ ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಕೂಡಾ ಸಾಧ್ಯ. ಜಿ.ಐ ಟ್ಯಾಗ್‌ನಿಂದ ಕೊಲ್ಲಾಪುರಿ ಚಪ್ಪಲಿ ತಯಾರಿಯಲ್ಲಿ ತೊಡಗಿರುವ ಸಾವಿರಾರು ಕೆಲಸಗಾರರ ಬದುಕು ಸುಧಾರಿಸಿದರೆ ಅದಕ್ಕಿಂತ ದೊಡ್ಡ ಗೌರವ ಬೇರಾವುದೂ ಇಲ್ಲ.

ಸೆಲಬ್ರಿಟಿಗಳ ಕಾಲಲ್ಲಿ …
ಫ್ಯಾಷನ್‌ ಶೋಗಳಲ್ಲಿ ರ್‍ಯಾಂಪ್‌ ವಾಕ್‌ ಮಾಡುವ ಬೆಡಗಿಯರೂ ಕೊಲ್ಲಾಪುರಿ ಪಾದರಕ್ಷೆ ಧರಿಸಿ ಹೆಮ್ಮೆಯಿಂದ ಬೀಗಿದ್ದಾರೆ. ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ರಣ್‌ವೀರ್‌ ಸಿಂಗ್‌, ಶ್ರದ್ಧಾ ಕಪೂರ್‌, ದೀಪಿಕಾ ಪಡುಕೋಣೆ, ಸೈಫ್ ಆಲಿ ಖಾನ್‌ ಸೇರಿದಂತೆ ಸೆಲಬ್ರಿಟಿಗಳೂ ಅನೇಕ ಸಂದರ್ಭಗಳಲ್ಲಿ ಕೊಲ್ಲಾಪುರಿ ಪಾದರಕ್ಷೆಗಳನ್ನು ತೊಟ್ಟವರೇ. ಬ್ರಾಂಡೆಡ್‌ ವ್ಯಕ್ತಿಗಳು ಕೊಲ್ಲಾಪುರಿ ಪಾದರಕ್ಷೆಗಳನ್ನು ಧರಿಸಿ ಪಾದರಕ್ಷೆಯ ಬ್ರ್ಯಾಂಡ್‌ ಮೌಲ್ಯ ಹೆಚ್ಚಿಸಿದರೂ ಅದನ್ನು ತಯಾರಿಸಿದ ಕುಶಲಕರ್ಮಿಗಳ ಬದುಕು ಮಾತ್ರ ಸುಂದರವಾಗಿಲ್ಲ ಎನ್ನುವುದು ಕಹಿ ಸತ್ಯ.

-ನೀವು ತಯಾರಿಸಿದ ಕೊಲ್ಲಾಪುರಿ ಚಪ್ಪಲಿಗೆ ಪ್ರಶಸ್ತಿ ದೊರೆತ ಸಂದರ್ಭ ವಿವರಿಸುವಿರಾ?
ಮಂಗಳೂರಿನ ಡಿಸೋಜಾ ಎಂಬುವರ ಸಲಹೆ ಮೇರೆಗೆ ನಾನು ಪ್ರಶಸ್ತಿಗಾಗಿ ಚಪ್ಪಲಿ ಕಳಿಸಿದ್ದೆ. ಇಸವಿ 1990. ಬಹುಮಾನದ ನಿರೀಕ್ಷೆಯೇ ನನಗಿರಲಿಲ್ಲ. ರಾಷ್ಟ್ರೀಯ ಪ್ರಶಸ್ತಿಗೆ ನಾನು ಮಾಡಿದ ಕೊಲ್ಲಾಪುರಿ ಚಪ್ಪಲ್‌ ಆಯ್ಕೆಯಾಗಿದೆ ಎಂದು ತಿಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮನೆಮಂದಿಯೆಲ್ಲ ಬಹಳ ಸಂತಸ ಪಟ್ಟಿದ್ದರು. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ರಾಷ್ಟ್ರಪತಿ ವೆಂಕಟರಾಮನ್‌ ಪ್ರಶಸ್ತಿ ನೀಡಿ ಗೌರವಿಸಿದ್ದರು. ಆಗ ಉಪರಾಷ್ಟ್ರಪತಿ ಶಂಕರ ದಯಾಳ ಶರ್ಮಾ ಹಾಗೂ ಪ್ರಧಾನಮಂತ್ರಿ ಪಿ. ವಿ. ನರಸಿಂಹ ರಾವ್‌ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

-ಪ್ರಶಸ್ತಿ ಸಿಕ್ಕ ನಂತರ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಆದವಾ?
ನಾವು ಹಾಗೆಯೇ ಅಂದುಕೊಂಡಿದ್ದೆವು. ಪ್ರಶಸ್ತಿ ಸಿಕ್ಕ ಮೇಲೆ ನಮ್ಮೆಲ್ಲಾ ಕಷ್ಟಗಳು ತೀರುತ್ತವೆ ಎಂದು. ಆದರೆ ಹಾಗಾಗಲಿಲ್ಲ. ನಾವು ಬಹಳ ಬಡವರು. ವಾಸವಿರುವ ಮನೆ ಕೂಡಾ ಭದ್ರವಾಗಿಲ್ಲ. ಆಗಾಗ ಕುಸಿದು ಬೀಳುತ್ತಲೇ ಇರುತ್ತದೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ನಂತರ ನಮ್ಮ ಬದುಕು ಬದಲಾಗಬೇಕಿತ್ತು. ಆದರೆ ಆಗ ಪ್ರಶಸ್ತಿ ಮತ್ತು ಸ್ವಾಗತ ಬಿಟ್ಟರೆ ಬೇರೆ ಏನೂ ಸಿಗಲಿಲ್ಲ. ಸಹಾಯಕ್ಕಾಗಿ ಬಹಳ ಪ್ರಯತ್ನ ಪಟ್ಟೆವು. ಯಾವುದೂ ಈಡೇರಲಿಲ್ಲ. ಇವತ್ತಿಗೂ ನಮಗೆ ಒಳ್ಳೆಯ ಮನೆ ಇಲ್ಲ. ಇದ್ದ ಮನೆ ಬೀಳುತ್ತಲೇ ಇದೆ. ಮನೆ ಭದ್ರವಾಗಿಲ್ಲದಿದ್ದರೂ, ಅಂದು ರಾಷ್ಟ್ರಪತಿಗಳಿಂದ ಪಡೆದುಕೊಂಡ ಮೆಡಲ್‌, ಪ್ರಶಸ್ತಿ ಪತ್ರ ಎಲ್ಲವನ್ನೂ ಭದ್ರವಾಗಿ ಇಟ್ಟಿದ್ದೇನೆ.

-ನಿಮ್ಮ ಕಸುಬಿನ ಬಗೆಗೆ ಹೆಮ್ಮೆ ಮೂಡಿದ ಕ್ಷಣ ಯಾವುದು?
ರಾಷ್ಟ್ರಪ್ರಶಸ್ತಿ ಪಡೆದಿದ್ದು ಒಂದು ಹೆಮ್ಮೆಯ ಕ್ಷಣ. ಅದಲ್ಲದೆ, ಕೆಲ ವರ್ಷಗಳ ಹಿಂದೆ ಮುಂಬೈನ ಪ್ರತಿಷ್ಠಿತ ತಾಜ್‌ ಹೋಟೆಲ್‌ನಲ್ಲಿರುವ ಪಾದರಕ್ಷೆ ಮಳಿಗೆಯೊಂದರಿಂದ ಖ್ಯಾತ ಕ್ರಿಕೆಟ್‌ ಪಟು ಸಚಿನ್‌ ತೆಂಡೂಲ್ಕರ್‌ ನಾನು ತಯಾರಿಸಿದ ಕೊಲ್ಲಾಪುರಿ ಚಪ್ಪಲಿ ಖರೀದಿ ಮಾಡಿದ್ದು ಧನ್ಯತೆ ಮೂಡಿಸಿದ ಕ್ಷಣಗಳಲ್ಲೊಂದು.

-ಕೊಲ್ಲಾಪುರಿ ಪಾದರಕ್ಷೆ ತಯಾರಿಯ ಹಿಂದಿನ ನಿಮ್ಮ ಸೀಕ್ರೆಟ್‌ ಏನು?
ನಾನು ಕಂಡಂತೆ ಈಗೀಗ ಪಾದರಕ್ಷೆ ಉದ್ಯಮದಲ್ಲಿರುವ ಬಹುತೇಕ ಕುಶಲಕರ್ಮಿಗಳು ಯಂತ್ರದ ಮೂಲಕವೇ ಕೊಲ್ಲಾಪುರಿ ಚಪ್ಪಲಿ ತಯಾರು ಮಾಡುತ್ತಿದ್ದಾರೆ. ಆದರೆ ನಾವು ಮಾತ್ರ ಈಗಲೂ ಕೈ ಹೊಲಿಗೆಯಿಂದಲೇ ಚಪ್ಪಲಿ ತಯಾರು ಮಾಡುತ್ತೇವೆ. ಅವರು ದಿನಕ್ಕೆ 60 ರಿಂದ 70 ಚಪ್ಪಲಿ ತಯಾರು ಮಾಡಿದರೆ ನಾವು ಎರಡು ದಿನಕ್ಕೆ 2ರಿಂದ ಮೂರು ಚಪ್ಪಲಿ ಮಾಡುತ್ತೇವೆ. ಕೈನಿಂದ ಮಾಡುವುದರಿಂದ ಕುಸುರಿಗಾರಿಕೆ ಮತ್ತು ಗ್ರಾಹಕರೊಂದಿಗೆ ಒಂದು ಆಪ್ತತೆ ಬೆಳೆಯುತ್ತದೆ. ಅಲ್ಲದೆ, ಇದರಿಂದ ನಾವು ತಯಾರಿಸುವ ಚಪ್ಪಲಿಯ ಬಾಳಿಕೆಯೂ ಹೆಚ್ಚು.

-ನಿಮ್ಮ ಕಸುಬನ್ನು ನಿಮ್ಮ ಮುಂದಿನ ಪೀಳಿಗೆಗೂ ದಾಟಿಸುವ ಇಚ್ಛೆ ನಿಮಗಿದೆಯೇ?
ಮುರಿದುಬಿದ್ದ ಛಾವಣಿ. ಇಕ್ಕಟ್ಟಾದ ಮನೆ ದ್ವಾರ. ಇದೆಲ್ಲಾ ನೋಡಿದಾಗ ನಾವು ಅನುಭವಿಸಿದ್ದು ನಮಗೇ ಇರಲಿ. ಮಕ್ಕಳು ಚೆನ್ನಾಗಿರಲಿ ಎಂದೆನಿಸುತ್ತದೆ. ಅಲ್ಲದೆ ಅವರಿಗೆ ಈ ಉದ್ಯಮದಲ್ಲಿ ಮುಂದುವರಿಯಲು ಆಸಕ್ತಿಯೂ ಇಲ್ಲ.

ನಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಚಪ್ಪಲಿ ತಯಾರಿಕೆ ಉದ್ಯಮವನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ವಾರದ ಕೊನೆ ಬಂತೆಂದರೆ ಕಾರ್ಮಿಕರಿಗೆ ವೇತನ ಕೊಡುವ ಚಿಂತೆ. ಇದರಿಂದಾಗಿ, ನಮಗೆ ಈ ಉದ್ಯೋಗದಲ್ಲಿರುವ ಆಸಕ್ತಿ ಈಗ ನಮ್ಮ ಮಕ್ಕಳಲ್ಲಿ ಇಲ್ಲ. ಇದರಲ್ಲಿ ಲಾಭ ಇಲ್ಲ ಎನ್ನುವ ಕಾರಣಕ್ಕೆ ಮಕ್ಕಳು ಬೇರೆ ವೃತ್ತಿಗಳತ್ತ ಒಲವು ತೋರಿಸುತ್ತಿದ್ದಾರೆ. ನಾವೂ ಸಹ ಅದನ್ನು ಬೇಡ ಎನ್ನಲಾಗುತ್ತಿಲ್ಲ. ಆ ಬಗ್ಗೆ ಬೇಸರವಿದೆ. ಆದರೆ ಅದು ಅನಿವಾರ್ಯ.
-ಅವಿನಾಶ ಮಾನೆ, ಚರ್ಮೋದ್ಯಮಿ, ನಿಪ್ಪಾಣಿ

ಭೌಗೋಳಿಕ ಸೂಚಕ ಮಾನ್ಯತೆ ದೊರೆತಿದ್ದು ಸಂತಸದ ಸಂಗತಿ. ಇದರಿಂದ ಕೊಲ್ಲಾಪುರಿ ಚಪ್ಪಲಿ ಮಾರುಕಟ್ಟೆಗೆ ಎಷ್ಟು ಪ್ರಯೋಜನವಾಗುತ್ತದೋ ಗೊತ್ತಿಲ್ಲ. ನಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ಇದು ನಮ್ಮ ರಕ್ತದಾಗ ಹುಟ್ಟಿದ ಉದ್ಯೋಗ. ಸರಕಾರದಿಂದ ಏನೂ ಅನುದಾನ ಇಲ್ಲ. ಅದು ಸಿಗುವಂತಿದ್ದರೆ ಚೆನ್ನಾಗಿತ್ತು.
-ಬಾಪುಸೋ ಅಭ್ಯಂಕರ, ಚರ್ಮೋದ್ಯಮಿ, ಮದಭಾವಿ, ಅಥಣಿ

ಸಂದರ್ಶನ - ಲೇಖನ: ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next