ಉಡುಪಿ: ಜಿಲ್ಲೆಯ ವ್ಯಾಪ್ತಿಯೊಳಗೆ ಉಡುಪಿ ಮಲ್ಲಿಗೆಯನ್ನು ಬೆಳೆಸುತ್ತಿರುವ ಎಲ್ಲ ರೈತರಿಗೆ “ಜಿಯೋಗ್ರಫಿಕಲ್ ಇಂಡಿಕೇಶನ್’ (ಜಿಐ) ಮಾನ್ಯತೆ ಬರಲಿದೆ.
ಪ್ರಸ್ತುತ ಉಡುಪಿ ಜಿಲ್ಲಾ ಕೃಷಿಕ ಸಂಘದ ಉಡುಪಿ ಮಲ್ಲಿಗೆ ಬೆಳೆಗಾರರ ಸಂಘದಲ್ಲಿ ನೋಂದಣಿಗೊಂಡ 50 ಬೆಳೆಗಾರರಿಗೆ ಮಾತ್ರ ಜಿಐ ಸಿಕ್ಕಿದೆ. ಆದರೆ ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಉಡುಪಿ ಮಲ್ಲಿಗೆಯನ್ನು ಬೆಳೆಸುವ ಸುಮಾರು 10,000 ಕೃಷಿಕರು ಇದ್ದಾರೆ. ಜಿಐ ಮಾನ್ಯತೆ ಸಿಗದೆ ಇದ್ದರೆ ಇವರು ತಮ್ಮ ಬೆಳೆಯನ್ನು ಉಡುಪಿ ಮಲ್ಲಿಗೆ ಎಂದು ಮಾರಾಟ ಮಾಡುವಂತಿಲ್ಲ. ಇದು ಒಂಥರ ಪೇಟೆಂಟ್ ಇದ್ದಂತೆ. ಈ ಕಾನೂನು ಮುರಿದು ಉಡುಪಿ ಮಲ್ಲಿಗೆ ಎಂದು ಮಾರಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಅವಕಾಶಗಳಿವೆ.
ಈಗ ಕೃಷಿಕ ಸಂಘದವರು ನೋಂದಣಿಯಾಗದ ಉಡುಪಿ ಜಿಲ್ಲೆಯ ಮಲ್ಲಿಗೆ ಬೆಳೆಗಾರರ ಬೆಳೆಗೆ ಜಿಐ ಮಾನ್ಯತೆ ಕೊಡಿಸಲು ಮುಂದಾಗಿದ್ದಾರೆ. ಜಿಐ ಪ್ರಮಾಣಪತ್ರ ಕೊಡುವ ಪ್ರಾಧಿಕಾರ ಚೆನ್ನೈನಲ್ಲಿದ್ದು ಅವರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಾಧಿಕಾರದವರು ಉಡುಪಿ ಜಿಲ್ಲೆಯ ಎಲ್ಲ ಉಡುಪಿ ಮಲ್ಲಿಗೆ ಬೆಳೆಗಾರರಿಗೆ ಪ್ರಮಾಣಪತ್ರ ನೀಡಲು ಒಪ್ಪಿಗೆ ನೀಡಿದ್ದಾರೆ.
ಸದ್ಯ ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಐಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನವರು ಯಾವುದೇ ಸೇವಾ ಶುಲ್ಕವನ್ನು ವಿಧಿಸದೆ ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೈಬರ್ ಸೆಂಟರ್‌ಗಳಲ್ಲಿ ಜಿಐಗೆ ನೋಂದಣಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.
ಪ್ರಮಾಣಪತ್ರ ನೀಡುವ ಜಿಐ ಪ್ರಾಧಿಕಾರಕ್ಕೆ 10 ರೂ. ಶುಲ್ಕ ನೀಡಬೇಕು. ಈ ಶುಲ್ಕವನ್ನು ಈಗ ಪಡೆಯಲಾಗುತ್ತಿದೆ. ಮುಂದೆ ಸುಮಾರು 15 ದಿನಗಳಲ್ಲಿ ಸೈಬರ್ ಸೆಂಟರ್‌ಗಳಿಗೆ ಈ ವ್ಯವಸ್ಥೆ ವಿಸ್ತರಿಸಿದರೆ ಮತ್ತೆ 10-15 ರೂ. ಸೇವಾ ಶುಲ್ಕವನ್ನು ವಿಧಿಸಬಹುದು. ಇದು ಉಡುಪಿ ಜಿಲ್ಲೆಯ ಉಡುಪಿ ಮಲ್ಲಿಗೆ ಬೆಳೆಗಾರರಿಗೆ ಮಾತ್ರ ಅನ್ವಯ. ಇತರ ಜಿಲ್ಲೆಯವರು ಉಡುಪಿ ಮಲ್ಲಿಗೆಯನ್ನು ಬೆಳೆಸಿದ್ದರೂ ಅವರು ಉಡುಪಿ ಮಲ್ಲಿಗೆ ಎಂಬ ಹೆಸರಿನಲ್ಲಿ ಮಾರಾಟ ಮಾಡುವುದು ಕಾನೂನುಬಾಹಿರವಾಗುತ್ತದೆ. ಮಂಗಳೂರಿನಲ್ಲಿ ಇದೇ ಮಲ್ಲಿಗೆ ಬೆಳೆಸಿ ಮಂಗಳೂರು ಮಲ್ಲಿಗೆ ಅಥವಾ ಮಲ್ಲಿಗೆ ಎಂದು ಮಾರಾಟ ಮಾಡಬಹುದು.
ಉಡುಪಿ ಜಿಲ್ಲೆಯಲ್ಲಿ ಉಡುಪಿ ಮಲ್ಲಿಗೆ ಬೆಳೆಸುವವರಿಗೆ ಜಿಐ ಮಾನ್ಯತೆ ಕೊಡಿಸುತ್ತಿದ್ದೇವೆ. ಇನ್ನು 15 ದಿನಗಳಲ್ಲಿ ಸೈಬರ್ ಸೆಂಟರ್‌ಗಳಲ್ಲಿ ಈ ವ್ಯವಸ್ಥೆ ಮಾಡುತ್ತಿದ್ದೇವೆ. ಆಗ ಸುಮಾರು 250 ಗ್ರಾಮ ಸಮಿತಿಗಳಲ್ಲಿರುವ ಸುಮಾರು 5,000 ಸದಸ್ಯರು, ಕಾರ್ಯಕರ್ತರು ಬೆಳೆಗಾರರಿಗೆ ನೆರವಾಗುತ್ತಾರೆ.
– ಬಂಟಕಲ್ಲು ರಾಮಕೃಷ್ಣ ಶರ್ಮ,ಅಧ್ಯಕ್ಷರು, ಉಡುಪಿ ಜಿಲ್ಲಾ ಕೃಷಿಕ ಸಂಘ