Advertisement

ಕಾಡಿನಲ್ಲಿ ದೆವ್ವಗಳು!

06:40 PM Jun 19, 2019 | mahesh |

ಶಿರಗುಂಜಿ ಎಂಬ ಊರಲ್ಲಿ ರಾಘು ಎಂಬ ಹುಡುಗನಿದ್ದ. ಅವನು ಏಳನೇ ತರಗತಿಯಲ್ಲಿ ಓದುತ್ತಿದ್ದ. ಅವನು ಓದಿನಲ್ಲಿ ಎಲ್ಲರಿಗಿಂತ ಮುಂದಿದ್ದ. ತನ್ನ ಉತ್ತಮ ಗುಣಗಳಿಂದಲೂ ಅವನು ಆ ಊರಲ್ಲಿ ಮನೆಮಾತಾಗಿದ್ದ. ರಾಘುವಿಗೆ ತನ್ನ ಊರು, ತನ್ನ ಜನ, ತನ್ನ ಪರಿಸರ, ತನ್ನ ಕಾಡು ಎಂದರೆ ತುಂಬಾ ಅಭಿಮಾನ. ಅವನು ಊರಿನ ಹಿರಿಯರಿಗೆ, ಗುರುಗಳಿಗೆ ತುಂಬಾ ಗೌರವ ಕೊಡುತ್ತಿದ್ದನು. ಊರಿನಲ್ಲಿ ಎಲ್ಲರಿಗೂ ಸ್ವತ್ಛತೆ ಬಗ್ಗೆ, ಕಾಡಿನ ಮಹತ್ವದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದನು.

Advertisement

ಊರಿನ ಪಕ್ಕದಲ್ಲಿ ಮೊದಲು ದಟ್ಟವಾದ ಕಾಡು ಇತ್ತು. ಆ ಕಾಡನ್ನು ಕಂಡರೆ ರಾಘುವಿಗೆ ತುಂಬಾ ಪ್ರೀತಿ. ಆದರೆ ಇತ್ತೀಚೆಗೆ ಅರಣ್ಯಗಳ್ಳರ ಕುತಂತ್ರದಿಂದ ಕಾಡಿನಲ್ಲಿ ಮರಗಳ ಸಂಖ್ಯೆ ಕಡಿಮೆಯಾಗತೊಡಗಿತು. ಇದನ್ನು ನೋಡಿ ರಾಘುವಿಗೆ ತುಂಬಾ ಚಿಂತೆಯಾಗತೊಡಗಿತು. ಈ ವಿಚಾರವನ್ನು ಅರಣ್ಯ ರಕ್ಷಕರ ಗಮನಕ್ಕೂ ತಂದನು. ಆದರೆ ಅವರಿಂದಲೂ ಅರಣ್ಯಗಳ್ಳರ ನಿಯಂತ್ರಣ ಸಾಧ್ಯವಾಗಲಿಲ್ಲ. ದಿನ ಕಳೆದಂತೆ ಮರಗಳ ಸಂಖ್ಯೆ ಕಡಿಮೆಯಾಗತೊಡಗಿತು.

ಮರಗಳನ್ನು ರಕ್ಷಿಸಲು ರಾಘು ತನ್ನ ಗೆಳೆಯರ ಜೊತೆ ಸೇರಿ ಒಂದು ತಂತ್ರ ಹೂಡಿದನು. ಕಾಡಿನಲ್ಲಿರುವ ಬೆಲೆಬಾಳುವ ಮರಗಳನ್ನು ಗುರುತಿಸಿ, ಅವುಗಳ ಬಳಿ ಪುಟ್ಟ ಸ್ಪೀಕರ್‌ಗಳನ್ನು ಅಡಗಿಸಿದರು. ಮರಗಳ್ಳರು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಮರ ಕತ್ತರಿಸಲು ಬರುತ್ತಿದ್ದರು; ಅದೇ ವೇಳೆಯಲ್ಲಿ ರಾಘು ತನ್ನ ಸ್ನೇಹಿತರ ಸಹಾಯದಿಂದ ಮನೆಯಿಂದಲೇ ಸ್ಪೀಕರ್‌ ಮೂಲಕ ದೆವ್ವಗಳು ಕೂಗಾಡುವ ರೀತಿಯ ಧ್ವನಿಯಲ್ಲಿ ಕೂಗಿದರು. ದನಿ ಕೇಳಿ ಭಯಗೊಂಡ ಮರಗಳ್ಳರು ದಿಕ್ಕಾಪಾಲಾಗಿ ಓಡಿದರು. ಕಾಡಿನಲ್ಲಿ ದೆವ್ವ ಇರುವ ಗಾಳಿಸುದ್ದಿ ಊರೆಲ್ಲಾ ಹರಡಿತು. ಆವತ್ತಿನಿಂದ ಕಳ್ಳರು ಕಾಡಿಗೆ ಮುತ್ತಿಗೆ ಹಾಕುವುದನ್ನು ಬಿಟ್ಟರು. ಮರಗಳು ಉಳಿದವು.

– ಬಾಲು ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next