ಲಕ್ನೋ: ಆರೋಪಿಗಳಿಗೆ ತಕ್ಕ ಪಾಠ ಕಲಿಸಲು ಉತ್ತರಪ್ರದೇಶದಲ್ಲಿ ಪೊಲೀಸರು ಎನ್ ಕೌಂಟರ್, ಆರೋಪಿಗಳ ಮನೆಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಿದ್ದರೂ ಕೂಡಾ ಕ್ರಿಮಿನಲ್ ಗಳಿಗೆ ಭಯ ಹುಟ್ಟಿದಂತಿಲ್ಲ. ಅದಕ್ಕೆ ಪೂರಕ ಎಂಬಂತೆ ವೇಗವಾಗಿ ಚಲಿಸುತ್ತಿದ್ದ ಕಾರಿನ ಕಿಟಕಿ ಮೂಲಕ ಪಿಸ್ತೂಲ್ ಅನ್ನು ತೋರಿಸುತ್ತಾ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಸೆರೆಯಾಯ್ತು…
ಕಾರಿನ ವಿಂಡೋ ಸೀಟ್ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬ ಪಿಸ್ತೂಲ್ ಅನ್ನು ಕಿಟಕಿ ಮೂಲಕ ಪ್ರದರ್ಶಿಸುತ್ತಾ ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಘಟನೆಯನ್ನು ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಕಾರಿನ ಚಾಲಕ ವಿಡಿಯೋ ಚಿತ್ರೀಕರಣ ಮಾಡಿರುವುದಾಗಿ ವರದಿ ತಿಳಿಸಿದೆ.
ಈ ಘಟನೆ ಘಾಜಿಯಾಬಾದ್ ನ ಸಿದ್ಧಾರ್ಥ್ ವಿಹಾರ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ನವೆಂಬರ್ 17ರಂದು ನಡೆದಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಇದು ರಾಜ್ಯದ ಕಾನೂನು ಸುವ್ಯವಸ್ಥೆ ಅಣಕಿಸುವಂತಹ ಘಟನೆ ಎಂದು ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ವಿಡಿಯೋ ವೈರಲ್ ಆದ ನಂತರ ಉತ್ತರಪ್ರದೇಶ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಕಾರನ್ನು ಪತ್ತೆ ಹಚ್ಚಿ, ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಘಟನೆ ಕುರಿತಂತೆ ಕಾರನ್ನು ವಶಕ್ಕೆ ಪಡೆದಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಘಾಜಿಯಾಬಾದ್ ಡಿಸಿಪಿ ತಿಳಿಸಿರುವುದಾಗಿ ವರದಿ ಹೇಳಿದೆ.