ಮಹಾರಾಷ್ಟ್ರ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಬೆದರಿಕೆ ಇ ಮೇಲ್ ಅನ್ನು ಕಳುಹಿಸಿದ್ದ ಉತ್ತರಪ್ರದೇಶದ ಗಾಜಿಯಾಬಾದ್ ಹುಡುಗ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿರುವ ಸಲ್ಮಾನ್ ಖಾನ್ ಮನೆಯಲ್ಲಿ ಟೈಂ ಬಾಂಬ್ ಇಟ್ಟಿದ್ದು, ಇನ್ನು ಎರಡು ಗಂಟೆಯೊಳಗೆ ಸ್ಫೋಟಗೊಳ್ಳಲಿದೆ ಎಂದು 16 ವರ್ಷದ ಬಾಲಕನೊಬ್ಬ ಮುಂಬೈ ಪೊಲೀಸರಿಗೆ ಇ-ಮೇಲ್ ಮೂಲಕ ತಿಳಿಸಿದ್ದ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಾಂದ್ರಾದಲ್ಲಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ಇನ್ನು ಎರಡು ಗಂಟೆಯೊಳಗೆ ಸ್ಫೋಟ ಸಂಭವಿಸಲಿದೆ. ನಿಮ್ಮ ಸಾಧ್ಯವಾದರೆ ಬಾಂಬ್ ಸ್ಫೋಟ ವಿಫಲಗೊಳಿಸಿ ಎಂದು ಬಾಲಕ ಕಳುಹಿಸಿದ್ದ ಇ ಮೇಲ್ ನಲ್ಲಿ ಬೆದರಿಕೆ ಹಾಕಿದ್ದ ಎಂದು ವರದಿ ತಿಳಿಸಿದೆ.
ಡಿಸೆಂಬರ್ 4ರಂದು ಇ ಮೇಲ್ ರವಾನಿಸಿದ್ದು, ಕೂಡಲೇ ಪೊಲೀಸ್ ಅಧಿಕಾರಿ ಡಾ.ಮನೋಜ್ ಕುಮಾರ್ ಶರ್ಮಾ, ಹೆಚ್ಚು ಪೊಲೀಸ್ ಕಮಿಷನರ್ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಲ್ಮಾನ್ ಖಾನ್ ನಿವಾಸಕ್ಕೆ ದೌಡಾಯಿಸಿ ಶೋಧ ಕಾರ್ಯ ನಡೆಸಿತ್ತು. ಬಳಿಕ ಇದೊಂದು ನಕಲಿ ಬೆದರಿಕೆ ಇ ಮೇಲ್ ಎಂದು ತಿಳಿದು ಬಂದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಶೋಧ ಕಾರ್ಯ ನಡೆಸಿದ ವೇಳೆ ಸಲ್ಮಾನ್ ನಿವಾಸದಲ್ಲಿ ಇರಲಿಲ್ಲವಾಗಿತ್ತು. ಸಲ್ಮಾನ್ ತಂದೆ ಸಲೀಂ, ಸಲ್ಮಾ ಖಾನ್, ಸಹೋದರಿ ಅರ್ಪಿತಾ ಅಪಾರ್ಟ್ ಮೆಂಟ್ ನಲ್ಲಿದ್ದರು. ಅವರನ್ನೆಲ್ಲಾ ಬೇರೆಡೆ ಸ್ಥಳಾಂತರಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿದ್ದರು.
ಬೆದರಿಕೆಯ ಸುಳ್ಳು ಇ ಮೇಲ್ ಕಳುಹಿಸಿದವನ ಜಾಡು ಹಿಡಿದು ತನಿಖೆ ನಡೆಸಿದ ಅಧಿಕಾರಿಗೆ ಉತ್ತರಪ್ರದೇಶದ ಗಾಜಿಯಾಬಾದ್ ನ ಬಾಲಕನ ವಿಳಾಸ ಪತ್ತೆ ಹಚ್ಚಿದ್ದರು. ಅದರಂತೆ ಗಾಜಿಯಾಬಾದ್ ಗೆ ತೆರಳಿದ ಪೊಲೀಸರು ಮನೆಯವರಿಗೆ ವಿಷಯ ತಿಳಿಸಿದ್ದರು. ನಂತರ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಆತ ಬಾಂದ್ರಾ ಪೊಲೀಸ್ ಠಾಣೆಗೆ ಆಗಮಿಸಿದ್ದ ವೇಳೆ ವಶಕ್ಕೆ ಪಡೆದು ಬಾಲಾಪರಾಧಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ಬಾಲಕನ ವಿರುದ್ಧ ಅಂತಿಮ ಆರೋಪ ಪಟ್ಟಿ ಸಲ್ಲಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ