ನೋಯ್ಡಾ : ಅತ್ಯಂತ ಆಘಾತಕಾರಿ ಪ್ರಕರಣವೊಂದರಲ್ಲಿ ಇಲ್ಲಿನ ಮಹಿಳಾ ಟೆಕ್ಕಿಯೊಬ್ಬರು ತನ್ನ 43 ಸಹೋದ್ಯೋಗಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಬಾಸ್ ಸಹಿತ 43 ಸಹೋದ್ಯೋಗಿಗಳು ಆಫೀಸ್ ಕೆಲಸದ ವೇಳೆಯೇ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇಲ್ಲಿನ ಐಟಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಹಿಳೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ.
25 ವರ್ಷ ವಯಸ್ಸಿನ ಈ ಮಹಿಳಾ ಟೆಕ್ಕಿ, ತನ್ನ ಎಫ್ಐಆರ್‌ನಲ್ಲಿ 21 ಸಹೋದ್ಯೋಗಿಗಳನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾಳೆ. ನೋಯ್ಡಾದ ಸೆಕ್ಟರ್ 58ರಲ್ಲಿರುವ ಪೊಲೀಸ್ ಠಾಣೆಯಲ್ಲಿ ಈಕೆಯ ದೂರು ದಾಖಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಇತರ 22 ಮಂದಿಯನ್ನು ಆಕೆಯು ಅಪರಿಚಿತರೆಂದು ಹೇಳಿದ್ದಾಳೆ. ತನಗೆ ಅವರ ಹೆಸರು ತಿಳಿದಿಲ್ಲ ಎಂದು ಹೇಳಿದ್ದಾಳೆ.
2017ರಿಂದಲೇ ತನಗೆ ಆಫೀಸಿನಲ್ಲಿ ಸಹೋದ್ಯೋಗಿಗಳು ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು ಎಂದು ಗಾಜಿಯಾಬಾದ್ ನಿವಾಸಿಯಾಗಿ ಮಹಿಳಾ ಟೆಕ್ಕಿ ಹೇಳಿದ್ದಾರೆ.
ವಾಟ್ಸಾಪ್ ಗ್ರೂಪ್ ನಲ್ಲಿ ನನ್ನ ಬಗ್ಗೆ ಆಕ್ಷೇಪಾರ್ಹ ವಿಷಯಗಳನ್ನು ಸಹೋದ್ಯೋಗಿಗಳು ಹಾಕಿದ್ದಾರೆ. ಕೆಲವರು ತಮ್ಮ ಜತೆಗೆ ಮಲಗಲು ಕೂಡ ಬಲವಂತಪಡಿಸಿದ್ದಾರೆ. ನನ್ನ ಈ ಎಲ್ಲ ದುರಿತಗಳನ್ನು ನಾನು ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೂ ಪತ್ರ ಬರೆದು ತಿಳಿಸಿದ್ದೇನೆ; ಆದರೆ ಏನೂ ಪ್ರಯೋಜನವಾಗಿಲ್ಲ’ ಎಂದು ಮಹಿಳಾ ಟೆಕ್ಕಿ ಹೇಳಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡಿರುವ ನೋಯ್ಡಾ ಪೊಲೀಸರು ಈಗಿನ್ನೂ ಯಾರನ್ನೂ ಬಂಧಿಸಿಲ್ಲ.