ಗಾಜಿಯಾಬಾದ್:ಕೋವಿಡ್ 19 ತಡೆಗಟ್ಟಲು ದೇಶಾದ್ಯಂತ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಕಾಲ ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಮನೆಯಿಂದ ಹೊರಹೋಗುತ್ತಿದ್ದರು. ಆದರೆ ಉತ್ತರಪ್ರದೇಶದ ಗಾಜಿಯಾಬಾದ್ ನ ಈ ವ್ಯಕ್ತಿ ದಿನಸಿ ತರಲು ಹೋಗಿ ಪತ್ನಿ ಜತೆ ಮನೆಗೆ ವಾಪಸ್ ಆಗಿರುವ ಘಟನೆ ನಡೆದಿದೆ.
ಮನೆಗೆ ದಿನಸಿ ತರುವ ಬದಲು ಸಂಗಾತಿ ಜತೆ ಮನೆಗೆ ಬಂದ ಮಗನನ್ನು ಕಂಡು ತಾಯಿ ದಿಗ್ಭ್ರಮೆಗೊಳಗಾಗಿದ್ದರು. ಗುಟ್ಟಾಗಿ ಮದುವೆಯಾಗಿದ್ದ ಮಗನ ಬಗ್ಗೆ ಆಕ್ರೋಶಗೊಂಡ ತಾಯಿ ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ವರದಿ ವಿವರಿಸಿದೆ.
ಮಗನ ವಿರುದ್ಧ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಘಟನೆ ಸಾಹಿಬಾಬಾದ್ ಪ್ರದೇಶದಲ್ಲಿ ನಡೆದಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ನಾನು ಮಗನನ್ನು ದಿನಸಿ ತರುವಂತೆ ಹೇಳಿ ಅಂಗಡಿಗೆ ಕಳುಹಿಸಿದ್ದೆ. ಆದರೆ ಈತ ಪತ್ನಿ ಜತೆ ಮನೆಗೆ ವಾಪಸ್ ಆಗಿದ್ದಾನೆ. ನಾನು ಈ ಮದುವೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ತಾಯಿ ಹೇಳಿರುವುದಾಗಿ ವರದಿ ತಿಳಿಸಿದೆ.
ಗುಡ್ಡು ಎರಡು ತಿಂಗಳ ಹಿಂದೆ ಹರಿದ್ವಾರದ ಆರ್ಯ ಸಮಾಜ್ ಮಂದಿರದಲ್ಲಿ ವಿವಾಹವಾಗಿದ್ದ. ಈ ಯುವ ಜೋಡಿ ಲಾಕ್ ಡೌನ್ ಮುಗಿದ ಬಳಿಕ ಮದುವೆ ಪ್ರಮಾಣಪತ್ರ ಪಡೆಯುವ ವಿಶ್ವಾಸದಲ್ಲಿದ್ದರು. ಲಾಕ್ ಡೌನ್ ನಿಂದಾಗಿ ವಿವಾಹ ಸರ್ಟಿಫಿಕೇಟ್ ಲಭ್ಯವಾಗಲಿಲ್ಲ. ಅಲ್ಲದೇ ಸಾಕ್ಷಿಗಳ ಕೊರತೆಯೂ ಕಾರಣವಾಗಿತ್ತು. ಮತ್ತೆ ಹರಿದ್ವಾರಕ್ಕೆ ಹೋಗಲು ನಿರ್ಧರಿಸಿದ್ದೆ, ಆದರೆ ಲಾಕ್ ಡೌನ್ ನಿಂದಾಗಿ ಅದೂ ಸಾಧ್ಯವಾಗಲಿಲ್ಲ ಎಂದು ಗುಡ್ಡು ತಿಳಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿಯೇ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದ. ಲಾಕ್ ಡೌನ್ ನಿಂದ ದೆಹಲಿಯ ಬಾಡಿಗೆ ಮನೆಯಲ್ಲಿದ್ದ ಪತ್ನಿ ಸವಿತಾಗೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಕೊನೆಗೆ ಪತ್ನಿಯನ್ನು ತಾಯಿ ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾನೆ. ಆದರೆ ಇದೀಗ ತಾಯಿ ಆಕ್ಷೇಪದಿಂದಾಗಿ ನವಜೋಡಿಯ ವಾಸ್ತವ್ಯಕ್ಕೆ ತೊಂದರೆಯಾದ ನಿಟ್ಟಿನಲ್ಲಿ ಸಾಹಿಬಾಬಾದ್ ಪೊಲೀಸರು ದೆಹಲಿಯ ಬಾಡಿಗೆ ಮನೆ ಮಾಲೀಕರಲ್ಲಿ ದಂಪತಿಗೆ ನೆಲೆಯೂರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.