ಘಟಪ್ರಭಾ : ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೊದ ಮಹಿಳೆ ನೀರು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಘಟಪ್ರಭಾ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.
ನೀರು ಪಾಲಾದ ದುರ್ದೈವಿ ಮಹಿಳೆಯನ್ನು ಹಬೀಬಾ ಇಮ್ತಿಯಾಜ್ ಮೋಮಿನ (28) ಎಂದು ಗುರುತಿಸಲಾಗಿದೆ.
ಘಟನೆ : ಮಂಗಳವಾರ ಬೆಳಗ್ಗೆ ಗಂಡ-ಹೆಂಡತಿ ಬಟ್ಟೆ ತೊಳೆಯಲು ಪಟ್ಟಣದ ಹೊರ ವಲಯದ ಕಾಲುವೆಗೆ ಹೋಗಿದ್ದಾರೆ. ಆ ಸಮಯದಲ್ಲಿ ಬಟ್ಟೆ ತೊಳೆಯುತ್ತಿರುವಾಗ ಮಹಿಳೆಯ ಕೈಯಿಂದ ಬಕೇಟ್ ಜಾರಿ ಹೋಗಿದೆ, ಅದನ್ನು ಹಿಡಿಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮಹಿಳೆ ಕಾಲುವೆಗೆ ಬಿದ್ದಿದ್ದಾಳೆ. ಮಹಿಳೆ ಬೀಳುವುದನ್ನು ನೋಡಿದ ಆಕೆಯ ಗಂಡ ತಕ್ಷಣ ಹಿಡಿಯಲು ಹೋಗಿದ್ದಾನೆ. ಆದರೆ ನೀರಿನ ಸೆಳೆತ ಜೋರಾಗಿದ್ದುದರಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.
ಈ ವೇಳೆ ಹೆಂಡತಿ ರಕ್ಷಣೆಗೆ ಹೋದ ಗಂಡನು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಅದೃಷ್ಟವಶಾತ್ ಅದೇ ಜಗದಲ್ಲಿ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ : ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ
ವಿಷಯ ತಿಳಿದ ಕೂಡಲೇ ಘಟಪ್ರಭಾ ಪೊಲೀಸರು ಸ್ಥಳಕ್ಕಾಗಮಿಸಿದ್ದರಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿಯವರ ಸಹಾಯದಿಂದ ಘಟನಾ ಸ್ಥಳದಿಂದ ಸುಮಾರು 500ಮೀ ದೂರದಲ್ಲಿ ಮಹಿಳೆಯ ಶವವನ್ನು ಹುಡುಕಿ ತೆಗೆದಿದ್ದಾರೆ.
ಕಾರ್ಯಾಚರಣೆ ವೇಳೆ ಮಹಿಳಾ ಪಿಎಸ್ಐ ಎಂ.ಸಿ.ಹಿರೇಮಠ, ಕೆ.ಆರ್.ಬಬಲೇಶ್ವರ,ಎಸ್. ಎನ್. ಪತ್ತಾರ, ಹನಮಂತ ಮಲ್ಲಾಡದವರ, ವಿಠ್ಠಲ ಕೋಳಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದರು.