Advertisement

ಬಂದ್‌ಆಗುತ್ತಿವೆ ಹೆದ್ದಾರಿಗಳು; ಸಂಪರ್ಕ ಕಡಿದುಕೊಳ್ಳುತ್ತಿದೆ ಕರಾವಳಿ

02:55 AM Aug 18, 2018 | Team Udayavani |

ಮಂಗಳೂರು: ಕರಾವಳಿಯಿಂದ ಬೆಂಗಳೂರು, ಮೈಸೂರು ಹಾಗೂ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳು ಸಂಪರ್ಕ ಕಡಿದುಕೊಂಡಿದ್ದು, ಜನತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಾಡಿ, ಸಂಪಾಜೆ ಘಾಟಿ ರಸ್ತೆ ಸಂಚಾರ ಸ್ಥಗಿತಗೊಂಡ ಬಳಿಕ ರಾಜ್ಯ ರಾಜಧಾನಿ ಮತ್ತು ಕೊಡಗು ಜಿಲ್ಲೆಗೆ ತೆರಳಲು ಏಕೈಕ ಮಾರ್ಗವಾಗಿದ್ದ ಚಾರ್ಮಾಡಿ ಘಾಟಿಯಲ್ಲಿಯೂ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಇಲ್ಲಿಯೂ ಸಂಚಾರ ಬಂದ್‌ ಆದರೆ ಕರಾವಳಿಯಿಂದ ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರು- ಕೊಡಗು- ಮೈಸೂರು ಭಾಗಕ್ಕೆ ಉಳಿದಿರುವ ಪರ್ಯಾಯ ಮಾರ್ಗ ಕಾರ್ಕಳ- ಮೂಡಿಗೆರೆ ಮಾತ್ರ.

Advertisement

ಜಿಲ್ಲೆಯಿಂದ ಸಾಮಾನ್ಯವಾಗಿ ಶಿರಾಡಿ, ಸಂಪಾಜೆ ಮತ್ತು ಚಾರ್ಮಾಡಿ ಘಾಟಿ ಮೂಲಕ ಬೆಂಗಳೂರಿಗೆ ಪ್ರಯಾಣ. ಆದರೆ ಈಗ ಸಂಪಾಜೆ ಮತ್ತು ಶಿರಾಡಿ ಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿಗೆ ಈಗಿರುವ ಸನಿಹದ ಮಾರ್ಗ ಚಾರ್ಮಾಡಿ. ಇಲ್ಲಿ ಪ್ರಸ್ತುತ ವಾಹನ ದಟ್ಟಣೆ ಹೆಚ್ಚಾಗಿದೆ. ಇಲ್ಲೂ ಮಳೆ ಆಗುತ್ತಿರುವುದರಿಂದ ಗುಡ್ಡ ಕುಸಿತದ ಭೀತಿ ಇದೆ. 

ಮಂಗಳೂರು ಡಿಪೋದಿಂದ ಬೆಂಗಳೂರಿಗೆ ಪ್ರತಿದಿನ 70 ಬಸ್‌ಗಳು ಹಾಗೂ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ 55 ಬಸ್‌ ಗಳು ಸಂಚರಿಸುತ್ತಿದ್ದವು. ಆದರೆ ಈಗ ಬೆಂಗಳೂರಿಗೆ 23 ಸಾಮಾನ್ಯ ಬಸ್‌, 3 ರಾಜ ಹಂಸ ಸಹಿತ 27 ವಾಹನ ಬಿಡಲಾಗುತ್ತಿದೆ. ಮಡಿಕೇರಿ- ಮೈಸೂರು ಕಡೆಗೆ ವಾಹನ ಬಿಡಲಾಗುತ್ತಿಲ್ಲ. ದಿನಕ್ಕೆ 3 ಸಾವಿರಕ್ಕಿಂತ ಹೆಚ್ಚಿದ್ದ ಪ್ರಯಾಣಿಕರ ಸಂಖ್ಯೆ ಒಂದೂವರೆ ಸಾವಿರಕ್ಕೆ ಇಳಿದಿದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್‌ ತಿಳಿಸಿದ್ದಾರೆ.

ಪರ್ಯಾಯ ರಸ್ತೆಗಳು
ಚಾರ್ಮಾಡಿ ರಸ್ತೆಯಲ್ಲಿ ಈಗ ಕೇವಲ ಎಕ್ಸ್‌ಪ್ರೆಸ್‌ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿ ಸಂಚಾರಕ್ಕೆ ಮುಕ್ತವಾಗುವವರೆಗೆ ಮಂಗಳೂರಿನಿಂದ ಬೆಂಗಳೂರು ಸಂಪರ್ಕಿಸಲು ಕಾರ್ಕಳ- ಎಸ್‌.ಕೆ. ಬಾರ್ಡರ್‌, ಕುದುರೆಮುಖ- ಕಳಸ- ಕೊಟ್ಟಿಗೆಹಾರ- ಮೂಡಿಗೆರೆ-ಹಾಸನ (438 ಕಿ.ಮೀ.) ಮೂಲಕವಾಗಿ ಕೆಎಸ್ಸಾರ್ಟಿಸಿ ವೋಲ್ವೋ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ.

ಅನಿವಾರ್ಯ ಸಂದರ್ಭಗಳಲ್ಲಿ ಕೆಲವು ಪರ್ಯಾಯ ಮಾರ್ಗಗಳನ್ನು ಅನುಸರಿಸಿ ಬೆಂಗಳೂರಿಗೆ ಪ್ರಯಾಣಿಸಬಹುದು. ಆದರೆ ಈ ಮಾರ್ಗ ದೂರ ಮತ್ತು ಪ್ರಯಾಸಕರ. ಅವೆಂದರೆ ಮಂಗಳೂರು- ಹೆಬ್ರಿ, ಕುಂದಾಪುರ-ಸಿದ್ಧಾಪುರ- ಬಾಳೆಬರೆ ಮೂಲಕ ಬೆಂಗಳೂರು (550 ಕಿ.ಮೀ.); ಮಂಗಳೂರು- ಕಾರ್ಕಳ- ಹೆಬ್ರಿ-ಸೋಮೇಶ್ವರ – ಆಗುಂಬೆ ಘಾಟಿ- ಶಿವಮೊಗ್ಗ- ಬೆಂಗಳೂರು; (170 ವೀಲ್‌ಬೇಸ್‌ಗಿಂತ ಕಡಿಮೆಯಿರುವ ವಾಹನ ಮಾತ್ರ ಸಂಚಾರ); ಕುಂದಾಪುರ- ಸಿದ್ಧಾಪುರ- ಹೊಸಂಗಡಿ-ಬಾಳೆಬಾರೆ ಘಾಟಿ –  ಮಾಸ್ತಿಕಟ್ಟೆ- ಹೊಸನಗರ- ಆಯನೂರು- ಶಿವಮೊಗ್ಗ  ಮೂಲಕವಾಗಿಯೂ ಬೆಂಗಳೂರಿಗೆ (550 ಕಿ.ಮೀ.) ತಲುಪಬಹುದು.

Advertisement

ನೆಟ್‌ ವರ್ಕ್‌ ಇಲ್ಲದೆ ಪರದಾಟ
ಜಿಲ್ಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳು, ಉದ್ಯೋಗಿಗಳಿದ್ದಾರೆ. ಕೊಡಗಿನಲ್ಲಿ ದ.ಕ. ಮೂಲದ ಹಲವರಿದ್ದಾರೆ. ಈಗ ಸಂಪಾಜೆ ಘಾಟಿ ಬಂದ್‌ ಆಗಿದೆ. ಬದಲಿಯಾಗಿ ಇರುವ ಕಾಡಂಚಿನ ರಸ್ತೆ ಗಳಾದ ಸುಳ್ಯ-ಕಲ್ಲಪಳ್ಳಿ-ಪಾನತ್ತೂರು- ಕರಿಕೆ-ಭಾಗಮಂಡಲ-ಮಡಿಕೇರಿ ಅಥವಾ ಸುಳ್ಯ- ಅರಂತೋಡು- ತೊಡಿಕಾನ-ಪಟ್ಟಿ-ಭಾಗಮಂಡಲ-ಮಡಿಕೇರಿ ರಸ್ತೆಗಳಲ್ಲಿ ಮರ ಬಿದ್ದು ಬ್ಲಾಕ್‌ ಆಗಿದೆ. ‘ಈ ರಸ್ತೆಗಳಲ್ಲಿ ಸಂಚಾರ ಅಸಾಧ್ಯ. ಜೀಪು ಮಾತ್ರ ಕಷ್ಟಪಟ್ಟು ಸಂಚರಿಸಬಹುದು. ಆದರೆ ಈಗ ಅಲ್ಲಲ್ಲಿ ಮರ ಬಿದ್ದಿರುವುದರಿಂದ ಸಂಚಾರ ಅಪಾಯ ಎನ್ನುತ್ತಾರೆ ಸ್ಥಳೀಯ ದುರ್ಗಾಪ್ರಸಾದ್‌.

ಮಡಿಕೇರಿ ಮುಖ್ಯ ನಗರದಲ್ಲಿ ಮಾತ್ರ ವಿದ್ಯುತ್‌ ಸಂಪರ್ಕ ಇದೆ. ಉಳಿದಂತೆ ನೆಟ್ವರ್ಕ್‌ ಇಲ್ಲದೆ, ಮನೆಯವರೊಂದಿಗೆ ಸಂಪರ್ಕಕ್ಕಾಗಿ ಜನ ಪರದಾಡುತ್ತಿದ್ದಾರೆ. ಇರುವ ಪರ್ಯಾಯ ರಸ್ತೆಗಳೂ ಅಲ್ಲಲ್ಲಿ ಮರ ಬಿದ್ದು ಸಂಪರ್ಕ ಕಡಿತಗೊಂಡಿವೆ. 
– ಉಮೇಶ್‌ ದೇವ ಗುತ್ತಿಗಾರು, ಮಡಿಕೇರಿಯಲ್ಲಿರುವ ಸುಳ್ಯ ಮೂಲದ ಉದ್ಯೋಗಿ

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next