ಹೊಸದಿಲ್ಲಿ: ರಾಜ್ಯಸಭಾ ಸಂಸದೆಯೂ ಆಗಿರುವ ಭಾರತದ ಅನುಭವಿ ಬಾಕ್ಸರ್ ಮೇರಿ ಕಾಮ್ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಅತ್ಯಾಚಾರ ಕೃತ್ಯಗಳು ಬೆಳೆಯುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಅವರು ಇದೊಂದು “ನೋವಿನ ಮತ್ತು ಅಸಹಾಯಕ ಬೆಳವಣಿಗೆ’ ಎಂದಿದ್ದಾರೆ. ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ ಅವರೂ ಹೆಚ್ಚುತ್ತಿರುವ ಅಘಾತಕಾರಿ ಬೆಳವಣಿಗೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
2012ರ ನಿರ್ಭಯಾ ಪ್ರಕರಣದ ಬಳಿಕ ಈಗ ಕಥುವಾ, ಉನ್ನಾವೊ ಪ್ರಕರಣಗಳು ಭಾರತದ ಗೌರವವನ್ನು ತಲೆ ತಗ್ಗಿಸುವಂತೆ ಮಾಡಿದೆ. ಜಮ್ಮು-ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಂದಿರುವ ಪ್ರಕರಣ ಮತ್ತು ಉತ್ತರ ಪ್ರದೇಶದ ಉನ್ನಾವೋದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಎ ಕುಲದೀಪ್ ಸಿಂಗ್ ಸೇನ್‌ಗರ್‌ನನ್ನು ಬಂಧಿಸಲಾಗಿರುವ ಸುದ್ದಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಉನ್ನಾವೋ ಸಂತ್ರಸ್ತೆಯ ತಂದೆ ಲಾಕಪ್ ಡೆತ್ ಆಗಿದ್ದು ಪ್ರಕರಣ ತೀವ್ರತೆ ಪಡೆದಿದೆ.
ಕಥುವಾ ಘಟನೆ ಕುರಿತು ಪ್ರತಿಕ್ರಿಯಿಸಿದ ಮೇರಿ ಕಾಮ್, “ಸರಕಾರ ಏನೇ ಮಾಡಿದರೂ ಅದನ್ನು ಸರಿಯೆಂದು ಬಿಂಬಿಸಲಾಗುತ್ತದೆ. ಇದರ ಬಗ್ಗೆ ನನಗಿಂತಲೂ ಅವರಿಗೇ ಹೆಚ್ಚು ಗೊತ್ತು. ಇಂಥ ಪ್ರಕರಣಗಳಿಂದ ತುಂಬಾ ನೋವುಂಟಾಗಿದೆ. ನಾನೊಬ್ಬಳು ಹೆಣ್ಣಾಗಿರುವುದರಿಂದ ಭಾವುಕಳಾಗಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿವಾಸದ ಬಳಿ ಸಂತ್ರಸ್ತೆ ಹುಡುಗಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಉನ್ನಾವೋ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸೈನಾ, “ಬುದ್ಧಿಹೀನ ವ್ಯಕ್ತಿಗಳು ದೇಶದಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡುವಾಗ, ದುಃಖವಾಗುತ್ತದೆ. ಇಂಥ ಭೀಕರ ಕೃತ್ಯಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕ್ರಿಕೆಟಿಗ ಗೌತಮ್ ಗಂಭೀರ್, ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ಆಟಗಾರ್ತಿ ಗ್ವಾಲಾ ಗುಟ್ಟಾ ಅವರೂ ದೇಶದಲ್ಲಿ ಅತ್ಯಾಚಾರದ ಅಘಾತಕಾರಿ ಬೆಳವಣಿಗೆ ಬಗ್ಗೆ ದುಃಖ ತೋಡಿಕೊಂಡಿದ್ದರು.