ನವಿಮುಂಬಯಿ: ಕಾರಣಿಕ ಕ್ಷೇತ್ರವಾಗಿ ಬಿಂಬಿತಗೊಂಡಿರುವ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾ ಲಯದ 15ನೇ ವಾರ್ಷಿಕ ಪ್ರತಿಷ್ಠಾಪನ ದಿನದ ಉತ್ಸವ ಹಾಗೂ ಭಕ್ತಿ ಪ್ರವಚನ ಕಾರ್ಯಕ್ರಮವು ಎ. 1ರಂದು ಶ್ರೀಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಮೂಕಾಂಬಿಕಾ ದೇವಿಗೆ, ಶ್ರೀ ಮಹಾಗಣಪತಿ ದೇವರಿಗೆ ಹಾಗೂ ನಾಗದೇವರಿಗೆ ಪಂಚಾಮೃತ ಅಭಿಷೇಕ, ದೇವಿಗೆ ಪಂಚ ವಿಶಂತಿ ಕಲಶಾಭಿಷೇಕ, ಮಹಾಪೂಜೆ, ಅಲಂಕಾರ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿ ಸಲಾಗಿತ್ತು. ನೂರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ವಿಶ್ವಶಾಂತಿಗಾಗಿ ಮತ್ತು ಶನಿದೋಷ ಪರಿಹಾರಕ್ಕಾಗಿ ಸಾಮೂಹಿಕ ಎಳ್ಳುಗಂಟು ದೀಪೋತ್ಸವ ಹಾಗೂ ಭಕ್ತಿ ಪ್ರವಚನ ಸಪ್ತಾಹದ ಉದ್ಘಾಟನೆ, ಎಳ್ಳುಗಂಟು ದೀಪೋತ್ಸವ, ಭಕ್ತಿ ಪ್ರವಚನವನ್ನು ಆಯೋಜಿಸಲಾಗಿತ್ತು. ಆನಂತರ ಶ್ರೀ ಮೂಕಾಂಬಿಕಾ ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮ, ಮಹಾಪೂಜೆ, ಮಹಾ ರಂಗಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಪ್ರಸಾದವನ್ನು ಆಯೋಜಿಸಲಾಗಿತ್ತು.
ದೇವಾಲಯದ ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯರಿ ಕಾರ್ಕಳ ಅವರ ಪೌರೋಹಿತ್ಯದಲ್ಲಿ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಇವರ ನೇತೃತ್ವದಲ್ಲಿ ಸಹ ಅರ್ಚಕ ಶಶಾಂಕ್ ಭಟ್, ನಾಗರಾಜ್ ಭಟ್, ಅಶೋಕ್ ಭಟ್ ಮೊದಲಾದವರು ಸಹಕರಿಸಿದರು. ಚೆಂಡೆ ವಾದನದಲ್ಲಿ ರತ್ನಾಕರ ಪೂಜಾರಿ, ಗಣೇಶ್ ಶೆಟ್ಟಿ, ರಾಜೇಂದ್ರ ಶೆಟ್ಟಿ ಇವರು ಸಹಕರಿಸಿದರು.
ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪ ಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸಿದರು.