Advertisement

ಘನ್ಸೋಲಿ ಶ್ರೀ ಮೂಕಾಂಬಿಕ ಮಂದಿರ:  ಕಾರ್ತಿಕ ದೀಪೋತ್ಸವ

03:25 PM Nov 07, 2017 | |

ನವಿಮುಂಬಯಿ: ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ ಜ್ಞಾನವೆಂಬ ಬೆಳಕನ್ನು ನೀಡುವುದೇ ದೀಪೋತ್ಸವ. ಕಾರ್ತಿಕ ಮಾಸದ ಹುಣ್ಣಿಮೆಯಂತಹ ಅಜ್ಞಾನವನ್ನು ತೊಲಗಿಸಿ ಜ್ಞಾನವೆಂಬ ಬೆಳಕನ್ನು ದಯಪಾಲಿಸಲು ನಾವು ಇಂದು ಕಾರ್ತಿಕ ದೀಪೋತ್ಸವವನ್ನು ಆಚರಿಸುತ್ತಿದ್ದೇವೆ. ಇದರಿಂದಾಗಿ ನಮಗೆಲ್ಲರಿಗೂ ಜ್ಞಾನವೆಂಬ ಬೆಳಕು ದೊರೆತು ನಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ಲೋಕ ಕಲ್ಯಾಣಕ್ಕಾಗಿ ಆಚರಿಸುವ ಈ ಬೆಳಕಿನ ಉತ್ಸವದಿಂದ ನಮ್ಮಲ್ಲಿ ನಮ್ಮ ದೇಶದಲ್ಲಿ ಇಡೀ ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ಸಂಮೃದ್ಧಿ ನೆಲೆಸಲಿ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೀಪ ಪ್ರಜ್ವಲಿಸಿದ ನಿಮಗೆಲ್ಲರಿಗೂ ಆಯುರಾರೋಗ್ಯ, ಧನ, ಸಂಪತ್ತು ಪ್ರಾಪ್ತಿಯಾಗಲಿ. ಶತ್ರುಭಯ ನಿವಾರಣೆಯಾಗಲಿ. ನಿಮ್ಮ ಸಂಸಾರ ಸುಖಮಯವಾಗಿರಲಿ. ದೇಶದಲ್ಲಿ ಸುಭಿಕ್ಷೆ ನೆಲೆಸಲಿ. ಎಳ್ಳೆಣ್ಣೆಯಿಂದ ಬೆಳಗಿದ ದೀಪದಿಂದ ನಮ್ಮ ಜನ್ಮ ಜನ್ಮದ ಪಾಪ ನಾಶವಾಗಲಿ. ಅದೇ ರೀತಿ ದನದ ತುಪ್ಪದಿಂದ ಬೆಳಗಿಸಿದ ದೀಪದಿಂದ ಆರೋಗ್ಯ ಸಂಪತ್ತು, ಲಕ್ಷ್ಮೀ ಕಟಾಕ್ಷ ಪ್ರಾಪ್ತಿಯಾಗಲಿ ಎಂದು ಶ್ರೀ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ಅವರು ನುಡಿದರು.

Advertisement

ನ. 4ರಂದು ರಾತ್ರಿ ಶ್ರೀ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ನಡೆದ 8ನೇ ವಾರ್ಷಿಕ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವದಿಸಿ ಶುಭ ಹಾರೈಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಸಂಜೆ ಶ್ರೀ ಮೂಕಾಂಬಿಕಾ ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮ ಜರಗಿತು. ರಾತ್ರಿ 7ರಿಂದ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಅನಂತರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೀಪಗಳನ್ನು ಪ್ರಜ್ವಲಿಸಿ ದೀಪೋತ್ಸವವನ್ನು ಆಚರಿಸಿದರು. ರಾತ್ರಿ ದೇವಿಗೆ ಮಹಾಪೂಜೆ, ವಿಶೇಷ  ಮಹಾರಂಗಪೂಜೆ, ಮಹಾಮಂಗಳಾರತಿ ಬೆಳಗಿಸಿ ತೀರ್ಥ-ಪ್ರಸಾದ ವಿತರಿಸಲಾಯಿತು. ಅನಂತರ ಉದ್ಯಮಿ ವಿಜಯ ಕೆ. ಶೆಟ್ಟಿ ಅವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ಅವರ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಗುರುರಾಜ್‌ ಭಟ್‌, ನಾಗರಾಜ್‌ ಭಟ್‌, ಶ್ಯಾಮ್‌ ಭಟ್‌, ಕೃಷ್ಣ ಭಟ್‌ ಮೊದಲಾದವರು ಸಹಕರಿಸಿದರು.

ದೇವಾಲಯ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ದೀಪೋ ತ್ಸವದಲ್ಲಿ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್‌ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಘು ಆರ್‌. ಕೋಟ್ಯಾನ್‌, ಕುಟ್ಟಿ ಎ. ಕುಂದರ್‌, ಸುಧಾಕರ್‌ ಸಿ. ಪೂಜಾರಿ, ವಿಶ್ವನಾಥ್‌ ಎಸ್‌. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ್‌ ಕುರ್ಕಾಲ್‌, ಹರೀಶ್‌ ಪಡುಬಿದ್ರೆ, ಹರೀಶ್‌ ನಲ್ಲೂರು, ಶಕುಂತಳಾ ಎಸ್‌. ಶೆಟ್ಟಿ, ಶ್ರೀ ಮೂಕಾಂಬಿಕಾ ಚಾರಿಟೇಬಲ್‌ ಮಂಡಳ, ಶ್ರೀ ಮೂಕಾಂಬಿಕ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಗಳ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಾವಿರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next