ನವಿಮುಂಬಯಿ, ಅ. 17: ಕಾರಣಿಕ ಕ್ಷೇತ್ರ ಎಂದೇ ಹೆಸರಾಗಿರುವ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 48ನೇ ವಾರ್ಷಿಕ ನವರಾತ್ರಿ ಮಹೋತ್ಸವಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ಚಾಲನೆ ನೀಡಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ದೇವಿಗೆ 25 ಕಲಶ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀ ಮೂಕಾಂಬಿಕಾ ಭಜನ ಮಂಡಳಿಯವರಿಂದ ಭಜನೆ, ರಾತ್ರಿ ಮಹಾಪೂಜೆ, ರಂಗಪೂಜೆ, ಭಕ್ತಾದಿಗಳ ಸರ್ವ ಸೇವೆ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು. ನವರಾತ್ರಿ ಉತ್ಸವದ ದೇವತಾ ಕಾರ್ಯಗಳು ದೇವಾಲಯದ ತಂತ್ರಿವರ್ಯ ವಿದ್ವಾನ್ ರಾಮಚಂದ್ರ ಬಾಯರಿ ಕಾರ್ಕಳ ಮತ್ತು ಪ್ರಧಾನ ಅರ್ಚಕರಾದ ಗುರುಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ಜರಗಿದವು.
ಈ ವರ್ಷ ಕೋವಿಡ್ ಮಹಾಮಾರಿಯಿಂದಾಗಿ ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನವರಾತ್ರಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ಶನಿವಾರ ಬೆಳಗ್ಗೆಯಿಂದ ಸಾಮಾಜಿಕ ಅಂತರ ದೊಂದಿಗೆ ಇತರ ಮಾರ್ಗಸೂಚಿಗಳನ್ನು ಕಾಯ್ದುಕೊಂಡು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ. ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ ಪಿ. ಶೆಟ್ಟಿ, ಸದಸ್ಯರಾದ ರಾಘು ಆರ್. ಕೋಟ್ಯಾನ್, ಕುಟ್ಟಿ ಎ. ಕುಂದರ್, ಶಂಕರ್ ಮೊಲಿ, ಸುಧಾಕರ ಸಿ. ಪೂಜಾರಿ, ವಿಶ್ವನಾಥ ಎಸ್. ಶೆಟ್ಟಿ, ಅಣ್ಣು ಎಂ. ಶೆಟ್ಟಿ, ಶ್ರೀಧರ ಬಿ. ಪೂಜಾರಿ, ಮಹಾಬಲ ಟಿ. ಶೆಟ್ಟಿ, ಹರೀಶ್ ಕುರ್ಕಾಲ್, ಹರೀಶ್ ಪಡುಬಿದ್ರಿ, ಶಕುಂತಳಾ ಎಸ್. ಶೆಟ್ಟಿ ಮತ್ತು ಶ್ರೀ ಮೂಕಾಂಬಿಕಾ ಚಾರಿಟೆಬಲ್ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆ ಯರು ಮೊದಲಾದವರು ಕಾರ್ಯ ಕ್ರಮ ದಲ್ಲಿ ಉಪಸ್ಥಿತರಿದ್ದರು.
ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ : 48ನೇ ವಾರ್ಷಿಕ ನವರಾತ್ರಿ ಮಹೋತ್ಸವದ ನಿಮಿತ್ತ ಅ. 25 ರವರೆಗೆ ಪ್ರತೀ ದಿನ ಬೆಳಗ್ಗೆ ನಿತ್ಯ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ 8 ರಿಂದ ಮಹಾಪೂಜೆ, ರಂಗಪೂಜೆ, ಭಕ್ತಾದಿಗಳ ಸರ್ವ ಸೇವಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಲಿದೆ. ಭಕ್ತಾಧಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕು.