ಬಂಗಾರಪೇಟೆ: ಪ್ರತಿ ದಿನ ಗಾಳಿ, ಬಿಸಿಲು ಹಾಗೂ ಮಳೆ ಎನ್ನದೇ ದಿನದ 10 ಗಂಟೆ ದುಡಿಯುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಉಚಿತ ಸೌಲಭ್ಯ ಹೆಚ್ಚಾಗಿ ಸಿಗುವಂತಾಗಬೇಕು ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾಜಿ ನಿರ್ದೇಶಕಿ ಡಾ.ಮಮತ ಮಾಧವ್ ಹೇಳಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹೊಂಬೆಳಕು ಕಟ್ಟಡ ಕಾರ್ಮಿಕರ ಸಂಘದಿಂದ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಹಾಗೂ ಕಾರ್ಮಿಕರ ಸರ್ಕಾರಿ ಸೌಲಭ್ಯಗಳ ಅರಿವು ಕಾರ್ಯಕ್ರಮ ಉದಾrಟಿಸಿ ಮಾತನಾಡಿದರು.
ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಒಳಿತಿಗಾಗಿ 5500 ಕೋಟಿ ರೂ. ಅನುದಾನವಿದೆ. 12ಕ್ಕೂ ಹೆಚ್ಚು ಅಧಿಕ ಬಡ ಕಾರ್ಮಿಕರ ಯೋಜನೆಗಳು ಜಾರಿಯಲ್ಲಿದೆ. ಈ ಯೋಜನೆಗಳನ್ನು ಚಾಚು ತಪ್ಪದೆ ಪ್ರತಿಯೊಬ್ಬ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿಕಿತ್ಸೆಗೆ ಹಣ: ಕಟ್ಟಡ ಕಾರ್ಮಿಕರಿಗೆ ಅನಿಲ ಭಾಗ್ಯದಡಿ ಗ್ಯಾಸ್ ಸಂಪರ್ಕ, ಒಳರೋಗಿ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಧನ 300 ರಿಂದ 10000 ರೂ., ಫಲಾನುಭವಿಯ ಪ್ರಮುಖ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಸಹಾಯಧನ, ಉದಾಹರಣೆಗೆ ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಜೋಡಣೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶದ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತದ ಪ್ರಕರಣಗಳು, ಪಿತ್ತಕೋಶದ ತೊಂದರೆ ಹಾಗೂ ಇನ್ನೂ ಅನೇಕ ಚಿಕಿತ್ಸೆಗಳಿಗೆ 2 ಲಕ್ಷ ರೂ. ವರೆಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಯಾವುದಕ್ಕೆ ಸಿಗುತ್ತೆ ಸಹಾಯ ಧನ: ಕೆಲಸ ಮಾಡುತ್ತಿದ್ದಾಗ ಅಥವಾ ಕೆಲಸದ ಸ್ಥಳದಿಂದ ಮನೆಗೆ ಹೋಗುವಾಗ ಅಥವಾ ಮನೆಯಿಂದ ಕೆಲಸಕ್ಕೆ ಹೋಗುವ ಮಾರ್ಗದಲ್ಲಿ ಅಪಘಾತ ಉಂಟಾಗಿ ಫಲಾನುಭವಿ ತೀರಿಕೊಂಡಲ್ಲಿ ಅಥವಾ ಶಾಶ್ವತ ಅಂಗವಿಕಲರಾದರೆ 5 ಲಕ್ಷ ರೂ. ಕಟ್ಟಡ ಕಾರ್ಮಿಕರು ಮರಣ ಹೊಂದಿದರೆ, ಅವರ ಅಂತ್ಯಕ್ರಿಯೆಗಾಗಿ ಮತ್ತು ಮೃತನ ಕುಟುಂಬಕ್ಕೆ ಅನುಗ್ರಹ ಧನ ಸೌಲಭ್ಯ 4 ಸಾವಿರ ರೂ. ನೀಡಲಾಗುತ್ತದೆ ಎಂದು ಹೇಳಿದರು.
ಮಕ್ಕಳ ಓದಿಗೂ ಹಣ: ಕುಷ್ಠರೋಗ, ಕ್ಯಾನ್ಸರ್, ಪಾರ್ಶ್ವವಾಯು ಇತ್ಯಾದಿ ಕಾಯಿಲೆಗಳಿಂದ ಶಾಶ್ವತ ಅಂಗವಿಕಲತೆ ಹೊಂದಿದರೆ 50 ಸಾವಿರ ರೂ., ಪಿಂಚಣಿ ಒಂದು ಸಾವಿರ ರೂ. ಹಾಗೂ ಅಂಗವಿಕಲತೆ ಪ್ರಮಾಣ ಆಧರಿಸಿ, ಸಹಾಯಧನ 1 ಲಕ್ಷ ರೂ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ (2 ಮಕ್ಕಳಿಗೆ ಮಾತ್ರ) ಸಹಾಯಧನ, 1, 2, 3, 4, 5, 6 ತರಗತಿಗಳಲ್ಲಿ ಉತ್ತೀರ್ಣರಾದವರಿಗೆ 2 ರಿಂದ 3 ಸಾವಿರ ರೂ., 7 ಮತ್ತು 8ನೇ ತರಗತಿಯಲ್ಲಿ 4 ಸಾವಿರ ರೂ., 9 ಮತ್ತು 10 ಹಾಗೂ ಪ್ರಥಮ ಪಿ.ಯು.ಸಿ ಉತ್ತೀರ್ಣರಾದವರಿಗೆ 6 ಸಾವಿರ ರೂ., ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 8 ಸಾವಿರ ರೂ., ಐಟಿಐ ಮತ್ತು ಡಿಪ್ಲೊಮಾ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7 ಸಾವಿರ ರೂ., ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.
ದಾಖಲೆ ಸರ್ಕಾರಕ್ಕೆ ಸಲ್ಲಿಸಿ: ಪ್ರತಿಭಾವಂತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯಧನ, ಒಂದು ವರ್ಷ ಪೂರ್ಣಗೊಂಡ ನೋಂದಾಯಿತಿ ಕಾರ್ಮಿಕರಿಗೆ 50 ಸಾವಿರ ರೂ., ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಭತ್ಯೆ ಸೌಲಭ್ಯ 39 ಸಾವಿರ ರೂ. ಹೀಗೆ ಇನ್ನೂ ಅನೇಕ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಆದರೆ, ಫಲಾನುಭವಿಗಳ ಹತ್ತಿರ ಸಂಪೂರ್ಣ ದಾಖಲೆಗಳನ್ನು ಸರ್ಕಾರಕ್ಕೆ ಸರಿಯಾದ ಸಮಯಕ್ಕೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಹುಟ್ಟು ಹಬ್ಬ ಆಚರಣೆ: ಇದೇ ವೇಳೆ ಕೇಕ್ ಕತ್ತರಿಸುವ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾಜಿ ನಿರ್ದೇಶಕಿ ಡಾ.ಮಮತ ಮಾಧವ್ ಹುಟ್ಟುಹಬ್ಬ ಆಚರಿಸಲಾಯಿತು. ನಂತರ ಅನಾಥಶ್ರಮದಲ್ಲಿ ಅನ್ನದಾನ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹೊಂಬೆಳಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಭರತ್, ಪುರಸಭೆ ಸದಸ್ಯ ಕಪಾಲಿ, ಚಿಕ್ಕವಲಗಮಾದಿ ಗ್ರಾಪಂ ಸದಸ್ಯೆ ವಿಜಯಲಕ್ಷ್ಮೀ, ಮಾವಹಳ್ಳಿ ಗ್ರಾಪಂ ಉಪಾಧ್ಯಕ್ಷ ಮಂಜುನಾಥ, ಹುಲಿಬೆಲೆ ಗ್ರಾಪಂ ಸದಸ್ಯೆ ಲಲಿತಾ, ತಾತ್ಯೇಗೌಡ, ಬನಹಳ್ಳಿ ಚಲಪತಿ, ಸರೋಜಮ್ಮ, ಪಿಚ್ಚಹಳ್ಳಿ ಪೃಥ್ವಿ ಮುಂತಾದವರು ಭಾಗವಹಿಸಿದ್ದರು.