Advertisement

ಜಿಲ್ಲೆಯ ಸಮಸ್ಯೆಗೆ ಸಿಗುತ್ತಾ ಪರಿಹಾರ?

01:50 PM Aug 02, 2018 | |

ಬೀದರ: ನಿರೀಕ್ಷೆಯಂತೆ ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ ಅವರಿಗೆ ಜಿಲ್ಲಾ ಉಸ್ತುವಾರಿ ಹೊಣೆ ದೊರೆತಿದ್ದು, ನನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ವಿವಿಧ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ.

Advertisement

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಎರಡನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಮೊದಲ ಸಲ ಕೃಷಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಖಾಶೆಂಪುರ ತಮ್ಮ ಕಾರ್ಯಗಳ ಮೂಲಕವೇ ರಾಜ್ಯದ
ಗಮನ ಸೆಳೆದಿದ್ದರು. ಹಾಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಾರಿಯೂ ಮಹತ್ವದ ಸಹಕಾರ ಖಾತೆ ನೀಡಿದ್ದಾರೆ. ಇದೀಗ ಬೀದರ ಜಿಲ್ಲಾ ಉಸ್ತುವಾರಿಯೂ ದೊರೆತ್ತಿದ್ದು, ಜಿಲ್ಲೆಯಲ್ಲಿ ಕೆಲಸ ಮಾಡಲು ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ.

ಕಬ್ಬು ಬೆಳೆಗಾರರ ಸಂಕಷ್ಟ: ವರ್ಷಪೂರ್ತಿ ಬೆಳೆಸಿದ ಕಬ್ಬನ್ನು ಕಾರ್ಖಾನೆಗೆ ಸಾಗಿಸಿದ ರೈತ ಸಂಕಷ್ಟಕ್ಕಿಡಾಗಿದ್ದು, ತನಗೆ ಸೇರಬೇಕಾದ ಹಣಕ್ಕಾಗಿ ಪರಿತಪಿಸುವ ಪರಿಸ್ಥಿತಿ ಬಂದಿದೆ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಟನ್‌ಗೆ 2200 ರೂ. ನೀಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಿದ್ದರು. ಆದರೆ, ಸುಮಾರು 60 ಕೋಟಿಗೂ ಅಧಿಕ ಹಣ ಜಿಲ್ಲೆಯ ನಾಲ್ಕು ಕಾರ್ಖಾನೆಗಳು ಬಾಕಿ ಇರಿಸಿಕೊಂಡಿವೆ.

ಟನ್‌ ಕಬ್ಬಿಗೆ 1900 ರೂ. ನೀಡಲು ಸಹ ಕಾರ್ಖಾನೆಗಳು ಸಿದ್ಧವಿಲ್ಲ. ಸದ್ಯ, ಜಿಲ್ಲಾಡಳಿತ ಕಾರ್ಖಾನೆಗಳ ಗೋದಾಮಿನಲ್ಲಿದ್ದ ಸಕ್ಕರೆ ವಶಪಡಿಸಿಕೊಂಡಿದ್ದು, ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ಪಾವತಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಜಪ್ತಿ ಮಾಡಿಕೊಂಡ ಸಕ್ಕರೆಗಿಂತ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಹಣ ಹೆಚ್ಚಿದೆ. ಹಾಗಾಗಿ, ರೈತರು ತೀವ್ರ ಆತಂಕಕ್ಕೀಡಾಗಿದ್ದು, ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಬಾಕಿ ಇರಿಸಿಕೊಂಡ ಕಾರ್ಖಾನೆಗಳು ಪ್ರಭಾವಿ ನಾಯಕರಿಗೆ ಸೇರಿವೆ. ಇಂಥ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ.

ಜಿಲ್ಲಾ ಸಂಕೀರ್ಣ: ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆವರ ಅವಧಿಯಲ್ಲಿ ಮಂಜೂರಾದ ಜಿಲ್ಲಾ ಆಡಳಿತದ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಸ್ಥಳದ ವಿವಾದವೂ ಸದ್ಯ ಬಗೆಹರಿದತ್ತಿದೆ. ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕವೇ ಜಾಗ ಗುರುತಿಸಲಾಗಿದೆ. ಕಾಮಗಾರಿ ಆರಂಭಿಸುವುದಷ್ಟೇ ಬಾಕಿ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲಿ ಸಂಕೀರ್ಣ ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ತೆಗೆದುಕೊಳ್ಳುವರೇ ಎಂದು ಕಾಯ್ದು ನೋಡಬೇಕಿದೆ.

Advertisement

ಜಿಲ್ಲಾಸ್ಪತ್ರೆ: ಬಹುಕೋಟಿ ವೆಚ್ಚದ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವರದಿಗಳು ಮೇಲಿಂದ ಮೇಲೆ ಬರುತ್ತಿವೆ. ಆದರೆ, ಕ್ರಮ ಮಾತ್ರ ಆಗುತ್ತಿಲ್ಲ. ಸಾಕಷ್ಟು ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಈಗಾಗಲೇ 8 ಜನ ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಕಾಲೇಜು ಸ್ಥಾಪನೆ: ಸದ್ಯ ಜಿಲ್ಲೆಗೆ ಮಂಜೂರಾದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭಿಸುವ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡಬೇಕಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಸಿಪೆಟ್‌ ಸಂಸ್ಥೆ ಸ್ಥಾಪನಗೆ ಒಪ್ಪಿಗೆ ಸೂಚಿಸಿದ್ದು, ನೂರು ಎಕರೆ ಭೂಮಿ ಬೇಡಿಕೆ ಇರಿಸಿದೆ. ಸರ್ಕಾರದ ಮಟ್ಟದಲ್ಲಿ ಭೂಮಿ ಒದಗಿಸುವ ಕೆಲಸ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಾಗಿದೆ.

ಪ್ರವಾಸಿ ತಾಣ: ಬಸವಕಲ್ಯಾಣದಲ್ಲಿ 650 ಕೋಟಿ ರೂ. ಅನುದಾನದಲ್ಲಿ ಅನುಭವ ಮಂಟಪ ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಹೆಚ್ಚಿನ ಅನುದಾನ ತಂದು ಕಟ್ಟಡ ಕಾರ್ಯ ಪ್ರಾರಂಭಿಸಬೇಕು. ಅಲ್ಲದೇ ಬಸವಕಲ್ಯಾಣದಲ್ಲಿ ಅನೇಕ ಶರಣರ ಸ್ಮಾರಕಗಳು, ಕೋಟೆ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿದ್ದು, ಅವಗಳ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ಅಲ್ಲದೇ ಜಿಲ್ಲೆಯಲ್ಲಿ ಕಾರಂಜಾ ಜಲಾಶಯವನ್ನು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡುವ ಕೆಲಸ ಕೂಡ ನಡೆಬೇಕಾಗಿದೆ.

ಉದ್ಯೋಗ: ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ಎರಡು ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ಉಪಕರಣ ಉತ್ಪನ್ನ ಘಟಕ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಪ್ರಾರಂಭಕ್ಕೆ ಕೂಡಲೇ ಚಾಲನೆ ನೀಡಬೇಕಾಗಿದೆ. ಅಲ್ಲದೇ ದೊಡ್ಡ ಕಾರ್ಖಾನೆ ಸ್ಥಾಪನೆಗೆ ಮುಂದಾಗುವ ಮೂಲಕ ಜಿಲ್ಲೆಯ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಸಾರ್ವಜನಿಕರು. 

ಜಿಲ್ಲೆಯ ಏಕೈಕ ನೀರಾವರಿ ಯೋಜನೆ ಕಾರಂಜಾ ನೀರಾವರಿ ಯೋಜನೆ ಮಾತ್ರ ಐದು ದಶಕವಾಗುತ್ತಿದ್ದರೂ ಇಂದಿಗೂ ಪೂರ್ಣಗೊಂಡಿಲ್ಲ. ರೈತರ ಜಮೀನಿಗೆ ನೀರು ಹರಿದಾಗಲೇ ಯೋಜನೆ ಯಶಸ್ವಿಯಾಗುತ್ತದೆ. ಸಿದ್ದರಾಮಯ್ಯ ಅವರು ಮಂಡಿಸಿದ ಕಡೇ ಬಜೆಟ್‌ನಲ್ಲಿ ಕಾರಂಜಾಗೆ 453 ಕೋಟಿ ರೂ. ಕಾಯ್ದಿರಿಸಲಾಗಿದೆ. ಯೋಜನೆ ಪೂರ್ಣ ಪ್ರಮಾಣದಲ್ಲಿ
ಯಶಸ್ವಿಯಾಗಿ ಮುಗಿಸುವ ಮೂಲಕ ರೈತರ ಬಾಳು ಹಸನುಮಾಡಬೇಕಿದೆ.

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next