Advertisement
ಹಲವು ವಿವಾದ ಹಾಗೂ ಗಡುವುಗಳನ್ನು ಎದುರಿಸುತ್ತ ಸಾಕಷ್ಟು ಸುದ್ದಿಯಾಗಿದ್ದ ಪಂಪ್‌ವೆಲ್ ಫ್ಲೈಓವರ್ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು, ಪಡೀಲ್ ಅಂಡರ್‌ಪಾಸ್ ಯಾವಾಗ ಮುಗಿಯಲಿದೆ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿತ್ತು. ಸದ್ಯ ಕಾಮಗಾರಿ ನಡೆಯುತ್ತಿರುವ ರೀತಿಯನ್ನು ನೋಡುವುದಾದರೆ ಫೆಬ್ರವರಿ ತಿಂಗಳೊಳಗೆ ಪಡೀಲ್ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ಸದ್ಯ ಪಡೀಲ್ ಅಂಡರ್‌ಪಾಸ್‌ನ ಶೇ.90ರಷ್ಟು ಕಾಮಗಾರಿ ಪೂರ್ಣವಾಗಿದೆ. ಅಂಡರ್‌ಪಾಸ್‌ನ ಒಳಭಾಗದಲ್ಲಿ ಪೈಂಟಿಂಗ್ ಕೆಲಸ ನಡೆಯುತ್ತಿದೆ. ಜತೆಗೆ, ಅಂಡರ್‌ಪಾಸ್ ಮುಂಭಾಗ ಕಮಾನು ಮಾದರಿಯನ್ನು ಸದ್ಯ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭ ವಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗಿನ ಕಾಮಗಾರಿಯನ್ನು ರೈಲ್ವೇ ಇಲಾಖೆ ಮಾಡಿದ್ದು, ಮುಂದೆ ಅಂಡರ್‌ಪಾಸ್‌ಗೆ ಹೆದ್ದಾರಿ ಸಂಪರ್ಕ ಕಾಮಗಾರಿಯನ್ನು ಹೆದ್ದಾರಿ ಇಲಾಖೆ ನಡೆಸಲಿರುವುದರಿಂದ ಕೆಲವೇ ದಿನಗಳಲ್ಲಿ ಕಾಮಗಾರಿ ಜವಾಬ್ದಾರಿ ಹೆದ್ದಾರಿ ಇಲಾಖೆಯ ಹೆಗಲೇರಲಿದೆ. ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಸಭೆ ನಡೆಸಿ, ರೈಲ್ವೇ ಇಲಾಖೆಯಿಂದ ಹೆದ್ದಾರಿ ಇಲಾಖೆಗೆ ಕಾಮಗಾರಿಗಾಗಿ ವಹಿಸಿ ಕೊಡುವ ಬಗ್ಗೆ ಸೂಚನೆ ನೀಡಲಾಗಿತ್ತು. ಹೆದ್ದಾರಿ ಇಲಾಖೆಯು ರೈಲ್ವೇ ಇಲಾಖೆಗೆ ಪತ್ರ ಬರೆದಿದೆ. ಇಲಾಖೆಗಳ ವಾದ- ವಿವಾದದಿಂದ ಸಮಸ್ಯೆ!
ಅಂಡರ್‌ಪಾಸ್ ನಿರ್ಮಾಣ ಕಾಮ ಗಾರಿಗೆ ಒಟ್ಟು 6 ಕೋಟಿ ರೂ. ವೆಚ್ಚ. “ಬಾಕ್ಸ್’ ಮಾದರಿಯ ಕಾಂಕ್ರೀಟ್ ಬ್ರಿಡ್ಜ್ ನಿರ್ಮಿಸಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿ ಮುಗಿದು ಹಲವು ತಿಂಗಳು ಕಳೆದಿವೆ. ಆದರೆ ಆ ಬಳಿಕ ಕೆಲಸ ನಿಧಾನವಾಗಲು ಆರಂಭವಾಯಿತು. ಒಪ್ಪಂದದ ಪ್ರಕಾರ; ಮಳೆ ನೀರು ಹರಿದು ಹೋಗಲು ಓಪನ್ ಡ್ರೈನೇಜ್ ನಿರ್ಮಾಣ, ಮರ, ವಿದ್ಯುತ್ ಕಂಬ ತೆರವು ರೈಲ್ವೇ ಇಲಾಖೆ ಮಾಡಬೇಕಿತ್ತು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾದವಾಗಿತ್ತು. ಆದರೆ, ಈ ಎಲ್ಲ ಕೆಲಸಗಳನ್ನು ಹೆದ್ದಾರಿ ಇಲಾಖೆ ಮಾಡಬೇಕು ಎಂಬುದು ರೈಲ್ವೇ ಇಲಾಖೆಯ ಪ್ರತಿವಾದವಾಗಿತ್ತು. ಈ ವಾದ-ಪ್ರತಿವಾದವೇ ಕಾಮಗಾರಿ ನಿಧಾನವಾಗಲು ಕಾರಣವಾಯಿತು. ಸದ್ಯ ಸ್ಥಳದಲ್ಲಿದ್ದ ಬೃಹತ್ ಮರಗಳನ್ನು ಹೆದ್ದಾರಿ ಇಲಾಖೆ ವಿಲೇವಾರಿ ಮಾಡಿದ್ದು, ವಿದ್ಯುತ್ ಕಂಬಳನ್ನೂ ತೆರವು ಮಾಡಲಾಗಿದೆ.
Related Articles
ಈ ಮಧ್ಯೆ, ವಾಹನಗಳು ನಿತ್ಯ ಸಂಚಾರ ನಡೆಸುತ್ತಿರುವ ಪಡೀಲ್‌ನ ಮೊದಲ ಅಂಡರ್‌ಪಾಸ್ ಸದ್ಯ ನಿರ್ವಹಣೆ ಇಲ್ಲದೆ ಸೊರಗಿದೆ. ಇನ್ನೊಂದು ಅಂಡರ್‌ಪಾಸ್ ನಿರ್ಮಾಣವಾಗದ ಕಾರಣದಿಂದ ಅಲ್ಲಿಯವರೆಗೆ ಏಕ ಮುಖ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ವಾಹನಗಳ ಎಡೆಬಿಡದ ಸಂಚಾರದಿಂದ ಅಂಡರ್‌ಪಾಸ್ ಸಮಸ್ಯೆಗಳಿಗೆ ಸಿಲುಕಿದೆ. ಡಾಮರು ಎದ್ದು ಹೋಗಿ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಇತ್ತೀಚೆಗೆ ಪ್ಯಾಚ್‌ವರ್ಕ್ ಮಾಡಿದ್ದರೂ ಅರೆಬರೆ ಕಾಮಗಾರಿ ನಡೆದಿದೆ. ಇಲ್ಲಿ ಸರಿಯಾದ ಚರಂಡಿ ನಿರ್ಮಿಸದೆ ಮಳೆಗಾಲದಲ್ಲಿ ಸೇತುವೆಯೊಳಗೆ ಹಲವು ಅಡಿಗಳಷ್ಟು ನೀರು ನಿಲ್ಲುತ್ತದೆ.
Advertisement
5.50 ಮೀ. ಎತ್ತರದ ಅಂಡರ್ಪಾಸ್ರಾ.ಹೆ.75ರ ಪಡೀಲ್‌ನಲ್ಲಿ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹೊಸ ರೈಲ್ವೇ ಕೆಳಸೇತುವೆಯ ಪಕ್ಕದಲ್ಲೇ ಹಳೆಯ ಕೆಳಸೇತುವೆಯನ್ನು ಸುಸಜ್ಜಿತ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಂಡಿಯನ್ ರೋಡ್ಸ್ ಕಾಂಗ್ರೆಸ್(ಐಆರ್‌ಸಿ) ನಿಯಮದಂತೆ 5.50 ಮೀ. ಎತ್ತರದಲ್ಲಿ ಹಾಗೂ ಸುಮಾರು 14 ಮೀ. ಅಗಲದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಆರ್‌ಟಿಒ ನಿಯಮದಂತೆ ಕಂಟೈನರ್ ಸಹಿತ ಒಂದು ವಾಹನವು ಗರಿಷ್ಠ 4.8 ಮೀ. ಎತ್ತರವನ್ನು ಮಾತ್ರ ಹೊಂದಿರಬಹುದಾಗಿದೆ ಎಂಬುದು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ. ಪಾದಚಾರಿಗಳಿಗೆ ಸಂಚರಿಸಲು ಅನುವಾಗುವಂತೆ ಹೊಸ ಅಂಡರ್‌ಪಾಸ್‌ನಲ್ಲಿ ಸೌಕರ್ಯವಿದೆ. ಮಳೆ ನೀರು ನಿಲ್ಲದಂತೆ, ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ಚರಂಡಿ ಕಾಮಗಾರಿ ಮಾಡಲಾಗಿದೆ. ರೈಲ್ವೇ ಕೆಲಸ ಮುಗಿದ ತತ್‌ಕ್ಷಣ ರಸ್ತೆ ನಿರ್ಮಾಣ
ರೈಲ್ವೇ ಇಲಾಖೆಯ ಕಾಮಗಾರಿ ಮುಗಿದ ತತ್‌ಕ್ಷಣವೇ ಅಂಡರ್‌ಪಾಸ್ ಸಂಪರ್ಕದ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಈ ಸಂಬಂಧ ರೈಲ್ವೇ ಇಲಾಖೆಗೆ ಪ್ರಾಧಿಕಾರದಿಂದ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ಸಂಚಾರಕ್ಕೆ ಅನುವಾಗುವಂತೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಶಿಶು ಮೋಹನ್, ಯೋಜನ ನಿರ್ದೇಶಕರು,ರಾ.ಹೆ. ಪ್ರಾಧಿಕಾರ-ಮಂಗಳೂರು