Advertisement

ಸಿದ್ಧವಾಗುತ್ತಿದೆ ಹೊಸ ಶೈಕ್ಷಣಿಕ ದಿನಗಳ ಮಾರ್ಗಸೂಚಿ

03:09 PM Jun 24, 2020 | mahesh |

ಬೆಂಗಳೂರು: ಶಾಲೆ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿ ಸರಿದೂಗಿಸಲು ದಸರಾ ರಜೆ ಮತ್ತು ಶನಿವಾರದ ರಜೆಗೆ ಕತ್ತರಿ ಪ್ರಯೋಗ ನಡೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್‌ ಅಂತ್ಯದವರೆಗೂ ಶಾಲಾರಂಭದ ನಿರ್ಧಾರವನ್ನು ಸರ್ಕಾರ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ನಡೆಸಿರುವ ಪಾಲಕ, ಪೋಷಕರ ಮತ್ತು ಶಾಲಾಭಿವೃದ್ಧಿ ಹಾಗೂ
ಮೇಲುಸ್ತುವಾರಿ ಸಮಿತಿ ಸಭೆಯಲ್ಲೂ ಶಾಲಾರಂಭ ಸದ್ಯಕ್ಕೆ ಬೇಡ ಎಂಬ ಆಗ್ರಹವನ್ನೇ ಪಾಲಕ, ಪೋಷಕರು ಇಲಾಖೆ ಮುಂದಿಟ್ಟಿದ್ದಾರೆ. ಇಲಾಖೆಯೂ ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಶೈಕ್ಷಣಿಕ ವರ್ಷದ ಆರಂಭಕ್ಕೂ ಪೂರ್ವದಲ್ಲೇ ಮಾರ್ಗಸೂಚಿ ಸಿದ್ಧಪಡಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ.

Advertisement

2019 -20ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿ ಮೇ 29ರಿಂದ ಆರಂಭಗೊಂಡು ಅ.5ರ ತನಕ ನಡೆದಿತ್ತು. ನಂತರ ಅ.6ರಿಂದ 20ರವರೆಗೆ (15ದಿನ) ದಸರಾ ರಜೆ ನೀಡಲಾ ಗಿತ್ತು. ಅ.21  ರಿಂದ ಪುನರ್‌ ಆರಂಭಗೊಂಡ ಶಾಲಾ ತರಗತಿಗಳು ಏ.11  ರವರೆಗೆ ನಡೆಯಬೇಕಿತ್ತು. ಕೋವಿಡ್ ದಿಂದಾಗಿ ಏಪ್ರಿಲ್‌ ಮತ್ತು ಮಾರ್ಚ್‌ ತಿಂಗಳ ತರಗತಿ ಸರಿಯಾಗಿ ನಡೆದಿಲ್ಲ.

ಏ.12ರಿಂದ ಆರಂಭವಾಗಬೇಕಿದ್ದ ಬೇಸಿಗೆ ರಜೆ ಕೋವಿಡ್ ಹೊಡೆತಕ್ಕೆ ಮಾರ್ಚ್‌ ಕೊನೇ ವಾರದಿಂದಲೇ ಘೋಷಣೆ  ಯಾಗಿತ್ತು. 2019-20ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆದಿದೆ. ಪರೀಕ್ಷೆ ಮಾತ್ರ ನಡೆಸಲು ಸಾಧ್ಯವಾಗಿರಲಿಲ್ಲ. 2020-21ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿಯೇ ವಿಳಂಬವಾಗುವುದರಿಂದ ಪರ್ಯಾಯ ಮಾರ್ಗಸೂಚಿಯನ್ನು ಇಲಾಖೆ ಸಿದ್ಧಪಡಿಸುತ್ತಿದೆ.

ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮೊದಲ ಅವಧಿ, ದಸರಾ ರಜೆ(ಮಧ್ಯಂತರ ರಜೆ), 2ನೇ ಅವಧಿ ಹಾಗೂ ಬೇಸಿಗೆ ರಜೆ, ವಿವೇಚನಾ ರಜೆ ಸಹಿತವಾಗಿ ಪಟ್ಟಿ ಸಿದ್ಧವಾಗುತ್ತಿತ್ತು. ಆದರೆ, 2020-21ನೇ ಸಾಲಿನ ಮಾರ್ಗಸೂಚಿಯಲ್ಲಿ ಸ್ವಲ್ಪ ಮಾರ್ಪಾಡು ಮಾಡುವ ಸಂಬಂಧ ರಾಜ್ಯ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಿದೆ ಹಾಗೂ ಹೊಸ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರತಿ ವರ್ಷ 12 ತಿಂಗಳಲ್ಲಿ 318 ಶೈಕ್ಷಣಿಕ ದಿನ ಲಭ್ಯವಾಗುತ್ತಿದ್ದು, ಅದರಲ್ಲಿ 65 ರಜೆ ದಿನಗಳಿದ್ದವು. ಜತೆಗೆ 4 ವಿವೇಚನಾ ರಜಾ ದಿನ ( ಸ್ಥಳೀಯ ಆಚರಣೆ ಅಥವಾ ಜಯಂತಿಗೆ ಸಂಬಂಧಿಸಿದ್ದು) ಸಿಗುತ್ತಿದ್ದವು. ರಜಾ ದಿನಗಳನ್ನು ಕಳೆದು 250 ದಿನ ಶೈಕ್ಷಣಿಕ ತರಗತಿ ನಡೆಯುತ್ತಿದ್ದವು. ಈ ವರ್ಷ ಈಗಾಗಲೇ ಜೂನ್‌ ಕಳೆದು ಹೋಗಿದೆ, ಜುಲೈ-ಆಗಸ್ಟ್‌ನಲ್ಲಿ ಶಾಲೆ ಆರಂಭಿಸಬಹುದಾದ ಪರಿಸ್ಥಿತಿಯಿಲ್ಲ. ಹೀಗಾಗಿ ಸೆಪ್ಟೆಂಬರ್‌ ನಂತರ(ಪ್ರಾಥಮಿಕ, ಪೂರ್ವ ಪ್ರಾಥಮಿಕ ಹೊರತು ಪಡಿಸಿ) ಶಾಲೆ ಆರಂಭವಾದರೂ, ಅಕ್ಟೋಬರ್‌ನಲ್ಲಿ ದಸರಾ ರಜೆ ಇರುವುದಿಲ್ಲ ಅಥವಾ 4-5 ದಿನಕ್ಕೆ ಸೀಮಿತಗೊಳಿಸುವ ಸಾಧ್ಯತೆಯಿದೆ. ಅಲ್ಲದೆ, ಶನಿವಾರದಂದು ಪೂರ್ತಿ ತರಗತಿ ನಡೆಸಿ, ಭಾನುವಾರ ಅರ್ಧದಿನ ರಜೆ ನೀಡುವ ಅಥವಾ ಎರಡು ಭಾನುವಾರಕ್ಕೊಮ್ಮೆ ರಜಾ ನೀಡುವ ಅಥವಾ ಸರ್ಕಾರಿ ರಜೆಗಳ ಪ್ರಮಾಣ ಕಡಿಮೆಗೊಳಿಸುವ ಬಗ್ಗೆಯೂ ಸಮಿತಿ ಚಿಂತನೆ ನಡೆಸುತ್ತಿದ್ದು, ಅತಿ ಶೀಘ್ರದಲ್ಲಿ ವರದಿಯನ್ನು ಇಲಾಖೆಗೆ ಒಪ್ಪಿಸಲಿದೆ. ಸರ್ಕಾರದ ಅನುಮತಿ ನಂತರ ಅನುಷ್ಠಾನಕ್ಕೆ ಬರಲಿದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

2020-21ನೇ ಸಾಲಿನ ಶೈಕ್ಷಣಿಕ ದಿನ ಮತ್ತು ರಜಾ ದಿನಗಳ ಬಗ್ಗೆ ರಾಜ್ಯ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ವರದಿ ಸಿದ್ಧವಾಗುತ್ತಿದೆ. ಯಾವ ರಜೆ ಕಡಿತಗೊಳಿಸಬೇಕು, ತರಗತಿಗಳನ್ನು ಹೇಗೆ ನಡೆಸಬೇಕು ಎಂಬುದನ್ನು ಸಮಿತಿಯೇ ನಿರ್ಧರಿಸಲಿದೆ.
– ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next