ಅಂದು ನನಗೆ ರಜೆ ಇತ್ತು. ಹೀಗಾಗಿ, ಊರಿಗೆ ಹೋಗಬೇಕೆಂದು ರೆಡಿಯಾಗಿದ್ದೆ. ಲಗೇಜ್ ಬಹಳ ಇದ್ದುದರಿಂದ ಆಟೋ ಹಿಡಿದು ಬಸ್ಟಾಪ್‌ಗೆ ಬಂದೆ. ಅಷ್ಟರಲ್ಲಿ ನಮ್ಮೂರಿನ ಬಸ್ಸು ಬಂದು ನಿಂತಿತ್ತು. ನಾನು ಹತ್ತುವಷ್ಟರಲ್ಲಿ ಸೀಟು ಪೂರ್ತಿ ಭರ್ತಿಯಾಗಿದ್ದವು. ಹಿಂದೆ ಒಂದು ಸೀಟು ಖಾಲಿ ಕಾಣಿಸಿತು. ಅಲ್ಲಿ ಹೋಗಿ ಕುಳಿತೆ.
ಮುಂದೆ ಬಬಲೇಶ್ವರಲ್ಲಿ ಇಳಿಯಲು ವಿದ್ಯಾರ್ಥಿಗಳು ಬಹಳ ತುಂಬಿಕೊಂಡದ್ದರಿಂದ, ಉಸಿರಾಡುವುದಕ್ಕೂ ಕಷ್ಟ ಎಂಬ ಪರಿಸ್ಥಿತಿ ಇತ್ತು. ಬಬಲೇಶ್ವರದ ಪಕ್ಕದ ಹಳ್ಳಿಯೇ ನಮ್ಮೂರು. ಆದುದರಿಂದ ಹೇಗಪ್ಪಾ ಈ ಬಸ್ಸಿಂದ ಇಳಿಯುವುದು? ನೋಡನೋಡುತ್ತಿದ್ದಂತೆ ನಮ್ಮ ಊರು ಬಂದೇ ಬಿಟ್ಟಿತು. ನನ್ನ ಪಡಿಪಾಟಲು ನೋಡಲಾರದೆ ಒಬ್ಬ ಹುಡುಗ, “ಈ ಲಗೇಜ್ ತೆಗೆದುಕೊಂಡು ಇಳಿಯಲು ನಿಮಗೆ ಸಾಧ್ಯವಿಲ್ಲ.
ನೀವು ಹೋಗಿ. ನಾನು ಕಿಟಕಿಯಲ್ಲಿ ನಿಮ್ಮ ಬ್ಯಾಗ್ ಕೊಡುತ್ತೇನೆ’ ಎಂದು ಹೇಳಿದ. ಅವನು ಹೇಳಿದ ಹಾಗೆ, ಒಂದು ಬ್ಯಾಗ್ ಅವರಿಗೆ ಕೊಟ್ಟು ಒಂದು ಬ್ಯಾಗ್ ನಾನು ತೆಗೆದುಕೊಂಡು ಹಾಗೂ, ಹೀಗೂ ಹರ ಸಾಹಸ ಮಾಡಿ ಬಸ್ಸು ಇಳಿದೆ. ನಾನು ಕೆಳಗೆ ಇಳಿದ ತಕ್ಷಣ ಬಸ್ಸು ಹೊರಟುಬಿಟ್ಟಿತು. ಕಂಡಕ್ಟರ್‌ಗೆ, “ಸಾರ್, ನನ್ನ ಬ್ಯಾಗ್ ಇದೆ’ ಅಂತ ಜೋರಾಗಿ ಕೂಗಿ ಹೇಳಿದೆ. ಕಂಡಕ್ಟರ್ ಕಿವಿಗೆ ನನ್ನ ಮಾತು ಬೀಳಲಿಲ್ಲ.
ಆಮೇಲೆ ಹೊಳೆಯಿತು. ಆ ಬ್ಯಾಗ್‌ನಲ್ಲಿ ನನ್ನ ಲ್ಯಾಪ್‌ಟಾಪ್ ಇದೆ ಅಂತ. ಕಳವಳ ಹೆಚ್ಚಾಯಿತು. ಅಯ್ಯೋ ದೇವರೆ, ಇದೇನೋ ಆಗೋಯ್ತಲ್ಲ. ಪಾಪಾ, ನನ್ನ ಬ್ಯಾಗ್ ಇಟ್ಟುಕೊಂಡಿದ್ದ ಹುಡುಗ ಕೂಗಿದರೂ, ಆ ಕಂಡಕ್ಟರ್ ಬಸ್ ನಿಲ್ಲಿಸಲಿಲ್ಲ. ಬಸ್ಸು ನನ್ನ ಕಣ್ಣ ಮುಂದೆ ದೂರ ಓಡುತ್ತಿದೆ. ನನಗೆ ಏನೂ ಮಾಡಲಾಗದ ಸ್ಥಿತಿ. ಅದರ ಹಿಂದೆ ಓಡಲೂ ಆಗದು. ಆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಬೈಕ್‌ನಲ್ಲಿ ಬಂದ.
ನನ್ನ ಗಮನಿಸಿದವನೇ ಎಲ್ಲ ಪ್ರಸಂಗಗಳನ್ನು ನೋಟದಲ್ಲೇ ಅರಿತು, ತನ್ನ ಬೈಕ್‌ನಲ್ಲಿ ಬಸ್ ಅನ್ನು ಹಿಂಬಾಲಿಸಿದ. ಮುಂದಿನ ನಿಲ್ದಾಣದಲ್ಲಿ, ಆ ಹುಡುಗನಿಂದ ಬ್ಯಾಗ್ ತೆಗೆದುಕೊಂಡು ಬಂದು ಕೊಟ್ಟರು. ಅವರು ಯಾರು, ನನಗೆ ಬಂದು ಏಕೆ ಸಹಾಯ ಮಾಡಿದರು? ಏನೂ ತಿಳಿಯದು. ಅವರ ಹೆಸರೂ ಕೂಡ ಹೇಳಲಿಲ್ಲ. ಇವರು ಎಲ್ಲೇ ಇದ್ದರೂ ಚೆನ್ನಾಗಿರಲಿ.
* ದೀಪಾ ಮಂಜರಗಿ