ಹಾಸನ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರಕಾರದ ಅನುಮತಿ ಪಡೆಯುವ ದೃಢ ವಿಶ್ವಾಸ ನನಗಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರ ಜತೆ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿದ್ದು ಎಲ್ಲ ವಿಷಯಗಳನ್ನೂ ಚುನಾವಣೆ ಈ ಸಂದರ್ಭದಲ್ಲಿ ಬಹಿರಂಗಪಡಿಸಲು ಆಗದು. ಆದರೆ, ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಳ್ಳುವ ವಿಶ್ವಾಸ ತಮಗಿದೆ ಎಂದರು.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಉದ್ಧಟತನದ ಬಗ್ಗೆ ಚಿಕ್ಕಬಳ್ಳಾಪುರದ ಚುನಾವಣ ಪ್ರಚಾರ ಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಕಾವೇರಿ ಕಣಿವೆ ವ್ಯಾಪ್ತಿಯ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ಆಗ ಮಾತ್ರ ರಾಜ್ಯಕ್ಕೆ ಕಾವೇರಿ ಜಲ ವಿವಾದದಲ್ಲಿ ಆಗಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಸಾಧ್ಯ. ಏ.26 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆ ಮಹತ್ವವಾಗಿದೆ ಎಂದರು.