Advertisement

ವಿದ್ಯಾರ್ಥಿ ಬಸ್‌ಪಾಸ್‌ ಪಡೆಯಲು ಹರಸಾಹಸ

06:37 PM Jan 21, 2021 | Team Udayavani |

ಗಂಗಾವತಿ: ಕೋವಿಡ್ ಮಹಾಮಾರಿ ಭೀತಿ ನಂತರ ಶಾಲಾ-ಕಾಲೇಜುಗಳು ಇದೀಗ ಆರಂಭವಾಗಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೆಎಸ್‌ಆರ್‌ ಟಿಸಿ ಬಸ್‌ಗಳ ಮೂಲಕ ಶಾಲಾ-ಕಾಲೇಜುಗಳಿಗೆ ತೆರಳಲು ಬಸ್‌ಪಾಸ್‌ ನೀಡಲಾಗುತ್ತಿದ್ದು, ಪಾಸ್‌ ಪಡೆಯಲು ವಿದ್ಯಾರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಬೇಕಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಪಾಸ್‌ ಪಡೆಯಲು ಹೊಸದಾಗಿ ಹಲವು ನಿಯಮಗಳನ್ನು ರೂಪಿಸಿದ್ದು, ಸುಲಭವಾಗಿ ಬಸ್‌ಪಾಸ್‌ ಪಡೆಯುತ್ತಿದ್ದ ವಿದ್ಯಾರ್ಥಿಗಳು ಈಗ ಸರಕಾರಿ ಕಚೇರಿಗಳಿಗೆ ಅಲೆದಾಡುವ ಅನಿವಾರ್ಯತೆ ಎದುರಾಗಿದೆ.

Advertisement

ಈ ಮೊದಲು ವಿದ್ಯಾರ್ಥಿಗಳು ತಾವು ಓದುವ ಶಾಲಾ-ಕಾಲೇಜುಗಳ ಮುಖ್ಯ ಗುರುಗಳು ಮತ್ತು ಪ್ರಾಚಾರ್ಯರ ಮೂಲಕ ಬಸ್‌ಪಾಸ್‌ ಪಡೆಯುತ್ತಿದ್ದರು. ಇದೀಗ ಇಂಟರ್ನೆಟ್‌ ಅಂಗಡಿಗಳಲ್ಲಿ ಬಸ್‌ಪಾಸ್‌ಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ನಂತರ ಪುನಃ ಅರ್ಜಿ ಒಂದು ಪ್ರತಿಯನ್ನು ಶಾಲಾ, ಕಾಲೇಜುಗಳಲ್ಲಿ ಸಲ್ಲಿಸಿ 15 ದಿನಗಳವರೆಗೆ ಕಾಯಬೇಕಾದ ಅನಿವಾರ್ಯತೆ ಇದೆ.

ಬಸ್‌ಪಾಸ್‌ ಪಡೆಯಲು ಈ ಮೊದಲು ಶಾಲಾ, ಕಾಲೇಜುಗಳಲ್ಲಿ ವಾಸಸ್ಥಳ ಮತ್ತು ಆಧಾರ ಕಾರ್ಡ್‌ ನೀಡಿ ನಿಗದಿತ ಶುಲ್ಕ ಪಾವತಿಸಿದರೆ ಶಾಲಾ, ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಒಂದೆರಡು ದಿನಗಳಲ್ಲಿ ಬಸ್‌ಪಾಸ್‌ ತಂದು ಕೊಡುತ್ತಿದ್ದರು. ಇದೀಗ ಆನ್‌ಲೈನ್‌ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಮತ್ತು ಪಾಲಕರ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್‌ ಕಾರ್ಡ್‌ನಲ್ಲಿರುವ ಮೊಬೈಲ್‌ ನಂಬರ್‌ಗೆ ಒಟಿಪಿ ಬಂದರೆ ಮಾತ್ರ ಅರ್ಜಿಯನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಸ್ವೀಕರಿಸುತ್ತದೆ. ಇಲ್ಲದಿದ್ದರೆ ಪುನಃ ತಹಶೀಲ್ದಾರ್‌ ಕಚೇರಿ ಅಥವಾ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡುವ ಕಚೇರಿಗೆ ತೆರಳಿ ಹಣ ಮತ್ತು ಸಮಯ ವ್ಯರ್ಥ ಮಾಡಿ ಆಧಾರ ಕಾರ್ಡ್‌ ತಿದ್ದುಪಡಿ ಮಾಡಬೇಕಾಗಿದೆ. ಸಂಬಂಧಿಕರ ಮನೆಯಲ್ಲಿ ವಾಸ ಮಾಡುವ ಪರ ಊರಿನ ವಿದ್ಯಾರ್ಥಿಗಳ ಕಷ್ಟ ಹೇಳತೀರದ್ದಾಗಿದೆ. ಅನ್ಯ ಊರುಗಳಲ್ಲಿರುವ ಆಧಾರ ಕಾರ್ಡ್‌ ವಿಳಾಸ ಪ್ರಸ್ತುತ ವಾಸ ಮಾಡುವ ಊರಿನ ವಿಳಾಸ ಬದಲಾವಣೆಯಾದರೆ ಬಸ್‌ ಪಾಸ್‌ ಸಿಗುವುದಿಲ್ಲ. ಇದರಿಂದ ಶೇ. 30ರಷ್ಟು ವಿದ್ಯಾರ್ಥಿಗಳು ಬಸ್‌ಪಾಸ್‌ ತೊಂದರೆಯಿಂದ ನಿತ್ಯವೂ ಹಣ ಕೊಟ್ಟು ಬರುವಂತಾಗಿದೆ.

ಇದನ್ನೂ ಓದಿ: ಬುಡಕಟ್ಟು ಹಿನ್ನೆಲೆ  ಜಾತಿ ಎಸ್‌ಸಿ-ಎಸ್‌ಟಿ ಮೀಸಲಿಗೆ ಅರ್ಹ: ಪ್ರೊ| ಕೆ.ಎಂ. ಮೈತ್ರಿ 

ಮೊದಲಿದ್ದಂತೆ ಶಾಲಾ, ಕಾಲೇಜುಗಳಲ್ಲೇ ಬಸ್‌ಪಾಸ್‌ ವಿತರಣೆ ವ್ಯವಸ್ಥೆ ಮಾಡಬೇಕು. ಕೋವಿಡ್ ರೋಗದ ಪರಿಣಾಮ ಗ್ರಾಮೀಣ ಜನರು ಹಣಕಾಸಿನ ತೊಂದರೆಯಲ್ಲಿದ್ದು, ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಗೆ, ಪಾಲಕರಿಗೆ ತೊಂದರೆ ಕೊಡಬಾರದು. ಎಲ್ಲ ವಿದ್ಯಾರ್ಥಿ ಸಂಘಟನೆಗಳ ಜತೆಗೂಡಿ ಹೋರಾಟ ನಡೆಸಲಾಗುತ್ತದೆ.

Advertisement

ಗ್ಯಾನೇಶ ಕಡಗದ ವಿದ್ಯಾರ್ಥಿ ಮುಖಂಡರು ಎಸ್‌ಎಫ್‌ಐ

ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next