Advertisement

ನ್ಯಾಯಬೆಲೆ ಅಂಗಡಿಲೂ ಸಿಗುತ್ತೆ ಬಸ್‌, ರೈಲು ಟಿಕೆಟ್‌!

06:05 AM Jan 04, 2018 | Team Udayavani |

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಇನ್ನು ಮುಂದೆ ಸೇವಾ ಸಿಂಧು ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಜೊತೆಗೆ ಬಸ್‌, ರೈಲು, ವಿಮಾನ ಟಿಕೆಟ್‌ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ ಎಸ್ಪಿವಿ) ಏಜೆನ್ಸಿ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಉಚಿತವಾಗಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಿ ಕೊಡಲಾಗುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಯವರಿಗೆ ಆದಾಯ ಬರುತ್ತದೆ. ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಯವರಿಗೆ ನೀಡುವ ಕಮಿಷನ್‌ನನ್ನು ಮೂರು ವರ್ಷಗಳವರೆಗೆ ಸಿಎಸ್ಸಿ ಎಜೆನ್ಸಿಗೆ ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ರಾಜ್ಯದ ಶೇಕಡಾ 80 ರಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಪಡಿತರ ಸೋರಿಕೆ ಕಡಿಮೆಯಾಗಿದೆ. ಇದರಿಂದ ಪ್ರತಿ ತಿಂಗಳು ಸುಮಾರು 50 ಮೆಟ್ರಿಕ್‌ ಟನ್‌ ಆಹಾರ ಧಾನ್ಯ ಉಳಿತಾಯವಾಗುತ್ತಿದೆ ಎಂದರು. ಅಲ್ಲದೇ ಪಿಒಎಸ್‌ (ಪಾುಂಟ್‌ ಆಫ್ ಸೇಲ್‌) ವ್ಯವಸ್ಥೆ ಅಳವಡಿಸಿರುವುದರಿಂದ ರೇಷನ್‌ ಅಂಗಡಿಯವರು ಪಡಿತರದಾರರನ್ನು ಕರೆದು ರೇಷನ್‌ ನೀಡುವಂತಾಗಿದೆ ಎಂದರು.

9 ಲಕ್ಷ ಬೋಗಸ್‌ ಕಾರ್ಡ್‌ ರದ್ದು: ರೇಷನ್‌ ಕಾರ್ಡ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಸುಮಾರು 9 ಲಕ್ಷ ಬೋಗಸ್‌ ಕಾರ್ಡ್‌ ರದ್ದಾಗಿದೆ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಿದೆ.

Advertisement

ಈಗಾಗಲೇ ಆನ್‌ಲೈನ್‌ ಮೂಲಕ ಪಡಿತರ ಚೀಟಿಗಳನ್ನು ವಿತರಿಸುವ ಕಾರ್ಯ ಆರಂಭವಾಗಿದ್ದು, ಈಗ ಬಿಪಿಎಲ್‌, ಎಪಿಎಲ್‌ ಬದಲಿಗೆ ಆದ್ಯತೆ ಕುಟುಂಬ ಮತ್ತು ಆದ್ಯತೆ ರಹಿತ ಕುಟುಂಬ ಎಂದು ವಿಂಗಡಿಸಲಾಗಿದೆ. 1.20 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳನ್ನು ಆದ್ಯತಾ ಕುಟುಂಬಗಳೆಂದು ಪರಿಗಣಿಸಲಾಗಿದೆ. ಸ್ವಂತ ಕಾರ್‌ ಹೊಂದಿದವರು, ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಹಾಗೂ ಏಳು ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವ ಕುಟುಂಬಗಳನ್ನು ಆದ್ಯತಾ ರಹಿತ ಕುಟುಂಬಗಳೆಂದು ಪರಿಗಣಿಸಲಾಗಿದೆ ಎಂದು ಹೇಳಿದರು. ಹೊಸ ಪಡಿತರ ಚೀಟಿಗೆ 15 ಲಕ್ಷ 49 ಸಾವಿರ ಅರ್ಜಿಗಳು ಸಲ್ಲಿಕೆಯಾಗಿತ್ತು. ಅದರಲ್ಲಿ 14 ಲಕ್ಷ 91 ಸಾವಿರ ಅರ್ಜಿಗಳನ್ನು ಫೀಲ್ಡ್‌ ವೆರಿಫಿಕೇಶನ್‌ ಮಾಡಲಾಗಿದೆ.

ಜಿಲ್ಲೆಗಳಿಂದ 13 ಲಕ್ಷ ಅರ್ಜಿಗಳು ಕ್ಲೀಯರ್‌ ಆಗಿ ಬಂದಿದೆ. 26 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿವೆ. 11 ಲಕ್ಷ 7 ಸಾವಿರ 182 ರೇಷನ್‌ ಕಾರ್ಡ್‌ಗಳನ್ನು ನೇರವಾಗಿ ಫ‌ಲಾನುಭವಿಗಳ ಮನೆಗೆ ಕಳುಸಿಕೊಡಲಾಗಿದೆ ಎಂದು ಖಾದರ್‌ ಹೇಳಿದರು.

ಈಗಲೂ ಪಡಿತರ ಚೀಟಿಗಾಗಿ ಆನ್‌ಲೈನ್‌ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಜಿ ಹಾಕಿದವರೂ ಆಹಾರ ಇಲಾಖೆಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿಯ ವಸ್ತುಸ್ಥಿತಿಯ ಮಾಹಿತಿ ಪಡೆಯಬಹುದು ಎಂದರು.

ಪ್ರತ್ಯೇಕ ಆ್ಯಪ್‌: ಆಹಾರ ಇಲಾಖೆಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸಲು ಇಲಾಖೆಯಿಂದ ಪ್ರತ್ಯೇಕ ಆ್ಯಪ್‌ ಬಿಡುಗಡೆಗೊಳಿಸಲಾಗುವುದು. ಅದರಲ್ಲಿ ಇಲಾಖೆಯ ಎಲ್ಲ ಯೋಜನೆಗಳ ಬಗ್ಗೆ ಮಾತಿ ಒದಗಿಸಲಾಗುವುದು ಎಂದು ಹೇಳಿದರು.

ಅನ್ನಭಾಗ್ಯ ನಮ್ಮ ಭಾಗ್ಯ: ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯ ಎಂದು ವಿರೋಧಿಸುತ್ತಿದ್ದ ಬಿಜೆಪಿಯವರು ಯೋಜನೆಯ ಯಶಸ್ಸು ಕಂಡು ಈಗ ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರವೇ ಯೋಜನೆ ಮಾಡಿದ್ದರೆ ಬಿಜೆಪಿ ಆಡಳಿತರುವ ರಾಜ್ಯಗಳಲ್ಲಿ ಯಾಕೆ ಯೋಜನೆ ಅನುಷ್ಠಾನಗೊಳಿಸಿಲ್ಲ ಎಂದು ಖಾದರ್‌ ಪ್ರಶ್ನಿಸಿದರು. ಬಿಜೆಪಿ ಆಡಳಿತರುವ 11 ರಾಜ್ಯಗಳಲ್ಲಿ ಅನ್ನಭಾಗ್ಯ ಯೋಜನೆಯಿಲ್ಲ. ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇದ್ದರೆ ಬಿಜೆಪಿ ಆಡಳಿತರುವ ರಾಜ್ಯಗಳಲ್ಲಿಯೂ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಿ ಎಂದು ಹೇಳಿದರು.

ಮೆಕ್ಕೆಜೋಳ ಖರೀದಿ ಇಲ್ಲ: ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ 2 ಕೆಜಿ ಗೋದಿ ನೀಡಲಾಗುತ್ತಿದೆ. ದಕ್ಷಿ$ಣ ಕರ್ನಾಟಕದಲ್ಲಿ ರಾಗಿ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರ 2300 ರೂಪಾಯಿಗೆ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next