Advertisement
ಶ್ರೀರಾಮನು ವನವಾಸದ ಕಾಲದಲ್ಲಿ ಭರತಭೂಮಿಯ ಅನೇಕ ಜಾಗಗಳನ್ನು ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ್ದಾನೆ. ಅಂಥ ಜಾಗಗಳಲ್ಲಿ ಆಂಧ್ರಪ್ರದೇಶದಲ್ಲಿರುವ ಲೇಪಾಕ್ಷಿಯೂ ಒಂದು. ಸೀತಾಮಾತೆಯನ್ನು ರಾವಣಾಸುರನು, ಪುಷ್ಪಕ ವಿಮಾನದಲ್ಲಿ ಅಪಹರಿಸುವಾಗ ಈ ಸ್ಥಳದ ಮೂಲಕವೇ ಹಾದು ಹೋದ ಎನ್ನುವ ದೃಶ್ಯಾವಳಿ, ರಾಮಾಯಣದ ಒಂದು ರೋಚಕ ಭಾಗ.
Related Articles
Advertisement
ಅದು ಸೀತೆಯ ಹೆಜ್ಜೆ!?: ಇದೇ ಲೇಪಾಕ್ಷಿಯಲ್ಲಿ ಒಂದು ಕಲ್ಲಿನ ಮೇಲೆ ದೊಡ್ಡದಾದ ಒಂದು ಪಾದದ ಗುರುತು ಕಾಣಿಸುತ್ತದೆ. ಅದು ಸೀತಾಮಾತೆಯ ಪಾದದ ಗುರುತು ಎಂಬ ಪ್ರತೀತಿ ಇದೆ. ಇದರಲ್ಲಿ ಸದಾ ಕಾಲವೂ ನೀರು ಜಿನುಗುತ್ತಿರುತ್ತದೆ. ಬಟ್ಟೆಯಿಂದ ಒರೆಸಿದರೂ ನೀರು ಪುನಃ ಜಿನುಗುತ್ತದೆ. ನೀರು ಎಲ್ಲಿಂದ ಬರುತ್ತದೆಂಬುದೇ ಯಾರಿಗೂ ತಿಳಿದಿಲ್ಲವಂತೆ.
ಇಲ್ಲೂ ಇದ್ದಾನೆ, ವಿರೂಪಾಕ್ಷ…: ಆಂಧ್ರಪ್ರದೇಶದಲ್ಲಿರುವ ಈ ಪುಟ್ಟ ಹಳ್ಳಿಯು ತೀರ್ಥಯಾತ್ರೆ ಹಾಗೂ ಉಲ್ಲಾಸ ಪ್ರವಾಸ, ಎರಡಕ್ಕೂ ಹೊಂದುವ ತಾಣ. ಈ ಸ್ಥಳವು ಸ್ಕಂದಪುರಾಣದಲ್ಲೂ ಶೈವರ ದಿವ್ಯಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ. ಇಲ್ಲಿನ ವಿರೂಪಾಕ್ಷ ದೇವಾಲಯವು ಅಚ್ಯುತರಾಯನ ಕಾಲದಲ್ಲಿ ಕಟ್ಟಲ್ಪಟ್ಟು, ಅದ್ಭುತ ಶಿಲ್ಪಗಳ ನೆಲೆವೀಡಾಗಿದೆ. ಇದು ವಿಜಯನಗರ ಶೈಲಿಯ ಅನನ್ಯ ರಚನೆ. ದೇವಾಲಯದ ಮಂಟಪದಲ್ಲಿ ಚೆಂದದ ಕೆತ್ತನೆಗಳಿಂದ ಕೂಡಿದ 64 ಸ್ಥಂಭಗಳಿವೆ.
ಅವುಗಳಲ್ಲಿ ಒಂದು ಸ್ಥಂಭವು ನೆಲದಿಂದ ಸ್ವಲ್ಪ ಮೇಲಕ್ಕೆ ನಿಂತಿರುವುದು ವಿಸ್ಮಯಕಾರಿ. ಒಂದು ಬಟ್ಟೆ ಅಥವಾ ಕಾಗದವನ್ನು ಅದರ ಅಡಿಯಿಂದ ತೂರಿಸಿ, ಮತ್ತೂಂದು ಬದಿಯಿಂದ ಹೊರತೆಗೆಯಬಹುದಾಗಿದೆ. ವಿದೇಶಿಗನೊಬ್ಬನು ಆ ಕಂಬವನ್ನು ಸ್ವಲ್ಪ ಅಲುಗಾಡಿಸಿ, ಅದು ಯಾವ ಆಧಾರದಿಂದ ನಿಂತಿದೆಯೆಂದು ನೋಡುವ ಪ್ರಯತ್ನ ಮಾಡಿದಾಗ, ಅಲ್ಲಿದ್ದ ಅಷ್ಟೂ ಕಂಬಗಳೂ ಅಲುಗಾಡಿದವಂತೆ. ಆತ ಗಾಬರಿಗೊಂಡು ತನ್ನ ಪ್ರಯತ್ನವನ್ನು ಕೈಬಿಟ್ಟ ಕತೆಯನ್ನು ಸ್ಥಳೀಯರಿಂದ ಕೇಳುವಾಗ, ಈ ದೇಗುಲ ರಚನೆ ಬಗ್ಗೆ ಇನ್ನಷ್ಟು ಕುತೂಹಲ ಮೂಡುತ್ತದೆ.
ಇಲ್ಲಿರುವ ದೊಡ್ಡಲಿಂಗದ ಮೇಲೆ ಹಾವಿನ ಹೆಡೆಯು ಕೆತ್ತಲ್ಪಟ್ಟಿದೆ. ಅಷ್ಟು ದೊಡ್ಡ ಗಾತ್ರದ ಆಕೃತಿಯು ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವುದೇ ಒಂದು ವಿಸ್ಮಯ. ಲೇಪಾಕ್ಷಿಯ ಇನ್ನೊಂದು ಪ್ರಸಿದ್ಧ ಕಲಾಕೃತಿಯೆಂದರೆ, ಒಂದೇ ಕಲ್ಲಿನಿಂದ ನಿರ್ಮಿತವಾದ ಬೃಹದಾಕಾರದ ನಂದಿ. ಇದು ಸುಮಾರು 20 ಅಡಿಗಳಷ್ಟು ಎತ್ತರ, 30 ಅಡಿಗಳಷ್ಟು ಉದ್ದದ್ದಾದ ಭವ್ಯ ಕಲಾಕೃತಿ.
ಇದುವೇ ಮಾರ್ಗ…: ಲೇಪಾಕ್ಷಿಯು ಬೆಂಗಳೂರಿನಿಂದ 135 ಕಿ.ಮೀ. ದೂರದಲ್ಲಿದೆ. ಟ್ಯಾಕ್ಸಿಯಲ್ಲಿ 3 ತಾಸಿನ ಪ್ರಯಾಣ. ಬೆಂಗಳೂರಿನಿಂದ ಹಿಂದೂಪುರದವರೆಗೆ ಬಸ್ಸು, ರೈಲಿನ ವ್ಯವಸ್ಥೆ ಇದೆ. ಅಲ್ಲಿಂದ ಲೇಪಾಕ್ಷಿ ಕೇವಲ 12 ಕಿ.ಮೀ.
* ಮೈಥಿಲೀ ರಾಘವನ್