ಪಡುಬಿದ್ರಿ: ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ರಮಣ ಬಡಾವಣೆ ಹಿಂಭಾಗದ ಸುಮಾರು 35 ಸೆಂಟ್ಸ್ ವಿಸ್ತೀರ್ಣದ ಪಡುಹಿತ್ಲು ಕೆರೆಯು ಈಗ ಪಾಳು ಬಿದ್ದಿದೆ. ಇದು ಈಗ ಕೊಳಚೆ ನೀರಿನ ಸಂಗ್ರಹ ತಾಣವಾಗಿ ಮಾರ್ಪಟ್ಟಿದೆ.
ಕಳೆಗಿಡಗಳಿಂದ ತುಂಬಿರುವ ಈ ಕೆರೆಯ ಮಲಿನ ನೀರಿನಿಂದ ಪರಿಸರವೆಲ್ಲ ದುರ್ನಾತ ಬೀರುತ್ತಿದೆ. ಅಲ್ಲದೆ ಕೆರೆಯ ಸುತ್ತಮುತ್ತಲಿನ ಜಮೀನುಗಳೆಲ್ಲ ಹಡಿಲು ಬಿದ್ದಿದ್ದು, ಗಿಡಗಂಟಿಗಳಿಂದ ತುಂಬಿ ಹೋಗಿವೆ. ಇದನ್ನು ತೆರವು ಮಾಡಿ ನೀರು ಸರಾಗವಾಗಿ ಹರಿಯಲು ಪಂಚಾಯತ್ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ಹೊಳೆತ್ತಿ ಸ್ವಚ್ಛಗೊಳಿಸಿದಲ್ಲಿ ಬೀಚ್‌ನತ್ತಲೂ ಇಲ್ಲಿಂದ ನೀರು ಸರಬರಾಜು ಸಾಧ್ಯವೆಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.
ಬ್ಲೂ ಫ್ಲ್ಯಾಗ್ ಬೀಚ್ಗೆ ಶುದ್ಧ ನೀರಿನ ಸರಬರಾಜಿಗಾಗಿ ಕೊಳವೆ ಬಾವಿ ತೋಡಿಕೊಳ್ಳಲು ಜಿಲ್ಲಾಡಳಿತವು ಶ್ರಮಿಸುತ್ತಿದೆ. ಇದಕ್ಕೆ ಪಡುಹಿತ್ಲು ಕೆರೆಯ ಅಭಿವೃದ್ಧಿಯೇ ಪರ್ಯಾಯ ಪರಿಹಾರವಾಗಬಲ್ಲುದು. ಈ ಕೆರೆಯ ಐದಾರು ಕಡೆ ಏತಗಳನ್ನು ಅಳವಡಿಸಿ ಹಿಂದೆ ಕೃಷಿ ಭೂಮಿಗೆ ನೀರು ಹಾಯಿಸಲಾಗುತ್ತಿತ್ತು. ಇಂದು ಅದು ಪಾಳು ಬಿದ್ದಂತಾಗಿದೆ. ಕೆರೆಯ ದುರಸ್ತಿಗಾಗಿ 5 ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಏನು ಪ್ರಯೋಜನವಾಗಿಲ್ಲ. ಇದೀಗ ಬ್ಲೂ ಪ್ಲ್ರಾಗ್ ಬೀಚ್ಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕೆರೆಯನ್ನು ದುರಸ್ತಿ ಪಡಿಸಿ ಸ್ಥಳೀಯ ವಾರ್ಡ್ ಹಾಗೂ ಬೀಚ್ಗೆ ನೀರು ಪೂರೈಸಲು ಕ್ರಮಕೈಗೊಳ್ಳಲಿ ಎಂದು ಸ್ಥಳೀಯರಾದ ಲೋಹಿತಾಕ್ಷ ಸುವರ್ಣ ಹೇಳುತ್ತಾರೆ.
ಇದೇ ಗ್ರಾ. ಪಂ. ವಾರ್ಡ್‌ನಲ್ಲಿನ ಬೀಡಿನಕರೆ ಅಂಗನವಾಡಿ ಮುಂಭಾಗದ ಪ್ರದೇಶವಂತೂ ಕೊಚ್ಚೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಆಹ್ವಾನ ಕೇಂದ್ರವಾಗಿ ಮಾರ್ಪಟ್ಟಿದೆ. ಇದು ಅಂಗನವಾಡಿ ಮಕ್ಕಳು ಹಾಗೂ ಪರಿಸರದ ಜನರ ಅನಾರೋಗ್ಯಕ್ಕೂ ಕಾರಣವಾಗಿದೆ. ಇಲ್ಲಿನ ಪಾಳು ಬಿದ್ದ ಜಮೀನಿನಲ್ಲಿ ನೀರು ಸರಾಗವಾಗಿ ಹರಿಯದೆ ದುರ್ನಾತ ಬೀರುತ್ತಿದೆ. ಈ ಬಗ್ಗೆ ಗ್ರಾ. ಪಂ.ಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಮಕ್ಕಳ ಪಾಲಕರು ದೂರಿದ್ದಾರೆ.
ಬೀದಿ ನಾಯಿ ಹಾವಳಿ ಹಾಗೂ ನಿರುಪಯುಕ್ತ ಬಾವಿ ನೀರು
ಹೆಜಮಾಡಿ ಹಾಗೂ ಪಡುಬಿದ್ರಿ ಗ್ರಾಪಂನ ಗಡಿ ಭಾಗವಾಗಿರುವ ಈ ವಾರ್ಡ್‌ನ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿಗೂ ಕಾರಣವಾಗಿದೆ. ಈ ಭಾಗದ ಕೆಲ ಮನೆಗಳಲ್ಲಿ ಬಾವಿಯಿದ್ದರೂ ಕೆಸರುಮಯವಾಗಿ ಅದರ ನೀರು ಬಳಕೆಗೆ ಅಯೋಗ್ಯವಾಗಿದೆ. ಗ್ರಾ. ಪಂ. ನ ನಳ್ಳಿ ನೀರಿನ ಸಂಪರ್ಕವೇ ಇವರಿಗೆ ಆಧಾರವಾಗಿದೆ.
ಸಮಸ್ಯೆಪರಿಹರಿಸಲಾಗುವುದುಬೀಡಿನಕರೆ ಅಂಗನವಾಡಿ ಬಳಿಯ ಕೊಳಚೆ ನೀರು ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾಪಂ ಸದಸ್ಯರು ವಿವರಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ವಾರದೊಳಗೆ ಕೊಳಚೆ ನೀರು ಸಮಸ್ಯೆ ಪರಿಹರಿಸಲಾಗುವುದು.
-ಪಂಚಾಕ್ಷರಿ ಸ್ವಾಮಿ ಕೆರಿಮಠ, ಪಡುಬಿದ್ರಿ ಗ್ರಾ.ಪಂ. ಪಿಡಿಒ.