Advertisement

ಮನೆಗಳ ಅಂದ ಹೆಚ್ಚಿಸುತ್ತೆ ಅಡಕೆ ಮರದ ಉಪಕರಣ

06:47 AM Dec 30, 2018 | Team Udayavani |

ಬೆಂಗಳೂರು: ರೋಸ್‌ ವುಡ್‌, ಸಾಗವಾನಿ, ಶ್ರೀಗಂಧದಂತೆಯೇ ಈಗ “ಅರೆಕಾ ವುಡ್‌’ನ (ಅಡಕೆ ಮರದ) ಉತ್ಪನ್ನಗಳೂ ಬಂದಿವೆ! ಹೌದು, ಮಲೆನಾಡಿನ ತೋಟಗಳಲ್ಲಿ ಒಣಗಿ ಒಲೆ ಸೇರುತ್ತಿದ್ದ ಅಡಕೆ ಮರಗಳು ಈಗ ಸಿಲಿಕಾನ್‌ ಸಿಟಿಯ ಐಷಾರಾಮಿ ಮನೆಗಳ ಅಂದ ಹೆಚ್ಚಿಸುತ್ತಿವೆ.

Advertisement

ಅದರಲ್ಲೂ ಈಗೀಗ ಅಡಕೆ ಮರದ ಉತ್ಪನ್ನಗಳ ಬಳಕೆ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಈಗಾಗಲೇ ಜೆ.ಪಿ.ನಗರ, ಹಾರೋಹಳ್ಳಿ, ಗಿರಿನಗರದ ಜನತಾ ಬಜಾರ್‌ ಮತ್ತಿತರ ಕಡೆಗಳಲ್ಲಿ ಅಡಕೆ ಮರದಿಂದ ತಯಾರಿಸಿದ ಪೀಠೊಪಕರಣಗಳು, ಪಿಕೆಟ್‌ ಫೆನ್ಸಿಂಗ್‌, ಒಳಾಂಗಣ ವಿನ್ಯಾಸದ ಉತ್ಪನ್ನಗಳು ಆಕರ್ಷಿಸುತ್ತಿವೆ.

ಸಾಗರದ ಶೆಡ್ತಿಕೆರೆಯಲ್ಲಿ ಇಬ್ಬರು ಹುಡುಗರು ಸೇರಿ ಆರಂಭಿಸಿದ ಗ್ರೀನ್‌ಲೀಫ್ ಅಗ್ರೋ ಸಲ್ಯುಷನ್ಸ್‌ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಇಂತಹದ್ದೊಂದು ಪ್ರಯೋಗ ಮಾಡಿದ್ದು, ಅಡಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹೀಗೆ ಉಪ ಉತ್ಪನ್ನಗಳು ಹೊರಬರುತ್ತಿವೆ. ಈ ಉತ್ಪನ್ನಗಳಿಗೆ ಬೆಂಗಳೂರಿನಿಂದ ಅತಿ ಹೆಚ್ಚು ಬೇಡಿಕೆ ಬರುತ್ತಿದ್ದು, ಇದು ಅಡಕೆ ಬೆಳೆಗಾರರಿಗೂ ಆದಾಯ ತಂದುಕೊಡುವ ಹೊಸ ಭರವಸೆ ಮೂಡಿಸಿದೆ. 

ಸಾಮಾನ್ಯವಾಗಿ ತೋಟದಲ್ಲಿ ಬೀಳುವ ಅಥವಾ ಕತ್ತರಿಸುವ ಅಡಕೆ ಮರಗಳು ಅಲ್ಲೇ ಕೊಳೆತು ಮಣ್ಣಾಗುತ್ತವೆ. ಅವುಗಳನ್ನು ಮನೆಗೆ ಹೊತ್ತುತರಲಿಕ್ಕೂ ಕಾರ್ಮಿಕರು ಸಿಗುವುದಿಲ್ಲ. ಸಿಕ್ಕರೂ 300-400 ರೂ. ಕೂಲಿ ಕೊಡಬೇಕು. ಇದೇ ಕಾರಣಕ್ಕೆ ಬೆಳೆಗಾರರು ಅಡಕೆ ಮರಗಳನ್ನು ತೋಟಗಳಲ್ಲೇ ಬಿಡುತ್ತಿದ್ದಾರೆ. ಪ್ರತಿ ವರ್ಷ ಒಂದು ಎಕರೆ ತೋಟದಲ್ಲಿ ಕನಿಷ್ಠ 10-12 ಮರಗಳು ನೆಲಕಚ್ಚುತ್ತವೆ.

ದೇಶದಲ್ಲೇ ಅತಿ ಹೆಚ್ಚು 1.80 ಲಕ್ಷ ಹೆಕ್ಟೇರ್‌ ಅಡಕೆ ಬೆಳೆಯುವ ಪ್ರದೇಶ ಹೊಂದಿರುವ ರಾಜ್ಯದಲ್ಲಿ ಎಕರೆಗೆ ಮೂರು ಮರಗಳ ಲೆಕ್ಕಹಾಕಿದರೂ ವರ್ಷಕ್ಕೆ ಐದು ಲಕ್ಷ ಮರಗಳು ಕೊಳೆಯುತ್ತಿವೆ. ಅದೇ ಮರಗಳನ್ನು ಬಳಸಿ, ಆಧುನಿಕತೆಗೆ ತಕ್ಕಂತೆ ಮೌಲ್ಯವರ್ಧನೆಗೊಳಿಸಿ 10ರಿಂದ 15 ಉತ್ಪನ್ನಗಳನ್ನು ತಯಾರಿಸಬಹುದು. ಈ ನಿಟ್ಟಿನಲ್ಲಿ ನಾವು ಯಶಸ್ವಿಯೂ ಆಗಿದ್ದು, ಬೆಂಗಳೂರಿನಿಂದ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಗ್ರೀನ್‌ ಲೀಫ್ನ ಮುಖ್ಯಸ್ಥ ಎಸ್‌.ವಿ. ಸಂತೋಷ್‌ ಕುಮಾರ್‌ ತಿಳಿಸುತ್ತಾರೆ. 

Advertisement

ಶೀಘ್ರ ಆನ್‌ಲೈನ್‌ ಮಾರುಕಟ್ಟೆ ಪ್ರವೇಶ: ಅಂದಹಾಗೆ, ಬಲಿತು ಹದಗೊಂಡ “ಅರೆಕಾ ವುಡ್‌’ನಿಂದ ತಯಾರಿಸಿದ ಉತ್ಪನ್ನಗಳು ಇತರೆ ವುಡ್‌ನಿಂದ ತಯಾರಿಸಿದ ಉತ್ಪನ್ನಗಳಿಗಿಂತ ಹತ್ತು-ಹದಿನೈದು ವರ್ಷ ಹೆಚ್ಚು ಬಾಳಿಕೆ ಮತ್ತು ಗಟ್ಟಿಮುಟ್ಟಾಗಿರುತ್ತವೆ. ಇದರಿಂದ ತೂಗುಮಣೆ, ಫ‌ರ್ನಿಚರ್‌ಗಳು, ಏಣಿ, ಪಿಕೆಟ್‌ ಫೆನ್ಸಿಂಗ್‌, ಇಂಟೀರಿಯರ್‌ ಡೆಕಾರೇಷನ್‌ಗೆ ಪೂರಕವಾದ ಉತ್ಪನ್ನಗಳನ್ನು ತಯಾರಿಸಬಹುದು.  

ಇನ್ನು ತೋಟದಲ್ಲಿ ಕೊಳೆತು ಬಿದ್ದ ಒಂದು ಮರಕ್ಕೆ ರೈತರಿಗೆ 600ರಿಂದ 800 ರೂ.ವರೆಗೂ ನೀಡುತ್ತೇವೆ. ಅದನ್ನು ಒಣಗಿಸಿ, ಕತ್ತರಿಸಿ ಹಸ್ತಾಂತರಿಸಿದ ಸಾವಿರ ರೂ.ವರೆಗೂ ಸಿಗುತ್ತದೆ. ಒಂದು ಮರದಿಂದ ಕನಿಷ್ಠ 4ರಿಂದ 5 ಸಾವಿರ ರೂ. ಆದಾಯ ಗಳಿಸಬಹುದಾಗಿದೆ. ಮಾರುಕಟ್ಟೆ ಬೆಳೆದಂತೆ ಇದರ ಪ್ರಮಾಣವೂ ಹೆಚ್ಚುತ್ತದೆ. ಕಳೆದ ವರ್ಷ ಒಂದೂವರೆ ಲಕ್ಷ ರೂ. ವಹಿವಾಟು ನಡೆದಿದೆ.

ಮುಂದಿನ ದಿನಗಳಲ್ಲಿ ಆನ್‌ಲೈನ್‌ ಮಾರುಕಟ್ಟೆ ಪ್ರವೇಶಿಸುವ ಗುರಿ ಇದೆ ಎಂದು ಸಂತೋಷ್‌ ಕುಮಾರ್‌ ಹೇಳಿದರು. ಇದಲ್ಲದೆ, ರೂರಲ್‌ ಟೂರಿಸಂ ಕೂಡ ಶೆಡ್ತಿಕೆರೆಯಲ್ಲಿ ಆರಂಭಿಸಿದ್ದೇವೆ. ಅಲ್ಲಿ ಹೊಸ ಪೀಳಿಗೆಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡಲಾಗುತ್ತಿದೆ. ಸಾಂಪ್ರದಾಯಿಕ ಆಹಾರ, ಕ್ರೀಡೆ, ಟ್ರೆಕಿಂಗ್‌, ಅನ್ನದ ಹಿಂದಿನ ಶ್ರಮ ಮತ್ತಿತರ ಮಾಹಿತಿ ನೀಡಲಾಗುವುದು.

ನಾನು ಓದಿದ್ದು ಎಂ.ಕಾಂ. ಏನು ಮಾಡಬೇಕು ಎನ್ನುವುದ ತೋಚದಿದ್ದಾಗ, ಹೊಳೆದಿದ್ದೇ ಈ ಐಡಿಯಾ. ಇದಕ್ಕೆ ಸಾತ್‌ ನೀಡಿದವನು ನನ್ನ ಸ್ನೇಹಿತ ಮೆಕಾನಿಕಲ್‌ ಎಂಜಿನಿಯರಿಂಗ್‌ ಮುಗಿಸಿದ ಮಂಜುನಾಥ್‌. ನಮ್ಮ ಕಂಪೆನಿಗೆ ಇನ್ಫೋಸಿಸ್‌ನ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್‌ ಕಾಕಾಲ್‌ ಮೆಂಟರ್‌ ಆಗಿದ್ದಾರೆ’ ಎಂದು ಮಾಹಿತಿ ನೀಡಿದರು. ಅರೆಕಾ ವುಡ್‌ ಉತ್ಪನ್ನಗಳ ಮಳಿಗೆಯನ್ನು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕಾಣಬಹುದು.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next