ಆಳಂದ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ವಿಶೇಷ ಗಮನಕೊಟ್ಟು ಸುಮಾರು ಐದು ಸಾವಿರ ಹುದ್ದೆಗಳ ನೇಮಕಾತಿಗೆ ಮುಂದಾಗಿ ಹಮ್ಮಿಕೊಂಡ ಸಿಇಟಿ ಪರೀಕ್ಷಾ ಪೂರ್ವ ತರಬೇತಿ ನಿರ್ಲಕ್ಷಿಸದೇ ಆಸಕ್ತಿಯಿಂದ ಭಾಗವಹಿಸಿ ಪರಿಣಿತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಹೇಳಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಮಂಗಳವಾರ 6ರಿಂದ8ನೇ ತರಗತಿ ಶಿಕ್ಷಕರ ನೇಮಕಾತಿಗಾಗಿ ಟಿಇಟಿ ಅಹರ್ತೆ ಪಡೆದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬರುವ ಮೇ ತಿಂಗಳಲ್ಲಿ ನಡೆಯುವ ಶಿಕ್ಷಕರ ನೇಮಕಾತಿಗಾಗಿ ಸಿಇಟಿ ಪರೀಕ್ಷೆ ನಡೆಯಲಿದೆ, ಈ ಕಾರಣಕ್ಕಾಗಿಯೇ ಪರೀಕ್ಷಾ ಪೂರ್ವ ಟಿಇಟಿ (ಶಿಕ್ಷಕ ಅರ್ಹತಾ) ಪರೀಕ್ಷೆಯಲ್ಲಿ ಪಾಸಾದವರಿಗೆ ಸಿಇಟಿ ಪರೀಕ್ಷಾ ಪೂರ್ವ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಸರ್ಕಾರದ ತರಬೇತಿಯೆಂದು ನಿರ್ಲಕ್ಷಿಸದೇ ಭಾಗವಹಿಸಬೇಕು ಎಂದರು.
ತರಬೇತಿಗೆ ಸರ್ಕಾರಿಂದ ಪರಿಣಿತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಸಿಇಟಿಗೆ ಸಂಬಂತ ಗೊಂದಲಗಳಿದ್ದರೆ ಗೊಂದಲ ನಿವಾರಿಸಿಕೊಳ್ಳಬೇಕು. ಸರ್ಕಾರದ ಉಚಿತ ತರಬೇತಿ ಎಂದು ನಿರ್ಲಕ್ಷಿಸುವುದು ಸಲ್ಲ. ಇದೊಂದು ಉತ್ತಮ ತರಬೇತಿಯಾಗಿದ್ದು 40 ದಿನಗಳ ಕಾಲ ನಡೆಯಲಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ ಮಾತನಾಡಿ, ಇಲಾಖೆಯಲ್ಲಿ ನುರಿತ ಮತ್ತು ಅನುಭವಿ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ತರಬೇತಿಯಲ್ಲಿ ಹಾಜರಾಗಿ ಲಾಭ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಮಲ್ಲಿನಾಥ ವಚ್ಛೆ, ಸಿದ್ಧರಾಮ ಶಹಾಪುರೆ, ಕರಬಸಪ್ಪ ತೂರಕಡೆ, ಸಿದ್ಧರಾಮ ಘೋಡಕೆ, ನೋಡಲ್ ಅಧಿಕಾರಿ ಮಲ್ಲಿನಾಥ ಘೋಡಕೆ ಇದ್ದರು. ಸಿಆರಪಿ ದತ್ತಪ್ಪ ಸುಳ್ಳನ ಸ್ವಾಗತಿಸಿ ನಿರೂಪಿಸಿದರು, ಕಲ್ಯಾಣರಾವ್ ಬಿಕ್ಕಮಳೆ ವಂದಿಸಿದರು.