Advertisement

ಮೂರು ತಿಂಗಳಲ್ಲಿ ಪಹಣಿ ದೋಷ ಸಮಸ್ಯೆಗೆ ಮುಕ್ತಿ

01:07 PM Jul 19, 2022 | Team Udayavani |

ವಾಡಿ: ಕಳೆದ ಮೂವತ್ತು ವರ್ಷಗಳಿಂದ ಪಹಣಿ ದೋಷ ಸಮಸ್ಯೆ ಮುಂದಿಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಳಕರ್ಟಿ ಗ್ರಾಮದ ರೈತರಿಗೆ ಮೂರು ತಿಂಗಳಲ್ಲಿ ಮುಕ್ತಿ ದೊರಕಿಸಿಕೊಡುವುದಾಗಿ ಸೇಡಂ ಸಹಾಯಕ ಆಯುಕ್ತ ಎಂ.ಕಾರ್ತಿಕ್‌ ಭರವಸೆ ನೀಡಿದ್ದಾರೆ.

Advertisement

ಹಳಕರ್ಟಿ ಗ್ರಾಮದ ನೂರಾರು ರೈತರ ಒತ್ತಾಸೆಯ ಮೇರೆಗೆ ಸೋಮವಾರ ಚಿತ್ತಾಪುರ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ಸಹಾಯಕ ಆಯುಕ್ತ ಎಂ.ಕಾರ್ತಿಕ್‌, ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅವರ ಸಮ್ಮುಖದಲ್ಲಿ ವಿಶೇಷವಾಗಿ ಹಳಕರ್ಟಿ ರೈತರ ಡಬಲ್‌ ಪಹಣಿ ದೋಷ ಸಮಸ್ಯೆಗಳ ಕುರಿತು ಸುದೀರ್ಘ‌ ಚರ್ಚೆ ನಡೆಸಿದರು.

ಈ ವೇಳೆ ಆಯುಕ್ತರ ಗಮನ ಸೆಳೆದ ಎಐಕೆಕೆಎಂಎಸ್‌ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ, ಚಿತ್ತಾಪುರ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ, ಗ್ರಾಮದ ನೂರಾರು ರೈತರ ಪಹಣಿ ದಾಖಲೆಗಳನ್ನು ಮುಂದಿಟ್ಟು ಎದುರಾದ ಟಿಪ್ಪಣಿ ದೋಷ, ಡಬಲ್‌ ಪಹಣಿ, ಒಂದಕ್ಕೊಂದು ತಾಳೆಯಾಗದ ಆಕಾರಬಂದ್‌ ಮತ್ತು ನಕಾಶೆಯ ಸಮಸ್ಯೆ, ರೈತರ ಪಹಣಿಗಳಲ್ಲಿ ಸರ್ಕಾರಿ ಜಮೀನು ಎಂದು ದಾಖಲಾಗಿರುವುದು, ಯಾರದೋ ಜಮೀನು ಯಾರದೋ ಹೆಸರಿನಲ್ಲಿ ದಾಖಲೆ ಆಗಿರುವುದು ಸೇರಿದಂತೆ ಹಲವು ಲೋಪದೋಷಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಹಳಕರ್ಟಿ ಗ್ರಾಮದ ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ರೈತರು ಪಹಣಿ ದೋಷ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಪೂರ್ವಜರ ಆಸ್ತಿ ವಂಶಸ್ಥರ ಹೆಸರಿಗೆ ಸೇರುವ ಬದಲು ಸಂಬಂಧವೇ ಇಲ್ಲದ ವ್ಯಕ್ತಿಗಳ ಹೆಸರಿಗೆ ವರ್ಗವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಹಶೀಲ್ದಾರ್‌ ಕಚೇರಿಗೆ ಅಲೆದು ಬೇಸತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಕೊಂಚೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದಾಗಲೂ ಇದೇ ಸಮಸ್ಯೆ ಗಮನಕ್ಕೆ ತಂದಿದ್ದೇವೆ. ಒಂದು ವಾರದಲ್ಲಿ ತಿಪ್ಪಣಿ ಮುಕ್ತ ಗ್ರಾಮವನ್ನಾಗಿ ಘೋಷಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ನಾಲ್ಕು ತಿಂಗಳಾದರೂ ಒಂದೂ ಪಹಣಿ ಸರಿಯಾಗಿಲ್ಲ. ದಯವಿಟ್ಟು ನಮಗೆ ನ್ಯಾಯ ಒದಗಿಸಬೇಕು ಎಂದು ಸಂಘಟಕರು ಹಾಗೂ ರೈತರು ಆಯುಕ್ತರಲ್ಲಿ ಮನವಿ ಮಾಡಿದ ಪ್ರಸಂಗ ನಡೆಯಿತು.

ರೈತರ ಸಮಸ್ಯೆಯನ್ನು ಆಲಿಸಿದ ಸೇಡಂ ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್‌, ಹಳಕರ್ಟಿ ರೈತರ ಪಹಣಿ ದೋಷ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬಗೆಹರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ನಾನು ವೈಯಕ್ತಿಕವಾಗಿ ಸಿಬ್ಬಂದಿಗಳ ನಾಲ್ಕು ತಂಡಗಳನ್ನು ರಚಿಸಿ ಪಹಣಿ ಸಮಸ್ಯೆ ಬಗೆಹರಿಸುತ್ತೇನೆ. ನನಗೆ ಮೂರು ತಿಂಗಳು ಕಾಲಾವಕಾಶ ಕೊಟ್ಟು ಸಹಕರಿಸಿರಿ ಎಂದು ರೈತರಿಗೆ ಪ್ರತಿಕ್ರಿಯಿಸಿದರು.

Advertisement

ಎಐಕೆಕೆಎಂಎಸ್‌ ರೈತ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯೆ ದೀಪಾ ಡಿಗ್ಗಿಕರ್‌, ಈರಣ್ಣ ಇಸಬಾ, ಹಳಕರ್ಟಿ ಗ್ರಾಮ ಘಟಕದ ಅಧ್ಯಕ್ಷ ಚೌಡಪ್ಪ ಗಂಜಿ, ರೈತರಾದ ದೊಡ್ಡಪ್ಪ ಹೊಸೂರ, ಮಹಾಂತೇಶ ಹುಳಗೋಳ, ಮಲ್ಲಪ್ಪ ಹೊಸೂರ, ಬಸವರಾಜ ಹೊಸೂರ, ಮಶಾಕ್‌, ಶಿವಯೋಗಿ ಬಳ್ಳಾ, ಈರಣ್ಣ ಹಿಟ್ಟಿನ್‌, ಧರ್ಮಾ, ವಿರೇಶ ಗುರೆಗೋಳ, ದೊಡ್ಡಪ್ಪ ಹಿಟ್ಟಿನ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next