Advertisement

ಬಿಟ್ಟಿ ಚಾಕರಿ ಪದ್ದತಿ ಹೋಗಲಾಡಿಸಿ

08:57 PM Jul 05, 2021 | Team Udayavani |

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಜೀತ ಸಮಸ್ಯೆ ಮತ್ತು ಬಿಟ್ಟಿ ಚಾಕರಿ ಹೆಚ್ಚಿದ್ದು, ಈ ಪದ್ಧತಿ ಹೋಗಲಾಡಿಸಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಜೀವಿಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಡಾ| ಕಿರಣ ಪ್ರಸಾದ ಹೇಳಿದರು. ನಗರದ ಐವಾನ್‌-ಇ-ಶಾಹಿ ರಸ್ತೆಯಲ್ಲಿರುವ ಗುಲ್ಲಾಬಾಡಿಯ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿನ ಬಿಟ್ಟಿ ಚಾಕರಿ ವಿಷಯದ ಕುರಿತು ಅವರು ಮಾತನಾಡಿದರು.

Advertisement

ಜೀತ ಮತ್ತು ಬಿಟ್ಟಿ ಚಾಕರಿ ಪದ್ಧತಿ ನಿರ್ಮೂಲನೆಗೆ ಜೀವಿಕ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಕುಟಂಬಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಕಳೆದ ಎಂಟು ದಿನಗಳಿಂದ ಎಲ್ಲ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ, ಬಿಟ್ಟಿ ಚಾಕರಿ ಕುಟುಂಬಗಳನ್ನು ಗುರುತಿಸಲಾಗಿದೆ ಎಂದರು. ಗುರುತಿಸಿದಂತಹ ಬಿಟ್ಟಿ ಚಾಕರಿಯ ಕುಟುಂಬಗಳಿಗೆ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ಜೀತ ಕಾನೂನಿನಡಿ ಜೀತದಾಳುಗಳಿಗೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಬಿಟ್ಟಿ ಚಾಕರಿ ಪದ್ಧತಿಯಲ್ಲಿ ತೊಡಗಿಕೊಂಡವರಿಗೂ ಒದಗಿಸಬೇಕು.

ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತಕ್ಕೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಡಿಎಂಎಸ್‌ಎಸ್‌ ಸಂಘಟನೆ ಅಧ್ಯಕ್ಷ ಲಿಂಗರಾಜ ತಾರಫೈಲ್‌ ಮಾತನಾಡಿ, ಮನುಷ್ಯ ತನ್ನ ಕೆಲಸದಿಂದ ಶ್ರೇಷ್ಠ ವಾಗುತ್ತಾನೆಯೇ ಹೊರತು ಹುಟ್ಟಿನಿಂದ ಅಲ್ಲ. ಆರೋಗ್ಯಕರ ಸಮಾಜ ಕಟ್ಟಲು ಜೀತ ಮತ್ತು ಬಿಟ್ಟಿ ಚಾಕರಿ ಪದ್ಧತಿ ಹೋಗಲಾಡಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಜೀವಿಕ ಸಂಘಟನೆ ಮತ್ತು ಇದರ ಸಂಸ್ಥಾಪಕ ಡಾ| ಕಿರಣ ಪ್ರಸಾದ ಸೇವೆ ಶ್ಲಾಘನೀಯವಾಗಿದೆ ಎಂದರು. ಡಿಎಂಎಸ್‌ಎಸ್‌ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಜೀವಿಕ ಸಂಘಟನೆಯ ಜಿಲ್ಲಾ ಉಸ್ತುವಾರಿ ಸಂಚಾಲಕ ಡಾ| ನಾರಾಯಣಸ್ವಾಮಿ, ಮುಖಂಡರಾದ ರವಿಕುಮಾರ, ಅಮರಾವತಿ, ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next