ಬೆಂಗಳೂರು: ಕೆಲ ತಿಂಗಳುಗಳ ಹಿಂದೆಯಷ್ಟೇ ಪರಿಷ್ಕೃತ ಮೋಟಾರು ವಾಹನ ನಿಯಮ ಜಾರಿ ಮಾಡಿದ್ದ ಕೇಂದ್ರ ಸರಕಾರ ಇದೀಗ ಮತ್ತೊಂದು ನೂತನ ನಿಯಮ ಜಾರಿ ಮಾಡಿದೆ. ಈ ನಿಯಮಗಳ ಅನುಸಾರ ವಾಹನಗಳಲ್ಲಿ ಫ್ಯಾನ್ಸಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಅವಕಾಶ ಇಲ್ಲ.
ತಮ್ಮ ವಾಹನಗಳಲ್ಲಿ ಫ್ಯಾನ್ಸಿ ನಂಬರ್ ಪ್ಲೇಟ್ ಗಳನ್ನು ಹಾಕಿಕೊಂಡಿರುವವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆರ್.ಟಿ.ಒ. ನಿಯಮಗಳಿಗೆ ವಿರುದ್ಧವಾಗಿರುವ ಈ ರೀತಿಯ ಫ್ಯಾನ್ಸಿ ನಂಬರ್ ಪ್ಲೇಟ್ ಗಳ ತೆರವು ಕಾರ್ಯಾಚರಣೆಯನ್ನು ಡಿ. 27ರಿಂದ ತೀವ್ರಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿನ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಯಮಗಳ ಪ್ರಕಾರವೇ ನೋಂದಣಿ ಫಲಕಗಳಲ್ಲಿ ನಿಗದಿತ ಅಳತೆಯ ಅಕ್ಷರಗಳು ಮತ್ತು ಅಂಕಿಗಳನ್ನು ಬರೆಸುವುದು ಕಡ್ಡಾಯವಾಗಿದೆ. ಆದರೆ, ಕೆಲವರು ನಂಬರ್ ಪ್ಲೇಟ್‌ಗಳಲ್ಲಿ ಮನಸೋ ಇಚ್ಛೆ ಸಂಘ-ಸಂಸ್ಥೆಗಳ ಹೆಸರು, ಲಾಂಛನ, ಚಿಹ್ನೆಗಳನ್ನು ಹಾಕಿಕೊಂಡು ನಿಯಮ ಉಲ್ಲಂಘಿಸುತ್ತಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದೂರುಗಳಿವೆ. ಅನಧಿಕೃತ ನಂಬರ್ ಪ್ಲೇಟ್‌ಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.” ಎಂದು ಅವರು ಹೇಳಿದರು.
‘ಕೆಲ ವಾಹನ ಮಾಲಕರು ಅನುಮತಿ ಪಡೆಯದೆಯೇ ನಂಬರ್ ಪ್ಲೇಟ್‌ಗಳಲ್ಲಿ ಸರಕಾರಿ ಲಾಂಛನ ಬಳಸುತ್ತಿರುವುದು ಕಂಡು ಬಂದಿದೆ. ಸರಕಾರದ ಲಾಂಛನ ಅಳವಡಿಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕಿದೆ. ಕೆಲ ಸರಕಾರಿ ವಾಹನಗಳು ಮತ್ತು ಅತಿ ಗಣ್ಯರ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಪದನಾಮ, ಲಾಂಛನ ಬಳಸಲು ಅನುಮತಿ ಇದೆ,” ಎಂದು ತಿಳಿಸಿದರು.
‘’ಹಲವು ವಾಹನ ಮಾಲೀಕರು ನೋಂದಣಿ ಸಂಖ್ಯೆಗಳನ್ನು ನಿಯಮಾನುಸಾರ ಅಳವಡಿಸಿಕೊಳ್ಳದೇ, ಕೆ.ಎ. ಬದಲು ಕರ್ನಾಟಕ, ಆಲಂಕಾರಿಕ ಅಕ್ಷರಗಳನ್ನು ನಾನಾ ಬಣ್ಣ, ಶೈಲಿಯಲ್ಲಿ ಬರೆಸುವುದು, ಚಿತ್ರಗಳನ್ನು ಅಂಟಿಸುವುದು, ಫಲಕಗಳ ಮೇಲೆ ಮತ್ತು ಕೆಳಗೆ ಹಸಿರು, ಕೆಂಪು ಪಟ್ಟಿಯನ್ನು ಹಾಕಿಸುವ ಮೂಲಕ ನಿಯಮ ಉಲ್ಲಂಘಿಸಲಾಗುತ್ತಿದೆ.
ಇಂಥ ವಾಹನಗಳ ಫಲಕಗಳ ತೆರವಿಗೆ ವಿಶೇಷ ತಂಡಗಳನ್ನು ರಚಿಸಲಾಗುತ್ತಿದೆ. ವಾಹನಗಳ ಗಾಜು ಮತ್ತು ಕವಚದ ಮೇಲೆಯೂ ಸಂಘ-ಸಂಸ್ಥೆಗಳ ಹೆಸರು, ಪದನಾಮ ಬರೆಸಿಕೊಳ್ಳುವುದು ಜಾಹೀರಾತು ಎನಿಸಿಕೊಳ್ಳುತ್ತದೆ. ಈ ರೀತಿ ಪ್ರದರ್ಶನಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.” ಎಂದು ಅವರು ವಿವರಿಸಿದರು.