Advertisement

ರಾಜ್ಯಾಭಿವೃದ್ಧಿಗೆ ಕಾಂಗ್ರೆಸ್‌ ತೊಲಗಿಸಿ

05:04 PM Mar 22, 2018 | Team Udayavani |

ಲಿಂಗಸುಗೂರು: ರಾಜ್ಯದಲ್ಲಿ ಕಳೆದ ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್‌ಸಿಂಗ್‌ ಠಾಕೂರ್‌ ಆರೋಪಿಸಿದರು.

Advertisement

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ರಾಜ್ಯಕ್ಕೆ 3 ಲಕ್ಷ ಕೋಟಿ ರೂ. ಅನುದಾನ ನೀಡಿದ್ದರೂ ರಾಜ್ಯ ಸರ್ಕಾರ ಬಳಸದೇ ನಿಷ್ಕಾಳಜಿ ವಹಿಸಿದೆ. ದೇಶ ಈಗ ಅಭಿವೃದ್ಧಿಪಥದತ್ತ ಸಾಗುತ್ತಿದೆ. ಕರ್ನಾಟಕವೂ ಅಭಿವೃದ್ಧಿಯತ್ತ ಸಾಗಬೇಕಾದರೆ ರಾಜ್ಯದಲ್ಲಿನ ಭ್ರಷ್ಟ ಸಿದಾರೂಪಯ್ಯ ಸರಕಾರವನ್ನು ಕಿತ್ತೆಸೆಯಬೇಕು ಎಂದರು.

ರಾಹುಲ್‌ ಗಾಂಧಿ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಅಮೇಠಿ ಕ್ಷೇತ್ರವನ್ನು ರಾಜೀವ್‌ ಗಾಂಧಿ, ಸೋನಿಯಾಗಾಂಧಿ , ರಾಹುಲ್‌ ಗಾಂಧಿ ಪ್ರತಿನಿಧಿಸಿದ್ದಾರೆ. ಈ ವೇಳೆಗೆ ಅಮೇಠಿ ಕ್ಷೇತ್ರ ದೇಶದಲ್ಲೇ ಮಾದರಿಯಾಗಬೇಕಿತ್ತು. ಆದರೆ ಅಲ್ಲಿನ ಜನರು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಅಮೇಠಿಯನ್ನೇ ಅಭಿವೃದ್ಧಿ ಪಡಿಸಲಾರದವರು ಇನ್ನು ದೇಶವನ್ನು ಹೇಗೆ ಅಭಿವೃದ್ಧಿ ಪಡಿಸುತ್ತಾರೆ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನು ಕರ್ನಾಟಕದಲ್ಲೂ ಕಮಲ ಅರಳಿಸಬೇಕಾಗಿದೆ. ಇದಕ್ಕೆ ಕಾರ್ಯಕರ್ತರು ಕಠಿಣ ಶ್ರಮ ವಹಿಸಬೇಕು. 2019ರಲ್ಲಿ ರಾಷ್ಟ್ರದಲ್ಲಿ ಮತ್ತೂಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದರು. ರಾಯಚೂರು ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.

ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಪಕ್ಷದ ಮುಖಂಡರು ಜವಾಬ್ದಾರಿ ನೀಡಿ ಕಾರ್ಯಕರ್ತರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ 22 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದಲ್ಲಿ ಕೋಮುಗಲಭೆ ನಡೆಸಿ ಅಶಾಂತಿ ಸೃಷ್ಟಿಸಿದ ಸಿದ್ದರಾಮಯ್ಯ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸಬೇಕು. ಅಮೀತ್‌ ಶಾ ಅವರ 19 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸುವತ್ತ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಚುನಾವಣಾ ಉಸ್ತುವಾರಿ ರಮಾನಂದ ಯಾದವ್‌, ಮಾಜಿ ಶಾಸಕ ಮಾನಪ್ಪ ವಜ್ಜಲ್‌, ಯುವ ಮೋರ್ಚಾ ಕೋಶಾಧ್ಯಕ್ಷ ಉಮೇಶ ಕಾರಜೋಳ, ಮಂಡಲ ಅಧ್ಯಕ್ಷ ದೊಡ್ಡನಗೌಡ ಹೊಸಮನಿ, ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಪಟ್ಟೇದ, ಪ್ರಮೋದಜಿ, ಡಾ| ಶಿವಬಸಪ್ಪ, ಟಿ.ಆರ್‌. ನಾಯ್ಕ ಇತರರು ಇದ್ದರು. 

Advertisement

ಮೂಲ ಬಿಜೆಪಿಗರ ಕಡೆಗಣನೆ ಬಿಜೆಪಿ ಪದಾಧಿ ಕಾರಿಗಳ ಸಭೆಯಲ್ಲಿ ಈ ಹಿಂದಿನಿಂದಲೂ ಪಕ್ಷವನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದ ಪ್ರಸಂಗ ನಡೆಯಿತು. ವೇದಿಕೆಗೆ ಆಹ್ವಾನಿಸುವಾಗ ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಅವರ ಬೆಂಬಲಿಗರನ್ನೇ ಮಾತ್ರ ಕರೆಯಲಾಗುತ್ತಿತ್ತು. ಇದನ್ನು ಗಮನಿಸಿದ ಮಂಡಲ ಅಧ್ಯಕ್ಷ ದೊಡ್ಡನಗೌಡ ಹೊಸಮನಿ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next