Advertisement

ಕಾಂಗ್ರೆಸ್‌ ಷಡ್ಯಂತ್ರವನ್ನು ಎದುರಿಸಲು ಸಜ್ಜಾಗಿರಿ

12:03 PM May 18, 2018 | Team Udayavani |

ಬೆಂಗಳೂರು: ಸಂಸತ್ತಿನ ಸುಗಮ ಕಲಾಪಕ್ಕೆ ಕಾಂಗ್ರೆಸ್‌ ಅಡ್ಡಿಪಡಿಸಿದ ಮಾದರಿಯಲ್ಲೇ ರಾಜ್ಯ ವಿಧಾನಮಂಡಲ ಅಧಿವೇಶನಕ್ಕೂ ಅಡ್ಡಿಪಡಿಸಲು ಕಾಂಗ್ರೆಸ್‌ ಷಡ್ಯಂತ್ರ ನಡೆಸಿದೆ ಎಂಬ ಮಾಹಿತಿಯಿದ್ದು, ಪಕ್ಷದ ಎಲ್ಲ ಶಾಸಕರು ಗಟ್ಟಿಯಾಗಿ ನಿಂತು ಇದನ್ನು ಎದುರಿಸೋಣ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆ ನೀಡಿದರು.

Advertisement

ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಗುರುವಾರ ಮಧ್ಯಾಹ್ನ ಬಿಜೆಪಿ ಕಚೇರಿಗೆ ಆಗಮಿಸಿದ ಯಡಿಯೂರಪ್ಪ ಪಕ್ಷದ ನಾಯಕರು, ಶಾಸಕರು, ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತಮ್ಮ ಗೂಂಡಾಗಿರಿ ಮನೋಭಾವ ಬಿಡಬೇಕು. ರಾಜ್ಯದ ಜನ ಎಲ್ಲ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ದೂರುವ ಬದಲು ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಗಮನ ಹರಿಸೋಣ ಎಂದು ಹೇಳಿದರು.

ಬಹುಮತ ಸಾಬೀತು: ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಕಾಂಗ್ರೆಸ್‌ಮುಕ್ತ ಭಾರತ, ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗಿದೆ. ನಾವು ಬಹುಮತ ಸಾಬೀತುಪಡಿಸುವ ಮೂಲಕ ಇದನ್ನು ದೃಢೀಕರಿಸಬೇಕು. ಅದಕ್ಕಾಗಿ ಏನೇನು ಮಾಡಬೇಕು ಎಂಬುದನ್ನು ಇಲ್ಲಿ ಚರ್ಚಿಸುವ ಬೇಡ. ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರು ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸಬೇಕಿದೆ. ಬಹುಮತ ಸಾಬೀತಾಗಲಿದ್ದು, ಈ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.

ರಾಜ್ಯಪಾಲರು ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿದ್ದಾರೆ. ಆದರೆ ಅಷ್ಟು ದಿನ ಕಾಯುವ ಅಗತ್ಯವಿಲ್ಲ. ಆದಷ್ಟು ಬೇಗ ಬಹುಮತ ಸಾಬೀತುಪಡಿಸಲಾಗುವುದು. ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಿ ಮತದಾರರಿಗೆ ಅಭಿನಂದನೆ ಸಲ್ಲಿಸಲು ಅವಕಾಶಬೇಕು ಎಂಬುದು ಗೊತ್ತಿದೆ. ಯಾವುದೇ ಸಂದರ್ಭದಲ್ಲಿ ಅಧಿವೇಶನ ಕರೆಯಬಹುದು. ಶಾಸಕರು ತಡ ಮಾಡದೆ ತಕ್ಷಣ ಹಾಜರಿರಬೇಕು ಎಂದು ಸೂಚಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರನ್ನು ಹಿಡಿದಿಟ್ಟುಕೊಂಡು ಮಾನಸಿಕ ಹಿಂಸೆ, ದೌರ್ಜನ್ಯ ನಡೆಸುತ್ತಾ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಹ ಅವಕಾಶ ನೀಡದೆ ಗೂಂಡಾಗಿರಿ ನಡೆಸುತ್ತಿರುವುದು ಗುಪ್ತಚರ ಇಲಾಖೆ ಮಾಹಿತಿಯಿಂದ ಗೊತ್ತಾಗಿದೆ. ಹತಾಶೆಗೊಂಡಿರುವ ಕಾಂಗ್ರೆಸ್‌, ಜೆಡಿಎಸ್‌ ಹೀನಕೃತ್ಯಕ್ಕೆ ಇಳಿದಿವೆ ಎಂದು ವಾಗ್ಧಾಳಿ ನಡೆಸಿದರು.

Advertisement

ಜನರ ಉತ್ತರ: ಚುನಾವಣೆಯಲ್ಲಿ 18- 20 ಅಭ್ಯರ್ಥಿಗಳು ನಾನಾ ಕಾರಣಕ್ಕೆ ಸೋತಿರಬಹುದು. ಆದರೆ ಪಕ್ಷ, ಸರ್ಕಾರ ನಿಮ್ಮೊಂದಿಗಿದೆ. ಆ ಜಿಲ್ಲೆಗಳಲ್ಲಿ ಪಕ್ಷ ಬಲವರ್ಧನೆಗೆ ಆದ್ಯತೆ ನೀಡಲಾಗುವುದು. ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಮಾತಿನ ವೈಖರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ತರುವಂಥದ್ದಲ್ಲ. ಹಿಂದಿನ ಚರಿತ್ರೆ ಮರೆತು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಸಹಿಸದೆ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ನಾವು ಉತ್ತರ ನೀಡುವುದು ಬೇಕಿಲ್ಲ. ಜನರೇ ಉತ್ತರಿಸಿದ್ದಾರೆ ಎಂದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, “ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ, “ಅಭಿನವ ಚಾಣಕ್ಯ’ ಎಂದೇ ಖ್ಯಾತರಾದ ಅಮಿತ್‌ ಶಾ ಅವರ ಮುಂದಾಳತ್ವದಲ್ಲಿ ವಿಜಯ ಸಿಕ್ಕಿದೆ. 104 ಸ್ಥಾನ ಪಡೆದು ಶೇ.38ರಷ್ಟು ಮತ ಪಡೆದಿರುವ ಬಿಜೆಪಿಗೆ ಜನಾದೇಶದ ಕೊರತೆ ಇದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದ್ದು, ಕಾಂಗ್ರೆಸ್‌, ಜೆಡಿಎಸ್‌ ಕುಚೇಷ್ಟೆ ಬಿಡಬೇಕು. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ರಚನಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.

ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಧರ್ಮೇಂದ್ರ ಪ್ರಧಾನ್‌, ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಇತರರು ಉಪಸ್ಥಿತರಿದ್ದರು.

ಬಿಜೆಪಿ ಕಚೇರಿಯಲ್ಲಿ ಸಂಭ್ರಮ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಕಚೇರಿಯನ್ನು ತಳಿರು, ತೋರಣ, ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕಚೇರಿಗೆ ಆಗಮಿಸಿದ ಯಡಿಯೂರಪ್ಪ ಅವರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು, ಬೆಂಬಲಿಗರು ಮೋದಿ, ಮೋದಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಆರತಿ ಬೆಳಗಿ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ನಾಯಕರು, ಮುಖಂಡರು ಯಡಿಯೂರಪ್ಪ ಅವರನ್ನು ಅಭಿನಂದಿಸಿ ಶುಭ ಕೋರಿದರು.

ಸಂವಿಧಾನಾತ್ಮಕ, ಪ್ರಜಾತಾಂತ್ರಿಕವಾಗಿರುವ ಸರ್ಕಾರವನ್ನು ಬುಡಮೇಲು ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಯತ್ನಿಸುತ್ತಿದ್ದು, ಜನ ಇದನ್ನು ಸಹಿಸುವುದಿಲ್ಲ. ಯಡಿಯೂರಪ್ಪ ಅವರು ಪೂರ್ಣಾವಧಿ ಆಡಳಿತ ನೀಡಲಿದ್ದಾರೆ.
-ಅನಂತಕುಮಾರ್, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next