Advertisement

ಗೆಲುವಿನ ಸಿಂಚನಕ್ಕೆ ಸಿದ್ಧವಾಗಲಿ ಮನ…

10:49 PM May 19, 2019 | Team Udayavani |

ಇನ್ನೇನು ಸುಡುಬಿಸಿಲಿನ ಪ್ರತಾಪ ತಗ್ಗಿ ವರ್ಷಧಾರೆ ಆಗಮನದ ಹೊತ್ತು. ಬಿಸಿಲಿನಿಂದ ಬಸವಳಿದ ಮನಸ್ಸು ಮಳೆಗಾಲದ ಸಿಂಚನಕ್ಕೆ ಹಾತೊರೆಯುವುದು ಸಹಜ. ಸತತ ಸೋಲಿನಿಂದ ಕಂಗೆಟ್ಟು ಒಂದು ಗೆಲುವಿಗಾಗಿ ಹಂಬಲಿಸುವಂತೆ.

Advertisement

ಬೇಸಗೆ ಕಾಲದಲ್ಲಿ ಎತ್ತ ನೋಡಿದರೂ ಒಣ ಒಣ. ಆದರೆ ಮಳೆಗಾಲ ಹಾಗಲ್ಲ. ಮನಸ್ಸಿನ ಒಳಗೂ ಮನೆಯ ಹೊರಗೂ ತಂಪು ತಂಪು. ಒಂದರ್ಥದಲ್ಲಿ ನಮ್ಮ ಜೀವನವೂ ಪ್ರಕೃತಿ ಹಾಗೆಯೇ. ನಿಸರ್ಗದಲ್ಲಿ ಋತುಮಾನ ಬದಲಾಗುತ್ತಿದ್ದರೆ ನಮ್ಮೊಳಗೆ ಸುಖ, ದುಃಖ, ಸಂತೋಷ, ಹತಾಶೆ, ಸೋಲು, ಗೆಲುವು ಒಂದರ ಹಿಂದೆ ಒಂದರಂತೆ ಮೆರವಣಿಗೆ ನಡೆಸುತ್ತವೆ.

ಯಾವುದೂ ಶಾಶ್ವತವಲ್ಲ
ಜೀವನ ಎನ್ನುವ ಮೂರಕ್ಷರದ ಸುದೀರ್ಘ‌ ಪಯಣದಲ್ಲಿ ಯಾವ ಭಾವವೂ ಸ್ಥಿರವಾಗಿರುವುದಿಲ್ಲ ಎನ್ನುವುದು ನಾವು ಪ್ರಕೃತಿಯಿಂದ ಕಲಿಯಬೇಕಾದ ದೊಡ್ಡ ಪಾಠ. ಬೇಸಗೆ ಕಾಲದಲ್ಲಿ ಬಿಸಿಲಿಗೆ ಒದ್ದಾಡುತ್ತೇವೆ. ಹಾಗಂತ ಈ ಋತುಮಾನ ಬೇಡ ಅಂತ ತಳ್ಳಿ ಹಾಕುವಂತಿಲ್ಲ. ಅದರ ಮೂಲಕ ಹಾದು ಹೋದರಷ್ಟೇ ಮಳೆಗಾಲದ ಸೌಂದರ್ಯ ಸವಿಯಲು ಸಾಧ್ಯ. ಬದುಕಲ್ಲೂ ಅಷ್ಟೆ. ನೋವು ಅಥವಾ ಸೋಲು ಎದುರಾದರೆ ಅದರ ಬಗ್ಗೆ ಹತಾಶರಾಗಿ ಕುಳಿತರೆ ಮುಂದೆ ಬರುವ ಸಂತೋಷ ಅಥವಾ ಗೆಲುವಿನ ಸವಿ ಉಣ್ಣಲು ಸಾಧ್ಯವಿಲ್ಲ. ವರ್ಷದ ಎಲ್ಲ ದಿನ ಮಳೆ ಸುರಿಯುತ್ತಿದ್ದರೆ ಅದರ ದನಿ ಆಲಿಸುವ ಮನಸ್ಸಾ ಗುತ್ತಿತ್ತೇ?ಬಿಸಿಲಿನ ಶಾಖಕ್ಕೆ ಬಳಲಿದ ಮನಸ್ಸು ತಾನೇ ವರ್ಷಧಾರೆಯ ಆಗಮನಕ್ಕೆ ಚಾತಕ ಪಕ್ಷಿಯಂತೆ ಹಾತೊರೆಯುವುದು?

ಸೋಲಿನ ಅನುಭವ ಆಗಿಲ್ಲ ಎಂದಾದರೆ ಜೀವನದಲ್ಲಿ ಛಲ ಮೂಡುವುದಾದರೂ ಹೇಗೆ? ಜೀವನ ಸರಾಗವಾಗಿ ಸಾಗುತ್ತಿದೆ ಎಂದಾದರೆ ಅಲ್ಲೇ ಇದ್ದು ಬಿಡುತ್ತೇವೆ. ಒಂದು ಸೋಲು ಬಂದು ಬಿಡಲಿ. ಚಿಂತಿಸುವ ಮನಸ್ಥಿತಿಯೇ ಬದಲಾಗಿ ಬಿಡುತ್ತದೆ. ಈ ಬಾರಿ ಪುಟಿದೇಳಬೇಕು. ನಾನು ಏನೆಂಬುದನ್ನು ಸಾಬೀತು ಪಡಿಸಬೇಕು. ತುಳಿಯುವವರನ್ನು ಮೀರಿ ಬೆಳೆಯಬೇಕು ಎನ್ನುವ ಹಠ ಮೊಳೆತು ಬಿಡುತ್ತದೆ. ಇದು ನಮ್ಮನ್ನು ಯಶಸ್ಸಿನ ಹಾದಿಗೆ ಕೈ ಹಿಡಿದು ತಂದು ಬಿಡುತ್ತದೆ.

ಚಿಂತೆಯೇ ಚಿತೆ ಆಗದಿರಲಿ
ಚಿಂತೆಗೂ ಚಿತೆಗೂ 0 ಮಾತ್ರ ವ್ಯತ್ಯಾಸ ಎನ್ನುತ್ತಾರೆ. ನಿಜ. ಮನಸ್ಸಿನಲ್ಲಿ ಋಣಾತ್ಮಕ ಯೋಚನೆ ಸುಳಿದು ಬಿಟ್ಟರೆ ಮುಗಿಯಿತು. ನನ್ನಿಂದ ಸಾಧ್ಯವಿಲ್ಲ ಎನ್ನುವ ಮನಸ್ಥಿಯೇ ಸೋಲಿನ ಪ್ರತಾಪಕ್ಕೆ ತಳ್ಳಿ ಬಿಡುತ್ತದೆ. ಆದಕ್ಕೆ ಅವಕಾಶ ನೀಡಬೇಡಿ. ಎಲ್ಲಿ ಎಡವಿದ್ದೇನೆ ಎಂಬುದನ್ನು ಪರಿಶೀಲಿಸಿ. ಮುಂದಿನ ಬಾರಿ ಈ ತಪ್ಪು ಮಾಡುವುದಲ್ಲ ಎನ್ನುವುದನ್ನು ದೃಢ ಮಾಡಿಕೊಳ್ಳಿ. ಒಮ್ಮೆ ಎಡವಿದ ಮಗು ನಡೆಯುವುದನ್ನು ಅಲ್ಲಿಗೆ ಬಿಟ್ಟು ಬಿಡುವುದಿಲ್ಲ. ಬಿದ್ದು ಎದ್ದು ಹೆಜ್ಜೆ ಹಾಕಲು ಕಲಿಯುತ್ತದೆ.

Advertisement

ಹತಾಶರಾಗಬೇಡಿ
ನಾವು ಕೆಲವೊಮ್ಮೆ ಮಾಡುವ ದೊಡ್ಡ ತಪ್ಪು ಎಂದರೆ ಆಗಿ ಹೋದ ವಿಷಯವನ್ನು ಮತ್ತೆ ಮತ್ತೆ ಚಿಂತಿಸಿ ಹತಾಶರಾಗವುದು. ನೀವು ಒಂದು ಜೋಕನ್ನು ಮೊದಲ ಬಾರಿಗೆ ಕೇಳಿದಾಗ ನಗುತ್ತೀರಿ. ಮತ್ತೆ ಮತ್ತೆ ಅದನ್ನು ಪುನರಾವರ್ತಿಸಿದರೆ ನಗು ಬರಲಾರದು. ಅದೇ ರೀತಿ ಒಂದು ಸೋಲನ್ನು, ಒಂದು ನೋವನ್ನು ಪದೇ ಪದೇ ಚಿಂತಿಸಿ ಯಾಕೆ ಕೊರಗುತ್ತೀರಿ? ಆದದ್ದು ಆಗಿ ಹೋಯಿತು. ನಮ್ಮಲ್ಲಿ ಟೈಮ್‌ ಮೆಷಿನ್‌ ಇಲ್ಲ. ಹಿಂದಕ್ಕೆ ಹೋಗಿ ತಪ್ಪನ್ನು ಸರಿ ಪಡಿಸಲು ಆಗುವುದಿಲ್ಲ. ಆದರೆ ಮುಂದಿನ ಬಾರಿ ಆ ತಪ್ಪು ಪುನರಾವರ್ತಿಸದಂತೆ ಎಚ್ಚರಿಕೆ ವಹಿಸಬಹುದು.

ಕೊಳೆ ತೊಳೆಯಲಿ
ಮಳೆ ಊರಿನ ಕೊಳೆಗಳನ್ನೆಲ್ಲ ತೊಳೆಯುವ ರೀತಿ ನಮ್ಮಲ್ಲಿನ ಧನಾತ್ಮಕ ಚಿಂತನೆ ಸೋಲನ್ನು, ಹತಾಶೆಯನ್ನು ಹೋಗಲಾಡಿಸುವಂತಾಗಬೇಕು. ಮೌನವಾಗಿ ಕುಳಿತು ಮಳೆಯ ಸೌಂದರ್ಯವನ್ನು ಆಸ್ವಾದಿಸಿ, ಅದರೊಳಗೆ ಲೀನವಾಗಿ. ನಿಮ್ಮೊಳಗೆ ಹೊಸ ಕನಸು ಚಿಗುರೊಡೆಯುವುದರಲ್ಲಿ ಸಂಶಯವಿಲ್ಲ.

 - ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next