Advertisement

ಪ್ರವಾಹ ಬಂದರೆ ಎದುರಿಸಲು ಸಜ್ಜಾಗಿ: ಡಾ|ರಾಜೇಂದ್ರ

06:43 AM May 28, 2020 | mahesh |

ಬಾಗಲಕೋಟೆ: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ, ಅತಿವೃಷ್ಟಿ ಉಂಟಾದಲ್ಲಿ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ
ಬುಧವಾರ ಸಂಜೆ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಬಾರಿಯ ಭೀಕರ ಪ್ರವಾಹ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಎದುರಾದ ಸವಾಲು ಗಳನ್ನು ಗಮನದಲ್ಲಿರಿಸಿಕೊಂಡು ಜನರ ತುರ್ತು ರಕ್ಷಣೆಗೆ ಬೋಟ್‌ ಹಾಗೂ ಪುನರ್ವಸತಿಗೆ ಪರಿಹಾರ ಕೇಂದ್ರಗಳ
ಸ್ಥಾಪನೆ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಉಪ ವಿಭಾಗ ಮಟ್ಟದಲ್ಲೂ ಪೊಲೀಸ್‌, ಅಗ್ನಿಶಾಮಕ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಎಲ್ಲ ವಿಷಯಗಳ ಬಗ್ಗೆ ವಿಸೃತವಾಗಿ ಚರ್ಚೆ ನಡೆಸಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸೇತುವೆ ಪರಿಶೀಲಿಸಿ: ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಚರಂಡಿಗಳನ್ನು ಸ್ವತ್ಛಗೊಳಿಸಬೇಕು. ಲೋಕೋಪಯೋಗಿ ಇಲಾಖೆಯು ರಸ್ತೆ, ಸಿ.ಡಿ ಹಾಗೂ ಸೇತುವೆಗಳ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು. ಮಳೆ ನೀರಿನಿಂದ ಸಿ.ಡಿ. ಮತ್ತು ಸಣ್ಣ ಸೇತುವೆಗಳು ಬ್ಲಾಕ್‌ ಆಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯು ತುರ್ತು ವೈದ್ಯಕೀಯ ಸೇವೆ ಒದಗಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಪಶು ಪಾಲನಾ ಇಲಾಖೆಯು ಅಗತ್ಯ ಮೇವು ಸಂಗ್ರಹ ಮತ್ತು ಲಸಿಕೆ ಬಗ್ಗೆ ಪೂರ್ವ ಸಿದ್ಧತೆ ಮಾಡಿಟ್ಟುಕೊಳ್ಳಲು ತಿಳಿಸಿದರು.

ಜಿಲ್ಲೆಗೆ ಅಗತ್ಯವಿರುವ ಬೋಟ್‌ಗಳ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಬೇಕು. ಅದೇ ರೀತಿ ತಕ್ಷಣಕ್ಕೆ ಬೋಟ್‌ ಪಡೆಯಲು ಮುಂಚಿತವಾಗಿಯೇ ಎಲ್ಲ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಈಗಾಗಲೇ ಲಭ್ಯವಿರುವ ಬೋಟ್‌ಗಳ ಮಾಹಿತಿ ಪಡೆದುಕೊಂಡು ಅವುಗಳ ದುರಸ್ತಿ, ಬೋಟ್‌ ಬಳಕೆಗೆ ಸಂಬಂಧಿಸಿದಂತೆ ತರಬೇತಿ ನೀಡಬೇಕು. ವಿದ್ಯುತ್‌ ಕಂಬಗಳ ನಿರ್ವಹಣೆ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಅಗತ್ಯ ಸಾಮಗ್ರಿ ಮತ್ತು ಸಿಬ್ಬಂದಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು ಎಂದರು. ಸಭೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ ಇದ್ದರು.

ಕಳೆದ ವರ್ಷ ಉಂಟಾದ ಭೀಕರ ಪ್ರವಾಹದ ಕುರಿತು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ನದಿ ದಡದ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸಬೇಕು. ನದಿ ದಂಡೆಯಲ್ಲಿ ಇರುವ ಗ್ರಾಮಗಳಲ್ಲಿ ಜನರ ತುರ್ತು ರಕ್ಷಣೆಗೆ ಅಗತ್ಯವಿರುವ ಬೋಟ್‌ ಮತ್ತು ಅವುಗಳ ಆಪರೇಟರ್‌ ನಿಯೋಜಿಸಲು ಕ್ರಮ ಕೈಗೊಳ್ಳಬೇಕು. 
ಕ್ಯಾಪ್ಟನ್‌ ಡಾ|ರಾಜೇಂದ್ರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next