Advertisement

ಕ್ರಿಸ್ಮಸ್‌ಗೆ ತಯಾರಿ ಖರೀದಿ ಜೋರು

10:42 PM Dec 19, 2019 | Sriram |

ಭಾರತ ಹಬ್ಬಗಳ ದೇಶ. ಪ್ರತಿ ಹಬ್ಬಗಳೂ ಒಗ್ಗಟ್ಟಿನ ಮೂಲಮಂತ್ರವನ್ನು ಸಾರುವುದರೊಂದಿಗೆ ಸಂಭ್ರಮದ ಸಮಯವಾಗಿ ಜನರಿಗೆ ನೆಮ್ಮದಿ ನೀಡುವ ಸಂಕೇತವಾಗಿಯೂ ಇರುತ್ತವೆ. ಹಿಂದೂಗಳಿಗೆ ದೀಪಾವಳಿ, ಮುಸಲ್ಮಾನರಿಗೆ ರಂಜಾನ್‌, ಕ್ರೈಸ್ತರಿಗೆ ಕ್ರಿಸ್ಮಸ್‌ ಹಬ್ಬವೆಂದರೆ ಸಡಗರವೂ ಜೋರಾಗಿರುತ್ತದೆ. ಶಾಂತಿ, ಸೌಹಾರ್ದತೆ, ಒಗ್ಗಟ್ಟು ಹಾಗೂ ಸಹಬಾಳ್ವೆಯ ಸಂಕೇತವಾಗಿ ಭಾರತೀಯ ಹಬ್ಬಗಳು ಜನರ ಮನಸ್ಸಿನಲ್ಲಿ ಜನಜನಿತ. ಈ ಸಂದರ್ಭದಲ್ಲಿ ಖರೀದಿ ಭರಾಟೆಯೂ ಹೆಚ್ಚಿರುತ್ತದೆ.

Advertisement

ವರ್ಷಾಂತ್ಯದಲ್ಲಿ ಸಂಭ್ರಮ ನೀಡುವ ಹಬ್ಬವೆಂದರೆ ಕ್ರಿಸ್ಮಸ್‌. ವಾರಗಳ ಕಾಲ ಆಚರಿಸುವ ಕ್ರಿಸ್ಮಸ್‌ ಆಚರಣೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುವಿಕೆ, ಪರಸ್ಪರ ಶುಭಾಶಯ ವಿನಿಮಯ, ಕ್ರಿಸ್ಮಸ್‌ ಕೇಕ್‌, ಹಬ್ಬದ ತಿಂಡಿಗಳನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸುವುದು ವಾಡಿಕೆ. ಇದರೊಂದಿಗೆ ಹಬ್ಬಕ್ಕಾಗಿಯೇ ಒಂದಷ್ಟು ಹೊಸ ಖರೀದಿಗಳೂ ಮನಸ್ಸಿಗೆ ಮುದ ನೀಡುತ್ತವೆ.

ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್‌ ಸಡಗರ ಶುರುವಾಗಲಿದೆ. ಹಬ್ಬದ ಸಂಭ್ರಮಕ್ಕಾಗಿ ಮನೆಮಂದಿ ತಯಾರಾಗುತ್ತಿದ್ದರೆ, ಇತ್ತ ಮಾರುಕಟ್ಟೆಯಲ್ಲಿ ಕ್ರಿಸ್ಮಸ್‌ಗಾಗಿಯೇ ಹೊಸತು ಸಾಮಗ್ರಿಗಳ ಆಗಮನವಾಗಿದೆ. ಖರೀದಿ ಭರಾಟೆ ಜೋರಾಗಿದ್ದು, ಮಕ್ಕಳು, ಹಿರಿಯರೆನ್ನದೆ ಎಲ್ಲ ವಯಸ್ಸಿನವರೂ ಹಬ್ಬದ ಖುಷಿಯಲ್ಲಿದ್ದಾರೆ. ಹಬ್ಬಗಳು ಬಂತೆಂದರೆ ಮಾರುಕಟ್ಟೆಗಳಲ್ಲಿ ವ್ಯಾಪಾರದ ಸುಗ್ಗಿ. ಈ ಕ್ರಿಸ್ಮಸ್‌ಗೂ ಹೊಸ ಹೊಸ ವೈವಿಧ್ಯ ಐಟಂಗಳು ಮಾರುಕಟ್ಟೆಯಲ್ಲಿ ಜನರನ್ನು ಕೈ ಬೀಸಿ ಕರೆಯುತ್ತಿವೆ. ಕ್ರಿಸ್ಮಸ್‌ ಟ್ರೀಗಳು ಮಾರುಕಟ್ಟೆ ಪ್ರವೇಶಿಸಿವೆ. ಯಾವುದೇ ಫ್ಯಾನ್ಸಿ ಅಂಗಡಿಗಳಲ್ಲಿ ನೋಡಿದರೂ, ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಕ್ರಿಸ್ಮಸ್‌ ಟ್ರೀಯನ್ನು ಕಾಣಬಹುದು. ರಾತ್ರಿ ವಿಭಿನ್ನ ದೀಪಗಳೊಂದಿಗೆ ಕಂಗೊಳಿಸುವ ಕ್ರಿಸ್ಮಸ್‌ ಟ್ರೀಗಳು ಸುಮಾರು 3 ಸಾವಿರ ರೂ.ಗಳವರೆಗೂ ಬೆಲೆ ಬಾಳುತ್ತವೆ. ಇದರ ಖರೀದಿಗಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗಳತ್ತ ಆಗಮಿಸುತ್ತಿದ್ದಾರೆ. ಕ್ರಿಸ್ಮಸ್‌ ಟ್ರೀಗೆ ಅಳವಡಿಸಲು ಮತ್ತು ಮನೆಯನ್ನು ಸಿಂಗರಿಸಲು ವೈವಿಧ್ಯ ಬಣ್ಣಗಳ ದೀಪಗಳೂ ಜನರನ್ನು ಆಕರ್ಷಿಸುತ್ತಿವೆ.

ಗೋದಲಿ ಪರಿಕರ
ಕ್ರಿಸ್ಮಸ್‌ನ ಇನ್ನೊಂದು ವಿಶೇಷತೆಯೆಂದರೆ ಗೋದಲಿ ರಚನೆ. ಇದಕ್ಕಾಗಿ ಗೋದಲಿ ಪರಿಕರಗಳನ್ನೊಳಗೊಂಡ ಸೆಟ್‌ಗಳು ಮಾರುಕಟ್ಟೆಯಲ್ಲಿ ಮಾರಾಟ ಕಾಣುತ್ತಿವೆ. ಯೇಸು ದೇವರು, ತಾಯಿ ಮೇರಿಮಾತೆ, ತಂದೆ ಜೋಸೆಫ್‌ ವಿಗ್ರಹಗಳು ಹಾಗೂ ವಿವಿಧ ಜಾನುವಾರುಗಳಿರುವ ಗೋದಲಿ ಪರಿಕರಗಳ ಸೆಟ್‌ನ್ನು ಜನ ಹೆಚ್ಚು ಖರೀದಿಸುತ್ತಿದ್ದಾರೆ. ಇದರೊಂದಿಗೆ ಮನೆ, ಮನೆ ಪರಿಸರದಲ್ಲಿರುವ ಮರಗಳು, ಗೋದಲಿ ರಚಿಸಿದ ಜಾಗ, ಚರ್ಚ್‌ ಮುಂತಾದೆಡೆಗಳಲ್ಲಿ ಸಿಂಗರಿಸಲು ವೈವಿಧ್ಯ ಗಾತ್ರದ ನಕ್ಷತ್ರಗಳು ಮಾರುಕಟ್ಟೆಗೆ ಬಂದಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದು. ಗೋದಲಿ, ನಕ್ಷತ್ರ ಹೆಚ್ಚಿನ ಮಾರಾಟ ಕಾಣುತ್ತಿದೆ ಎನ್ನುತ್ತಾರೆ ಹಂಪನಕಟ್ಟೆ ಫ್ಯಾನ್ಸಿ ಅಂಗಡಿಯೊಂದರ ಮಾಲಕ ಗುರುರಾಜ್‌.

ಹೊಸ ಬಟ್ಟೆ ರಂಗು
ಹಬ್ಬ ಎಂದ ಮೇಲೆ ಹೊಸ ಬಟ್ಟೆ ತೊಡದೇ ಇದ್ದರೆ ಆ ಹಬ್ಬ ಪರಿಪೂರ್ಣವಾಗು ವುದೇ ಇಲ್ಲ. ಯಾವುದೇ ಹಬ್ಬ ಇರಲಿ, ಭಾರತೀಯರು ಹೊಸ ಬಟ್ಟೆ ತೊಟ್ಟು ಖುಷಿ ಪಡುವುದು ತಲೆತಲಾಂತರದಿಂದ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಈ ಕ್ರಿಸ್ಮಸ್‌ಗೂ ಹೊಸ ಬಟ್ಟೆ ಖರೀದಿಯ ಬಿರುಸು ಜೋರಾಗಿದೆ. ಹೊಸ ಗೌನ್‌, ಹೊಸ ಸೀರೆ ಖರೀದಿಯಲ್ಲಿ ಹೆಂಗಳೆಯರು ತೊಡಗಿದ್ದರೆ, ಹೊಸ ಕುರ್ತಾ, ಶರ್ಟ್‌ ಖರೀದಿಯ ಖುಷಿಯಲ್ಲಿ ಪುರುಷರಿದ್ದಾರೆ. ಮಕ್ಕಳಿಗೂ ವಿವಿಧ ನಮೂನೆಯ, ವಿವಿಧ ಶೈಲಿಯ ಬಟ್ಟೆ ಬರೆಗಳು ಬಟ್ಟೆ ಅಂಗಡಿಗಳಲ್ಲಿ ಕಾಯುತ್ತಿವೆ.

Advertisement

ಹೊಸ ಬಟ್ಟೆ ಖರೀದಿ
ಕ್ರಿಸ್ಮಸ್‌ ಹಬ್ಬಕ್ಕಾಗಿ ಕ್ರಿಸ್ಮಸ್‌ ಟ್ರೀ, ನಕ್ಷತ್ರಗಳ ಖರೀದಿ ಸಾಮಾನ್ಯವಾಗಿ ಇರುತ್ತದೆ. ಇದರೊಂದಿಗೆ ಮನೆಮಂದಿಯೆಲ್ಲ ಹೊಸ ಬಟ್ಟೆ ಹಾಕಿ ಖುಷಿ ಪಡುವುದು ಪ್ರತಿ ವರ್ಷದ ಸಂಭ್ರಮಗಳಲ್ಲೊಂದು. ಹಾಗಾಗಿ ಈ ಹಬ್ಬಕ್ಕಾಗಿ ನಾವೂ ಹೊಸ ಬಟ್ಟೆ ಖರೀದಿಸುತ್ತಿದ್ದೇವೆ.
– ಜೇಸನ್‌ ಗ್ರಾಹಕ

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next