Advertisement

ಸಪ್ತಪದಿಗೂ ಮುನ್ನ ಓಕುಳಿ

12:28 PM May 16, 2018 | |

ಜೂಸ್‌ ಕೊಡಲು ಹೋದ ಅಕ್ಕ, ಅದನ್ನು ಹುಡುಗನ ಶರ್ಟ್‌ ಮೇಲೆ ಚೆಲ್ಲಿಬಿಟ್ಟಳು. ಅವನ ಬಿಳಿ ಶರ್ಟ್‌ ಪೂರ್ತಿ ಬಣ್ಣವಾಗಿ ಹೋಯಿತು.

Advertisement

ಭವಿಷ್ಯದ ಕನಸು ಕಣ್ಮುಂದೆ ಕುಳಿತಿದ್ದರೂ ನೆಲವನ್ನೇ ನೋಡುತ್ತಾ ಕುಳಿತಿದ್ದಳು. ಅವಳ ಆತಂಕಕ್ಕೆ ಕೈಯಲ್ಲಿ ಮುದುಡಿದ ಕರವಸ್ತ್ರವೇ ಆಸರೆಯಾಗಿತ್ತು. ಕಿರುಗಣ್ಣಲ್ಲಿ ಒಮ್ಮೆ ನೋಡಿದಾಗ ಆ ಎರಡು ಕಣ್ಣುಗಳು  ತನ್ನನ್ನೇ ನೋಡುತ್ತಿವೆ ಎಂಬುದನ್ನು ಗಮನಿಸಿ ಮತ್ತೆ  ನಾಚಿಕೆಯಿಂದ ಕೆಂಪೇರಿದ ಮುಖ ಬಾಗಿತು.

ಅವಳನ್ನೇ ನೋಡುತ್ತಿದ್ದ ನನಗೂ ಏನೋ ಆತಂಕ. ಅವಳ ಕೈಯಲ್ಲಿ ತಣ್ಣನೇ ಜ್ಯೂಸ್‌ ಹಿಡಿಸಿ ಎಲ್ಲರಿಗೂ ಕೊಡು ಎಂದು ಕೊಟ್ಟಾಗ ನನ್ನ ಹೆದರಿಕೆ ಮತ್ತೂ ಹೆಚ್ಚಿತ್ತು. ನಿನ್ನೆ ತಾನೆ ಅಜ್ಜಿ ಅವಳ ವಧುಪರೀಕ್ಷೆಯ ಕಥೆಯನ್ನು ನನಗೆ ಹಾಗೂ ಅಕ್ಕನಿಗೆ ಹೇಳಿದ್ದಳು.

ಅಜ್ಜಿಗೆ ಸುಮಾರು ಹದಿನೈದು ಗಂಡುಗಳು ಬಂದು ವಧುಪರೀಕ್ಷೆ ಮಾಡಿದ್ದರಂತೆ. ಜಾತಕದ ಜೊತೆಗೆ ಹುಡುಗಿಯ ಸ್ವರ ಹೇಗೆ ಎಂದು ತಿಳಿಯಲು ಹಾಡಿಸುವುದು. ಕಿವಿ, ಕೈ-ಕಾಲುಗಳ ಒಟ್ಟು ಪರೀಕ್ಷೆಗಳಾಗುತ್ತಿತ್ತು. ಅಜ್ಜಿ ಉಪಚರಿಸುವಾಗ ಪಾನಕವನ್ನು ಹುಡುಗನ ಅಪ್ಪನ ಮೇಲೆಯೇ ಚೆಲ್ಲಿ ಬಿಟ್ಟಿದ್ದಳಂತೆ. ಅದಕ್ಕಾಗಿಯೇ ಒಂದು ಹುಡುಗ ಅಜ್ಜಿಯನ್ನು ರಿಜೆಕr… ಮಾಡಿದ್ದನಂತೆ.

ಅಕ್ಕನ ಕೈ ಜ್ಯೂಸ್‌ ಬಟ್ಟಲು ಹಿಡಿದಾಗ, ಅವಳಿಗಿಂತ ಜಾಸ್ತಿ ನನಗೆ ಹೆದರಿಕೆ ಆಗುತ್ತಿತ್ತು. ಈಗ ಅಕ್ಕ ಜ್ಯೂಸ್‌ ಚೆಲ್ಲಿ ಹುಡುಗ ಒಪ್ಪಿಗೆಯಾಗದಿದ್ದರೆ ಎಂದೆಲ್ಲಾ ನೆಗೆಟಿವ್‌ ಆಲೋಚನೆಗಳು ನನ್ನ ತಲೆಯಲ್ಲಿ ತುಂಬಿದ್ದವು. ಅಂತೂ ನಾನು ಏನು ಆಲೋಚಿಸಿದ್ದೆನೋ ಅದನ್ನು ಅಕ್ಕ ಮಾಡಿಯೇ ಬಿಟ್ಟಳು. ಹುಡುಗನ ಮೇಲೆ ಜ್ಯೂಸ್‌ ಚೆಲ್ಲಿಯೇ ಬಿಟ್ಟಳು. ಅವನ ವೈಟ್‌ ಶರ್ಟ್‌ ಪೂರ್ತಿ ಬಣ್ಣವಾಗಿ ಹೋಯಿತು. 

Advertisement

ಅಲ್ಲಿಗೆ ಕತೆ ಮುಗಿಯಿತು ಎಂದುಕೊಂಡೆ. ಆದರೆ ಹುಡುಗನ ಅಪ್ಪ-ಅಮ್ಮ, “ನಮ್ಮ ಹುಡುಗನ ಬಾಳಲ್ಲಿ ಈಗಲೇ ಬಣ್ಣ ತುಂಬಿ ಬಿಟ್ಟೆ’ ಎಂದು ಶರ್ಟ್‌ ತೋರಿಸಿ ನಗುತ್ತಾ ವಾತಾವರಣ ತಿಳಿಗೊಳಿಸಿದರು. ಹುಡುಗ, ಅಕ್ಕನ ಜೊತೆ ಸ್ವಲ್ಪ ಏಕಾಂತದಲ್ಲಿ ಮಾತನಾಡಬೇಕು ಎಂದು ಕರೆದು, “ಹೆದರಬೇಡಿ. ನಿಮ್ಮನ್ನು ನಿಮ್ಮ ಮನೆಯವರು ನೋಡಿಕೊಂಡಂತೆ ನೋಡಿಕೊಳ್ಳುತ್ತೇನೆ.’ ಎಂದು ಸಾಂತ್ವನ ಹೇಳಿದ್ದನ್ನು ನನ್ನ ಕಳ್ಳ ಕಿವಿಗಳು ಕೇಳಿಸಿಕೊಂಡವು.

ಎಲ್ಲಾ ಒಪ್ಪಿಕೊಂಡು ಮದುವೆಯಾಗಿ ಈಗ ಐದಾರು ವರ್ಷ ಕಳೆದುಹೋಗಿದೆ. ಅಕ್ಕ ಆ ಮನೆಯಲ್ಲಿ ಸೊಸೆಯಾಗಿರದೇ ಮಗಳೇ ಆಗಿದ್ದಾಳೆ. ಈಗ ನಾಡಿದ್ದು ನನ್ನ ವಧುಪರೀಕ್ಷೆ. ಮತ್ತೆ ಅಜ್ಜಿ ಅವಳ ವಧು ಪರೀಕ್ಷೆಯ ಕಥೆಯ ಜೊತೆ ಅಕ್ಕನ ಕಥೆಯನ್ನು ಸೇರಿಸಿ ನನಗೆ ಹೇಳುತ್ತಿದ್ದಾಳೆ.

* ಪ್ರಭಾ ಹೆಗಡೆ ಭರಣಿ

Advertisement

Udayavani is now on Telegram. Click here to join our channel and stay updated with the latest news.

Next