Advertisement

ಮತ್ತೆ ಬಿಜೆಪಿ ಸರ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ:ಡಿ.ಕೆ. ಅರುಣಾ

06:31 PM Jul 07, 2021 | Team Udayavani |

ಕಲಬುರಗಿ: ಮುಂಬರುವ 2023ರ ರಾಜ್ಯ ವಿಧಾನ ಸಭೆ ಚುನಾವಣೆಗೆ ಕಾರ್ಯಕರ್ತರು ಈಗಲೇ ಸಿದ್ದತೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ರಾಜ್ಯದ ಸಹ ಉಸ್ತುವಾರಿ ಡಿ.ಕೆ. ಅರುಣಾ ಕರೆ ನೀಡಿದರು. ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆ-ಮನೆಗೆ ಮುಟ್ಟಿಸುವ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ಮುಖ್ಯವಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವ ನಿಟ್ಟಿನಲ್ಲಿ ಧುಮುಕಬೇಕು ಎಂದರು. ಕೊರೊನಾ ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೃಢ ಹೆಜ್ಜೆಗಳನ್ನಿಟ್ಟಿದೆ. ವಿರೋಧ ಪಕ್ಷಗಳು ಯಾವುದೇ ಟೀಕೆ ಮಾಡದ ರೀತಿಯಲ್ಲಿ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ವಕ್ತಾರ ಹಾಗೂ ಸೇಡಂ ಮತಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, “ಸೇವಾ ಹಿ ಸಂಘಟನೆ’ ಹೆಸರಿನಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 1.20 ಲಕ್ಷ ಆಹಾರದ ಕಿಟ್‌ ಹಂಚಲಾಗಿದೆ. ಅದೇ ರೀತಿ ಎರಡು ಲಕ್ಷ ಜನರಿಗೆ ಊಟ ವಿತರಿಸಲಾಗಿದೆ ಎಂದರು. ಮುಂದುವರಿದು ಮಾತನಾಡಿದ ತೇಲ್ಕೂರ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌  ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ.

ಬಿಜೆಪಿ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದೆ. ಆದರೆ ಮೀಸಲಾತಿ ನಿಗದಿ ಮಾಡುವುದು ಚುನಾವಣೆ ಆಯೋಗ. ಸಂವಿಧಾನದ ಅರಿವಿದ್ದರೂ ಕಾಂಗ್ರೆಸ್‌ ಪಕ್ಷ ಬಿಜೆಪಿ ಕೈವಾಡವಿದೆ ಎಂದು ಹೇಳುತ್ತಿರುವುದು ಶೋಭೆ ತರುವಂತದ್ದಲ್ಲ. ಮೀಸಲಾತಿ ನಿಗದಿಯಲ್ಲಿ ಬಿಜೆಪಿ ಕೈವಾಡವಿಲ್ಲ. ಬಿಜೆಪಿ ಸರ್ವ ವರ್ಗಗಳ ಹಿತ ಕಾಪಾಡುವ ಪಕ್ಷವಾಗಿದೆ. ಸರ್ವರಿಗೂ ಸಮಪಾಲು-ಸಮಬಾಳು ಎಂಬುದು ರಾಜ್ಯ ಬಿಜೆಪಿ ಸರ್ಕಾರದ ತತ್ವವಾಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ಮಾಲಿಕಯ್ಯ ವಿ. ಗುತ್ತೇದಾರ, ಶಾಸಕರಾದ ಸುಭಾಷ ಆರ್‌. ಗುತ್ತೇದಾರ, ಬಸವರಾಜ ಮತ್ತಿಮಡು, ಡಾ| ಅವಿನಾಶ ಜಾಧವ, ಸುನೀಲ ವಲ್ಲಾಪುರೆ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸಿದ್ದಾಜೀ ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನೀರಾವರಿ ಯೋಜನೆಗಳ ವಲಯ ಕಾಡಾ ಅಧ್ಯಕ್ಷ ಹರ್ಷವರ್ಧನ ಗೂಗಳೆ, ಬಿಜೆಪಿ ಸಹ ಪ್ರಭಾರಿ ಸೂರ್ಯಕಾಂತ ದೋಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಬಿರಾದಾರ, ನಾಗಪ್ಪ ಕೊಳ್ಳಿ , ಮಾಧ್ಯಮ ವಿಭಾಗದ ಪ್ರಮುಖರಾದ ಸಂತೊಷ ಹಾದಿಮನಿ, ಅರುಣ ಕುಲಕರ್ಣಿ, ಬಾಬುರಾವ್‌ ಹಾಗರಗುಂಡಗಿ ಮತ್ತಿತರರು ಇದ್ದರು. ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪ್ರಾಸ್ತಾವಿಕ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಶೋಕ ಬಗಲಿ ನಿರೂಪಿಸಿದರು.

Advertisement

ವಿಜನ್‌-2050ಗೆ ಕೈ ಜೋಡಿಸಲು ನಿರ್ಣಯ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರ ಕನಸಿನ ಯೋಜನೆಯಾದ ವಿಷನ್‌-2050ಕ್ಕೆ ಬಿಜೆಪಿ ಸರ್ವನಿಟ್ಟಿನಿಂದ ಕೈ ಜೋಡಿಸುವ ಹಾಗೂ ಪಕ್ಷದ ಅಭಿವೃದ್ಧಿಗಾಗಿ ದುಡಿದಿರುವ ಕಾರ್ಯಕರ್ತರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ಕಲ್ಪಿಸುವ ನಿರ್ಣಯಗಳನ್ನು ಮಂಗಳವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಒಮ್ಮತದಿಂದತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕಿಟ್‌ ಹಾಗೂ ಊಟ ವಿತರಣೆಯಲ್ಲದೇ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ| ಶ್ಯಾಮ್‌ಪ್ರಸಾದ ಮುಖರ್ಜಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ನಡೆಸಿದ್ದಲ್ಲದೇ 11 ಲಕ್ಷ ಸಸಿ ನೆಡುವ ಆಂದೋಲನ ಹಮ್ಮಿಕೊಳ್ಳಲಾಗಿದೆ.
ರಾಜಕುಮಾರ ಪಾಟೀಲ
ತೇಲ್ಕೂರ, ಬಿಜೆಪಿ ರಾಜ್ಯ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next