ಮಡಿಕೇರಿ :ಅನಾಥ ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆಯುವುದರಿಂದ, ಸಮಾಜದಲ್ಲಿ ಕುಟುಂಬದ ಸುಧಾರಣೆ ಮತ್ತು ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಕೆ.ಮೋಹನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ದತ್ತು ಪ್ರಕ್ರಿಯೆ ಮತ್ತು ಸಮಸ್ಯೆಗಳ ಕುರಿತು ವೈದ್ಯಾಧಿಕಾರಿಗಳು, ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ವಕೀಲರಾದ ಬಾಬುರಾಜ್ ಮಾತನಾಡಿ ಅನಧಿಕೃತವಾಗಿ ದತ್ತು ನೀಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಕಾನೂನು ಬದ್ಧವಾಗಿ ದತ್ತು ಪಡೆಯುವಂತಾಗಬೇಕು ಎಂದರು.
ಬಾಲ ನ್ಯಾಯ ಮಂಡಳಿಯ ಸದಸ್ಯಅಬ್ದುಲ್ ರಿಯಾಜ್ ಮಾತನಾಡಿ. ದತ್ತು ಪಡೆದ ಮಕ್ಕಳನ್ನು ಬಿಕ್ಷೆಗೆ ದೂಡುವುದು ಸಹ ಕಂಡುಬರುತ್ತಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು. ಜಿಲ್ಲಾ ಕಾರ್ಯಕ್ರಮ ಸಂಯೋಜˆಪ್ರಭಾವತಿ ಶಿಶುಗಳ ರಕ್ಷಣೆಗೆ ಸಂಬಂಧಿಸಿದಂತೆ ಮಮತೆಯ ತೊಟ್ಟಿಲು ಕುರಿತು ಮಾಹಿತಿ ನೀಡಿದರು.
ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿಯೇ ಇರುವ ವಿಶೇಷ ದತ್ತು ಕೇಂದ್ರ, ಜಿಲ್ಲಾ ಆಸ್ಪತ್ರೆ ಹಾಗೂ ಬಾಲ ಮಂದಿರಗಳಲ್ಲಿನ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಿ ಎಂದು ಅವರು ಸಲಹೆ ಮಾಡಿದರು. ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಮತ್ತು ಮುಖ್ಯಮಂತ್ರಿ ಮಾತೃಶ್ರೀಯೋಜನೆ ಕುರಿತು ಮಾಹಿತಿ ನೀಡಿದರು.
ಆರ್‌ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಉಷಾ ಅಯ್ಯಣ್ಣ, ನಮಿತಾ ಆರ್. ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸವಿತಾ, ಜಿಲ್ಲಾ ವಿಕಲಚೇತನರ ಅಧಿಕಾರಿ ಸಂಪತ್ ಕುಮಾರ್, ವಕೀಲೆ ದಿವ್ಯಾ, ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ, ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ, ಮಹೇಶ್, ಉಪಸ್ಥಿತರಿದ್ದರು.