ಚಿತ್ತಾಪುರ: ಜ್ಞಾನ ಸಂಪಾದನೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಗ್ರ ಜ್ಞಾನ ಅಳವಡಿಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಆಚಾರ್ಯ ಚಾಣಕ್ಯ ಶಿಕ್ಷಣ ಸಂಸ್ಥೆಯ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ 25 ವರ್ಷದ ಸಾಧನೆಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ದಿನನಿತ್ಯ 4ರಿಂದ 5 ಗಂಟೆಗಳ ಕಾಲ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆತ್ಮವಿಶ್ವಾಸದೊಂದಿಗೆ ಪ್ರವೇಶಿಸಿ ಮಾನಸಿಕವಾಗಿ ಸದೃಢರಾಗಿರಬೇಕು. ಅಂದಾಗ ಯಶಸ್ಸು ಲಭಿಸುತ್ತದೆ ಎಂದರು.
ಹೈದ್ರಾಬಾದ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರೀಕ್ಷೆಗೆ ಭಯ ಪಡದೇ ಉತ್ಸಾಹಿಗಳಾಗಿ ಪರೀಕ್ಷೆ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಾಲೆಯ ಹಳೆ ವಿದ್ಯಾರ್ಥಿಗಳು ಇಲ್ಲಿಯೇ ಕಲಿತು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಬಿಡುವಿನ ಸಮಯದಲ್ಲಿ ಶಾಲೆಗೆ ಆಗಮಿಸಿ ಶಿಕ್ಷಕರ ಜೊತೆ ಚರ್ಚಿಸಿ ಶಾಲೆಯ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕೊಪ್ಪಳದ ವಾಗ್ಮಿ ಲೀಲಾ ಕಾರಟಗಿ ಮಾತನಾಡಿ, ವಿದ್ಯಾರ್ಥಿಗಳು ಓದುವುದರಲ್ಲಿ ಧ್ಯೇಯ, ಗುರಿ ಹೊಂದಿರಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಮ್ಮ ಡವಳಗಿ, ವಿದ್ಯಾಭಾರತಿ ಕಲಬುರಗಿ ಗೌರವಾಧ್ಯಕ್ಷ ಶಂಭುರೆಡ್ಡಿ, ಸಹ ಶಿಕ್ಷಕಿ ಮರವೀನ್ ಸುಲ್ತಾನಾ, ಮಹೇಶ ಕುಮಾರ ಭಾವಿಕಟ್ಟಿ ಮಾತನಾಡಿದರು.
ಅಳ್ಳೊಳ್ಳಿಯ ಸಾವಿರ ದೇವರ ಸಂಸ್ಥಾನ ಮಠದ ಸಂಗಮನಾಥ ಸ್ವಾಮೀಜಿ ಸಾನ್ನಿಧ್ಯ, ಸಂಸ್ಥೆ ಅಧ್ಯಕ್ಷ ಡಾ| ಶ್ರೀನಿವಾಸರೆಡ್ಡಿ ಕಂದಕೂರ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೀರಸಂಗಪ್ಪ ಸುಲೇಂಗಾವ ಪ್ರಾಸ್ತಾವಿಕ ಮಾತನಾಡಿದರು. ವಿಷ್ಟುವರ್ಧನ್ ರೆಡ್ಡಿ ಸ್ವಾಗತಿಸಿದರು, ವೀರೇಶ ಮಕಪಾ, ವಿಜಯಲಕ್ಷ್ಮೀ ಸಾದ್ವಿ ನಿರೂಪಿಸಿದರು, ಭೀಮಪ್ಪ ದಂಡು ವಂದಿಸಿದರು.