Advertisement

ಫಲಪುಷ್ಪ ಪ್ರದರ್ಶನದಲ್ಲಿ ಬುದ್ಧ ಮಂದಿರ ಮಾದರಿ

03:55 PM Jan 28, 2018 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ನೋಟ ಮತ್ತು ಕೆಲಸದ ವೈಖರಿ ಬದಲಾಗುತ್ತಿದೆ. ನಿಧಾನಕ್ಕೆ ರೈತ ಸ್ನೇಹಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಅಲ್ಲದೆ, ರೈತರನ್ನು ವಾಣಿಜ್ಯ ಕೃಷಿಯ ಕಡೆಗೆ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಜ. 29ರಿಂದ ನಗರದ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ ಆರಂಭವಾಗುವ ಫಲಪುಷ್ಪ ಪ್ರದರ್ಶನ ಗಮನ ಸೆಳೆಯುವಂತೆ ಮಾಡಲಾಗುತ್ತಿದೆ.

Advertisement

ಜಿಲ್ಲೆಯ ತೋಟಗಾರಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಂತೆಯೇ ಕಲಬುರಗಿಯಲ್ಲಿ ಈ ಬಾರಿ ವಿಶೇಷವಾಗಿ ಏರ್ಪಾಡು ಮಾಡಲಾಗುತ್ತಿದೆ. ಅದಕ್ಕಾಗಿ ಈ ಭಾಗದಲ್ಲಿ ಪ್ರಸಿದ್ದಗೊಂಡಿರುವ ಮತ್ತು ದೇಶವನ್ನು ಸೆಳೆದಿರುವ ಬುದ್ಧ ಮಂದಿರದ ಮಾದರಿಯನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ. ಜೊತೆಯಲ್ಲಿ ವಿಮಾನದ ಮಾದರಿ ಹಾಗೂ ಅಣಬೆ ಕುರಿತು ವಿಶೇಷ ಭೂಮಿಕೆಯನ್ನು ಸಜ್ಜು ಮಾಡಲಾಗಿದೆ.

ಈ ಬಾರಿ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಬೇಟಿ ನೀಡಿ ಪ್ರದರ್ಶನವನ್ನು ವೀಕ್ಷಿಸುವ ಸಾಧ್ಯತೆ ಇದೆ. ಇದರೊಂದಿಗೆ ಒಟ್ಟು 30 ವಿವಿಧ ಪ್ರಕಾರದ ತರಕಾರಿಗಳು, 300ರಿಂದ 400 ಜನರ ರೈತರು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಾರಿಯ ವಿಶೇಷ ಎಂದರೆ ನೆರಳು ಪರದೆ ಮತ್ತು ಗ್ರೀನ್‌ಹೌಸ್‌ (ಪಾಲಿಹೌಸ್‌, ಸೆಡ್‌ನೆಟ್‌) ಮಾದರಿಗಳನ್ನು ಇಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ರೈತರನ್ನು ಅವುಗಳಕಡೆಗೆ ಸೆಳೆಯುವುದು ಆಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತರಕಾರಿಗಳ ಜೊತೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಪ್ರಕಾರದ ಹೂವುಗಳ ಪ್ರದರ್ಶನ ಹೆಚ್ಚು ಕಾಣಲಿದೆ. ಬುದ್ಧ ಮಂದಿರದ ಮಾದರಿಯನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಬಣ್ಣ ಬಣ್ಣದ ಹೂವುಗಳು ಈ ಬಾರಿ ಹೆಚ್ಚು ಆಕರ್ಷಣೀಯವಾಗಿದ್ದು, ಸೇಡಂ ಮತ್ತು ಕಲಬುರಗಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಜರ್ಬೆರಾ, ಗುಲಾಬಿ, ಆರ್ಸೆನಿಕ್‌ ಮಾದರಿಯ ಹೂವುಗಳು ಈ ಬಾರಿಯ ಆಕರ್ಪಣೆಯಾಗಿರಲಿವೆ. ಅಲ್ಲದೆ ತರಕಾರಿಗಳಲ್ಲಿ ವಿವಿಧ ಬಣ್ಣದ ಡೊಣ್ಣ ಮೆಣಸಿನಕಾಯಿ, ಟಮೆಟೋ, ಸೇರಿದಂತೆ ದ್ರಾಕ್ಷಿ, ದಾಳಿಂಬೆ, ಕಬ್ಬು, ಕಲ್ಲಂಗಡಿ, ಬದನೆ, ಈರುಳ್ಳಿ, ಮೆಣಸಿನಕಾಯಿ, ಬಾಳೆ, ಮೋಸಂಬಿಗಳು ಇರಲಿವೆ. 

ಆಕರ್ಷಣೆಗಳು: ತರಕಾರಿಯಲ್ಲಿ ವಿವಿಧ ಗಣ್ಯರ, ಕವಿಗಳ ಹಾಗೂ ಪ್ರಾಣಿಗಳ ಕೆತ್ತನೆ, ಇಕೆಬಾನಾ, ಹೂವಿನಲ್ಲಿ ನಿರ್ಮಾಣಗೊಂಡ ಕಲಾಕೃತಿಗಳು, ಡ್ರೈಪ್ಲಾವರ್‌ಗಳ ಜೋಡಣೆಯ ಜೊತೆಯಲ್ಲಿ ಹೂವುಗಳ ಮಧ್ಯೆ ಆಕರ್ಷಕ ಸ್ತಬ್ಧ ಚಿತ್ರಗಳನ್ನು ಇಡಲಾಗುವುದು. ಕಲಬುರಗಿಯಲ್ಲೂ ಬೆಂಗಳೂರಿನ ಆಕರ್ಷಣೆ ಮೂಡಿಸುವುದು ಮತ್ತು ಹೈಕ ಭಾಗದಲ್ಲಿ ತೋಟಗಾರಿಕೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರದರ್ಶನವನ್ನು ತುಂಬಾ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುತ್ತಿದೆ. ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ ಪ್ರತಿ ದಿನವೂ ಬೆಳಗ್ಗೆ 9ರಿಂದ ಸಂಜೆ 8 ಗಂಟೆ ವರೆಗೆ ವೀಕ್ಷಿಸಬಹುದು. 29ರಂದು ಸಂಜೆ 4:30ಕ್ಕೆ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು.’

Advertisement

ಹೊಸ ತಲೆಮಾರಿಗೆ ಹೆಜ್ಜೆ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನದ ಮೂಲ ಆಶಯವನ್ನು ಬದಲಾಯಿಸಲಾಗುತ್ತಿದೆ. ರೈತರಿಗೆ ಮತ್ತು ಯುವಕರಿಗೆ ಉತ್ತೇಜನ ಮತ್ತು ತೋಟಗಾರಿಕೆಯ ಹರಡುವಿಕೆಗಾಗಿ
ಕೆಲವು ವಿಶೇಷತೆ ಹೊಂದಲಾಗಿದೆ. ಬುದ್ಧ ಮಂದಿರದ ಮಾದರಿಯನ್ನು ಹೂವುಗಳ ಮಧ್ಯೆ ಇರಿಸಲಾಗುತ್ತಿದೆ. ಆದ್ದರಿಂದ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಪ್ರದರ್ಶನ ನೋಡಬೇಕು.
 ಮೊಹಮ್ಮದ್‌ ಅಲಿ, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ 

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next