Advertisement

ಸಮರ್ಪಕ ಆರೋಗ್ಯ ಸೇವೆ ದೊರೆಯಲಿ

03:17 PM Aug 27, 2019 | Team Udayavani |

ಯಾದಗಿರಿ: ಗ್ರಾಮೀಣ ಭಾಗದಲ್ಲಿ ಸಮರ್ಪಕ ಆರೋಗ್ಯ ಸೇವೆ ನೀಡಲು ಸರ್ಕಾರ ಎಎನ್‌ಎಂ ಉಪ ಕೇಂದ್ರಗಳನ್ನು ಆರಂಭಿಸಿ ಸಿಬ್ಬಂದಿಗಳನ್ನು ನೇಮಿಸಿದ್ದರೂ ಗ್ರಾಮೀಣ ಭಾಗದಲ್ಲಿ ಯಾವೊಬ್ಬ ನರ್ಸ್‌ಗಳು ಸೇವೆಗೆ ಲಭ್ಯ ಇರುತ್ತಿಲ್ಲ ಎಂದು ಪುಟಪಾಕ ತಾಪಂ ಸದಸ್ಯ ನಾಗೇಂದ್ರಪ್ಪ ಚಂಡರಕಿ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಭೀಮವ್ವ ಅಚ್ಚೋಲಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಇನ್ನೋರ್ವ ಸದಸ್ಯ ತಿಪ್ಪಣ್ಣ ಇಮಲಾಪೂರ ಮಾತನಾಡಿ, ಗುರುಮಠಕಲ್ ಭಾಗದ ಹಳ್ಳಿಗಳಲ್ಲಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಇದರಿಂದ ಕೃಷಿ ಪಂಪ್‌ಸೆಟ್ ಹೊಂದಿದ ರೈತರಿಗೆ ತೊಂದರೆಯಾಗಿದೆ. ಉತ್ತರಿಸಬೇಕಾದ ಅಧಿಕಾರಿ ಮಾತ್ರ ಸಭೆಗೆ ಪದೇ ಪದೇ ಗೈರು ಆಗುತ್ತಿದ್ದು, ಕೂಡಲೇ ಅವರನ್ನು ಸಭೆಗೆ ಕರೆಯಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿದ ತಾಪಂ ಕಾರ್ಯನಿರ್ವಾಹ ಅಧಿಕಾರಿ ಶಿವಸಂಗಪ್ಪ ಕುಣಸಿಂಗಿ ಮೊಬೈಲ್ ಮೂಲಕ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರನ್ನು ಸಂಪರ್ಕಿಸಿ ಸಭೆಗೆ ಆಗಮಿಸಬೇಕು ಎಂದು ಸೂಚಿಸಿದರು. ಕೊನೆಗೆ ಸಭೆ ಮುಕ್ತಾಯಗೊಂಡರೂ ಅಧಿಕಾರಿ ಮಾತ್ರ ಬರದಿರುವುದು ಸದಸ್ಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಾಲೂಕು ಪಂಚಾಯತಿ ಸದಸ್ಯರು ಸಭೆಯಲ್ಲಿ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಳ್ಳಿಗಳಲ್ಲಿ ಸರ್ಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲಕ್ಷಾಂತರ ರೂ. ಹಣ ಖರ್ಚು ಮಾಡಿ ನಿರ್ಮಾಣ ಮಾಡಿದ್ದಾರೆ. ಆದರೆ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಜನರಿಗೆ ನೀರು ಸಿಗುತ್ತಿಲ್ಲ. ಇದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.

ಇದಕ್ಕೆ ಸಮಜಾಯಿಸಿ ನೀಡಲು ಯತ್ನಿಸಿದ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿ ಹಾಗೂ ಭೂ ಸೇನಾ ನಿಗಮ ಅಧಿಕಾರಿಯನ್ನು ಸರ್ವ ಸದಸ್ಯರು ತರಾಟೆಗೆ ತೆಗೆದುಕೊಂಡು ಘಟಕಗಳ ದುರಸ್ತಿ ಮಾಡಿಸಲು ಒತ್ತಾಯಿಸಿದರು. ಈ ವೇಳೆ ಸದಸ್ಯ ಮಲ್ಲಿಕಾರ್ಜುನ ಅರುಣಿ ಮಾತನಾಡಿ, ಭೂ ಸೇನಾ ಇಲಾಖೆಯಿಂದ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಮಾಹಿತಿ ಇಲ್ಲದೇ ಸಭೆಗೆ ಬರುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Advertisement

ಸದಸ್ಯ ಮಖ್ಬುಲ್ ಪಟೇಲ್ ಮಾತನಾಡಿ, ಭೂ ಸೇನಾ ನಿಗಮಕ್ಕೆ ಸರ್ಕಾರಿಂದ ಮೋದಲು ಹಣ ಬಿಡುಗಡೆಯಾದ ನಂತರವೇ ಕಾಮಗಾರಿ ಆರಂಭಿಸುತ್ತಾರೆ. ಆದರೆ ಹಲವಾರು ಕಾಮಗಾರಿಗಳು ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಎಂದು ದೂರಿದರು.

ಸದಸ್ಯರಾದ ಭಾಸ್ಕರರೆಡ್ಡಿ, ಭಗವಂತರೆಡ್ಡಿ ಕೊಂಕಲ್ ಹಾಗೂ ಇತರರು ಮಾತನಾಡಿ, ಕೃಷಿ ಇಲಾಖೆಗೆ ಸರ್ಕಾರದಿಂದ ಪೂರೈಕೆಯಾಗುವ ಕ್ರೀಮಿ ಕೀಟ ನಾಶಕಗಳು ಹಾಗೂ ಕೃಷಿ ಪರಿಕರಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಕೃಷಿ ಅಧಿಕಾರಿಯನ್ನು ಪ್ರಶ್ನಿಸಿದರು. ಅದಕ್ಕೆ ಕೃಷಿ ತಾಂತ್ರಿಕ ಅಧಿಕಾರಿ ಅಯ್ಯಣ್ಣ, ನಾವು ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮೂಲಕ ಅಧಿಕಾರಿಗಳಿಗೆ ನೀಡುತ್ತೇವೆ ಎಂದಾಗ ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕ ಸದಸ್ಯರು ರೈತರಿಗೆ ತಾಡಪತ್ರಿ ಇನ್ನು ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು. ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದೆ. ಲಾಟರಿ ಮೂಲಕ ಆಯ್ಕೆ ಮಾಡಿ ವಿತರಿಸಲಾಗುವುದು ಎಂದರು.

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ತೊಷನ್‌ ಕುಮಾರ್‌ ಸಭೆಗೆ ಮಾಹಿತಿ ನೀಡುತ್ತ ಈ ವರ್ಷ ತಮಿಳು ನಾಡಿನಿಂದ 6500 ಹೆಬ್ಬೆವು ಹಾಗೂ ಶ್ರೀಗಂಧ ಸಸಿಗಳನ್ನು ಖರೀದಿ ಮಾಡಿ ಆಸಕ್ತ ರೈತರಿಗೆ ನೀಡಲಾಗಿದೆ. ಅದಕ್ಕೆ ಇಲಾಖೆಯಿಂದ ಪ್ರೋತ್ಸಾಹ ಹಣ ಕೂಡ ನೀಡಲಾಗುವುದು ಎಂದು ತಿಳಿಸಿದರು. ಅಲ್ಲದೇ ಯಲಸತ್ತಿ ಗ್ರಾಮದಲ್ಲಿ 20 ಎಕರೆ ಸಸ್ಯ ಉತ್ಪಾದನಾ ಘಟಕದಲ್ಲಿ ನುಗ್ಗೆ, ಬೇವು, ಕಾಣಿಗ, ನೆರಳೆ ಹಾಗೂ ಹುಣಸೆ ಸಸಿಗಳನ್ನು ತಯಾರಿಸಿ ಗ್ರಾಮ ಪಂಚಾಯಿತಿಗೆ ತಲಾ 500 ಸಸಿಗಳನ್ನು ನೀಡುವ ಮೂಲಕ ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ಮೀನುಗಾರಿಕೆ ಇಲಾಖೆ ಅಧಿಕಾರಿ ಮಹೇಶ ಸಭೆಗೆ ಮಾಹಿತಿ ನೀಡಿ, ತಾಲೂಕಿನಲ್ಲಿ 22 ಮೀನುಗಾರಿಕೆಗೆ ಉಪಯುಕ್ತ ಕೆರೆಗಳಿವೆ. ಮೀನು ಗಾರಿಕೆ ಮಾಡಲು ಟೆಂಡರ್‌ ಕರೆಯಲಾಗಿದೆ. ಇಲಾಖೆಯಿಂದ ಗುರುಮಠಕಲ್ ಮತಕ್ಷೇತ್ರದ 50 ಮೀನುಗಾರ ಕುಟುಂಬಗಳಿಗೆ ಮನೆ ಮಂಜೂರಾಗಿವೆ. ಯಾದಗಿರಿ ಮತಕ್ಷೇತ್ರದಲ್ಲಿ 25 ಮನೆಗಳು ಮಂಜೂರಾಗಿದೆ. ಆದರೆ ಆಯ್ಕೆಯಾದ ಫಲಾನುಭವಿಗಳು ಇನ್ನು ಕಚೇರಿಗೆ ಅಗತ್ಯ ದಾಖಲಾತಿಗಳನ್ನು ನೀಡಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರಾಮಲಿಂಗಮ್ಮ, ಸದಸ್ಯರಾದ ಕೃಷ್ಣಾ ನಸಲವಾಯಿ, ಸಾಬಣ್ಣ ಯರಗೋಳ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next