ನಗರದ ಕೇಂದ್ರ ಸ್ಥಾನವಾದ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಇದೀಗ ಅವ್ಯವಸ್ಥೆಯಿಂದ ಮತ್ತು ಅಪಾಯದಿಂದ ಕೂಡಿದೆ. ಒಂದೆಡೆ ನಿಲ್ದಾಣಕ್ಕೆ ಹಾಸಿದ ಶೀಟುಗಳು ತೂತಾದರೆ ಮತ್ತೊಂದೆಡೆ ಅಲ್ಲೇ ಪಕ್ಕದಲ್ಲಿರುವ ವಿದ್ಯುತ್ ಬಾಕ್ಸ್ ಬಾಯ್ದೆರೆದುಕೊಂಡಿದ್ದು, ಸಾರ್ವಜನಿಕರಿಗೆ ಅಪಾಯ ಸೂಚಿಸುತ್ತಿದೆ. ಇಷ್ಟಾದರೂ, ಸಂಬಂಧಪಟ್ಟ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಹೆಚ್ಚಿನ ಭಾಗಗಳಿಗೆ ಸಂಚಾರ ಆರಂಭವಾಗುವುದು ಸ್ಟೇಟ್‌ಬ್ಯಾಂಕ್‌ನಿಂದ. ಸರ್ವೀಸ್ ಬಸ್ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ದುರ್ನಾತ, ರಸ್ತೆಯ ಗುಂಡಿಗಳು, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, ಸಾರ್ವಜನಿಕ ಸ್ಥಳದಲ್ಲೇ ಮೂತ್ರ ವಿಸರ್ಜನೆ ಹೀಗೆ ಇಲ್ಲಿನ ಸಮಸ್ಯೆಗಳು ನೂರಾರು. ಆಡಳಿತ ವ್ಯವಸ್ಥೆ ಕಂಡರೂ ಕಾಣದಂತೆ ಮೌನವಾಗಿದೆ. ಖಾಸಗಿ ಬಸ್ ನಿಲ್ದಾಣಕ್ಕೆ ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ಹೊರ ಜಿಲ್ಲೆಯ ಜನರು ಆಗಮಿಸುತ್ತಿದ್ದು, ಸ್ವಚ್ಛ ಮಂಗಳೂರು ಪರಿಕಲ್ಪನೆ ಮಾಯವಾಗಿದೆ.
ಸ್ವಚ್ಛತೆಯನ್ನು ಕಡೆಗಣಿಸಲಾಗಿದೆ. ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು ಎಸೆಯಲಾಗುತ್ತಿದೆ. ಬಸ್ ನಿಲ್ದಾಣದ ಬಳಿ ಶೌಚಾಲಯದ ವ್ಯವಸ್ಥೆ ಇದ್ದರೂ ಬಸ್ ಸಿಬಂದಿ ಸೇರಿದಂತೆ ಸಾರ್ವಜನಿಕರು ಇದರ ಉಪಯೋಗ ಪಡೆಯುತ್ತಿಲ್ಲ.
ಬಸ್ ನಿಲ್ದಾಣದ ಒಳಭಾಗದಲ್ಲಿರುವ ಛಾವಣಿ ಸಮರ್ಪಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಅದರೊಂದಿಗೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಇರುವ ಆಸನದಲ್ಲಿ ಕೆಲವರು ಮಲಗಿಕೊಂಡಿರುತ್ತಾರೆ. ಇದರಿಂದ ಮುದುಕರು ಹಾಗೂ ಮಗುವನ್ನು ಹಿಡಿದು ನಿಲ್ಲುವ ಮಹಿಳೆಯರಿಗೆ ಕಷ್ಟವಾಗುತ್ತಿದೆ.
ಬಸ್ ನಿಲ್ದಾಣದ ಒಳಗೆ ಜನರು ತುಂಬಿಸಿಕೊಂಡ ಬಸ್ಸುಗಳು ಅಲ್ಲಲ್ಲಿ ನಿಂತು ಜನರನ್ನು ಹತ್ತಿಸಿಕೊಳ್ಳುವ ಕಾರಣ ಬಸ್ ನಿಲ್ದಾಣದ ಹೊರಭಾಗದಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಕಮಿಷನರ್ ಕಚೇರಿ ಮುಂಭಾಗದ ರಸ್ತೆ, ಲೇಡಿಗೋಷನ್ ರಸ್ತೆ, ಸ್ಟೇಟ್‌ಬ್ಯಾಂಕ್-ಬೇಬಿ ಅಲಾಬಿ ರಸ್ತೆ, ಸ್ಟೇಟ್‌ಬ್ಯಾಂಕ್ -ಹೊಗೆಬಜಾರ್ ರಸ್ತೆ, ಸ್ಟೇಟ್‌ಬ್ಯಾಂಕ್-ಬಂದರು ರಸ್ತೆ, ಸ್ಟೇಟ್‌ಬ್ಯಾಂಕ್-ನೆಲ್ಲಿಕಾಯಿ ರಸ್ತೆ ಸೇರಿದಂತೆ ಉಳಿದ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ.
ನವೀನ್ ಭಟ್ ಇಳಂತಿಲ