ಮುಂಬಯಿ, ನ. 7: ಎಂಆರ್‌ಜಿ ಗ್ರೂಪ್‌ನ ಸಿಎಂಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್ ಶೆಟ್ಟಿ ಅವರಿಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಡಿಸೆಂಬರ್ 25ರಂದು ಬಂಗ್ರಕೂಳೂರಿನಲ್ಲಿರುವ ಗೋಲ್ಡ್‌ಪಿಂಚ್ ಮೈದಾನದಲ್ಲಿ ನಡೆಯುವ ಪ್ರಕಾಶಾಭಿನಂದನಾ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿ. ನಾಡಿನಸರ್ವ ಧರ್ಮದವರನ್ನು ಸೇರಿಸಿ ನಡೆಸುವ ಅಭಿನಂದನಾ ಸಭೆ ಯಶಸ್ವಿಯಾಗಲು ಎಲ್ಲರ ಸಹಕಾರ ಬೇಕು ಎಂದು ಪ್ರಕಾಶಾಭಿನಂದನ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಗೋಲ್ಡ್‌ಪಿಂಚ್ ಹೊಟೇಲ್‌ನಲ್ಲಿ ನಡೆದ ಪ್ರಕಾಶಾಭಿನಂದನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಪ್ರಕಾಶಾಭಿನಂದನಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಮ್ಮಾನ, ಗೌರವ ಅಭಿನಂದನೆ ಸಹಿತ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಮಿತಿಯ ಪ್ರಧಾನ ಸಂಚಾಲಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ ಪ್ರಕಾಶಾಭಿನಂದನಾ ಸಮಾರಂಭವನ್ನು ಆದರ್ಶ ಕಾರ್ಯಕ್ರಮವನ್ನಾಗಿಸಬೇಕು. ಇದೊಂದು ಆಡಂಬರದ ಸಂಭ್ರಮ ಅಲ್ಲ. ಪ್ರಕಾಶ್ ಶೆಟ್ಟಿ ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು ಎನ್ನುವ ಉದ್ದೇಶ ಇದೆ ಎಂದರು. ಕಾರ್ಯಕ್ರಮದ ಉಸ್ತುವಾರಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಎಂ. ಮೋಹನ್ ಆಳ್ವ ಅವರು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ
ಸಮಿತಿಯವರು ಅವರಿಗೆ ನೀಡಲಾದ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಸಭೆಯಲ್ಲಿ ಬೇರೆ ಬೇರೆ ಸಮಿತಿಗಳನ್ನು ರಚಿಸಿ ಎಲ್ಲಾ ಸಂಘದ ಪ್ರಮುಖರಿಗೆ ಜವಾಬ್ದಾರಿಯನ್ನು ನೀಡಲಾಯಿತು. ಸಭೆಯಲ್ಲಿ ಪ್ರಕಾಶಾಭಿನಂದನಾ ಸಮಿತಿಯ ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮನೋಹರ ಶೆಟ್ಟಿ ಸಾಯಿರಾಧಾ, ದೇವಿ ಚರಣ್ ಶೆಟ್ಟಿ, ಎಂ. ದೇವಾನಂದ ಶೆಟ್ಟಿ, ಸುರೇಶ್ ಶೆಟ್ಟಿ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.