ನವದೆಹಲಿ: ಭಾರತದ ಸೀರಂ ಇನ್ಸ್ ಟಿಟ್ಯೂಟ್ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಯುರೋಪ್ ನ 7 ದೇಶಗಳು ಸೇರಿದಂತೆ ಒಟ್ಟು ಒಂಬತ್ತು ದೇಶಗಳು ಗ್ರೀನ್ ಪಾಸ್ ಪೋರ್ಟ್ ಪಟ್ಟಿಗೆ ಸೇರ್ಪಡೆ ಮಾಡಿದ್ದು ಇದರಿಂದ ಕೋವಿಡ್ ಬಿಕ್ಕಟ್ಟಿನ ನಡುವೆ 9 ದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಆತಂಕ ದೂರವಾದಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಾರು ಅಪಘಾತಕ್ಕೆ ಕಾರಣ ಏನು? ಪ್ರಾಣಾಪಾಯದಿಂದ ಪುತ್ರ ಪಾರಾಗಿದ್ದು ಹೇಗೆ ಎಂದು ಹೇಳಿದ ಜಗ್ಗೇಶ್
ಆಸ್ಟ್ರಿಯಾ, ಜರ್ಮನಿ, ಸ್ಲೋವೇನಿಯಾ, ಗ್ರೀಕ್, ಐಸ್ ಲ್ಯಾಂಡ್, ಐರ್ಲ್ಯಾಂಡ್, ಸ್ಪೇನ್, ಎಸ್ಟೋನಿಯಾ ಮತ್ತು ಸ್ವಿಟ್ಜರ್ ರ್ಲೆಂಡ್ ಸೇರಿದಂತೆ ಏಳು ದೇಶಗಳು ಕೋವಿಶೀಲ್ಡ್ ಲಸಿಕೆಯನ್ನು ಗ್ರೀನ್ ಪಾಸ್ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಮುಖ್ಯವಾಗಿ ಭಾರತ ಸರ್ಕಾರದ ಎಲ್ಲಾ ಲಸಿಕೆಗಳಿಗೂ ಮಾನ್ಯತೆ ನೀಡುವುದಾಗಿ ಖಚಿತಪಡಿಸಿರುವ ಎಸ್ಟೋನಿಯಾ, ಭಾರತದಿಂದ ಪ್ರಯಾಣಿಕರು ಎಸ್ಟೋನಿಯಾಕ್ಕೆ ಪ್ರಯಾಣಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಪಡೆದ ವ್ಯಕ್ತಿಗಳು ಎಸ್ಟೋನಿಯಾಕ್ಕೆ ಭಾರತದಿಂದ ಪ್ರಯಾಣಿಸಬಹುದಾಗಿದೆ.
ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಗ್ರೀನ್ ಪಾಸ್ ಪಟ್ಟಿಗೆ ಸೇರಿಸಲು ಯುರೋಪಿಯನ್ ಒಕ್ಕೂಟ ನಿರಾಕರಿಸಿದ್ದು, ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಪ್ರಯಾಣಿಕರು ಭಾರತದಿಂದ ಈ ದೇಶಗಳಿಗೆ ಪ್ರಯಾಣಿಸಲು ತೊಂದರೆಯಾಗುತ್ತಿತ್ತು. ಅಲ್ಲದೇ ಕ್ವಾರಂಟೈನ್ ಗೆ ಒಳಗಾಗಬೇಕಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ ತಿರುಗೇಟು ನೀಡಿತ್ತು. ಆ ಬಳಿಕ ಈ ಬೆಳವಣಿಗೆ ನಡೆದಿರುವುದಾಗಿ ವರದಿ ವಿವರಿಸಿದೆ.
ಯುರೋಪಿಯನ್ ಒಕ್ಕೂಟದ ಉನ್ನತ ವೈದ್ಯಕೀಯ ಸಂಸ್ಥೆಯಾದ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ(ಇಎಂಎ), ಇಲ್ಲಿಯವರೆಗೆ ಕೇವಲ ನಾಲ್ಕು ಲಸಿಕೆಗಳಿಗೆ ಮಾತ್ರ ಗ್ರೀನ್ ಪಾಸ್ ಪೋರ್ಟ್ ನಲ್ಲಿ ಮಾನ್ಯತೆ ನೀಡಿತ್ತು. ಫೈಜರ್ ಬಯೋ ಎನ್ ಟೆಕ್ ನ ಕಾಮಿರ್ನಾಟಿ, ಅಮೆರಿಕದ ಮೊಡೆರ್ನಾ ಕೋವಿಡ್ ಲಸಿಕೆ, ಆಸ್ಟ್ರಾಜೆನಿಕಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ನ ಜಾನ್ಸೆನ್ ಲಸಿಕೆ ಪಡೆದವರಿಗೆ ಮಾತ್ರ ವ್ಯಾಕ್ಸಿನೇಷನ್ ಪಾಸ್ ಪೋರ್ಟ್ ನೀಡುತ್ತಿದ್ದು, ಕೋವಿಡ್ ಬಿಕ್ಕಟ್ಟಿನ ನಡುವೆ ಪ್ರಯಾಣಿಕರಿಗೆ ಮುಕ್ತವಾಗಿ ಪ್ರಯಾಣಿಸಲು ಅನುಮತಿ ನೀಡಿತ್ತು.