ಬರ್ಲಿನ್: ಕೋವಿಡ್ 19ರ ಡೆಲ್ಟಾ ರೂಪಾಂತರ ಸೋಂಕು ಹರಡಿದ್ದ ಬ್ರಿಟನ್, ಭಾರತ ಮತ್ತು ಇತರ ಮೂರು ದೇಶಗಳ ಪ್ರಯಾಣಿಕರ ಮೇಲಿನ ನಿಷೇಧವನ್ನು ರದ್ದುಪಡಿಸಿರುವುದಾಗಿ ಜರ್ಮನಿಯ ಆರೋಗ್ಯ ಏಜೆನ್ಸಿ ತಿಳಿಸಿದೆ.
ಇದನ್ನೂ ಓದಿ:ಜನಸಂಖ್ಯಾ ಸ್ಫೋಟದಿಂದ ಸಂಪನ್ಮೂಲ ಕೊರತೆ, ಹಲವು ಸಮಸ್ಯೆ ಉದ್ಭವ
ಡೆಲ್ಟಾ ರೂಪಾಂತರ ತಳಿ ಸೋಂಕು ಹೊಂದಿರುವ ದೇಶಗಳೆಂದು ಪಟ್ಟಿ ಮಾಡಲಾಗಿರುವ ಭಾರತ, ನೇಪಾಳ, ರಷ್ಯಾ, ಪೋರ್ಚುಗಲ್ ಮತ್ತು ಬ್ರಿಟನ್ ಅನ್ನು ಬುಧವಾರದಿಂದ ಹೆಚ್ಚಿನ ಪ್ರಕರಣಗಳ ದೇಶ ಎಂದು ಮರು ವಿಂಗಡಣೆ ಮಾಡಲಾಗಿದೆ ಎಂದು ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ (ಆರ್ ಕೆಐ) ತಿಳಿಸಿದೆ.
ಈ ಬದಲಾವಣೆಯ ಪರಿಣಾಮ ಜರ್ಮನ್ ನಿವಾಸಿಗಳಲ್ಲದ ಪ್ರಯಾಣಿಕರ ಪ್ರಯಾಣದ ಮೇಲಿನ ನಿಷೇಧವನ್ನು ತೆಗೆದು ಹಾಕಿದಂತಾಗಿದ್ದು, ಕ್ವಾರಂಟೈನ್ ಮತ್ತು ಪರೀಕ್ಷೆಯ ನಿಯಮಕ್ಕೆ ಬದ್ಧರಾಗುವವರು ಜರ್ಮನಿಯನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ ಎಂದು ವಿವರಿಸಿದೆ.
ತವರು ನೆಲದಲ್ಲಿ ಕೋವಿಡ್ ನ ನೂತನ ರೂಪಾಂತರಿ ತಳಿ ಹರಡದಿರುವ ನಿಟ್ಟಿನಲ್ಲಿ ಜರ್ಮನಿ ರೂಪಾಂತರಿ ವೈರಸ್ ಪ್ರಕರಣಗಳ ದೇಶಗಳ ಪಟ್ಟಿಯನ್ನು ಮಾಡಿ ಪ್ರಯಾಣಿಕರ ಮೇಲೆ ನಿರ್ಬಂಧ ವಿಧಿಸಿತ್ತು.
ಕಳೆದ ವಾರ ಜರ್ಮನಿ ಆರೋಗ್ಯ ಸಚಿವ ಜೆನ್ಸ್ ಸ್ಪಾನ್, ಡೆಲ್ಟಾ ರೂಪಾಂತರ ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿದೆ. ಆದರೆ ಕೋವಿಡ್ 19 ರೂಪಾಂತರಿ ತಳಿಯಿಂದ ಕಂಗೆಟ್ಟಿರುವ ದೇಶಗಳ ಪ್ರಯಾಣಿಕರ ಮೇಲಿನ ನಿಷೇಧ ತೆಗೆದು ಹಾಕುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದರು.