ಕಲಬುರಗಿ: ತೊಗರಿ ಕಣಜದ ಬೀಡಿನಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಯಲ್ಲಿ ಲಕ್ಷಾಂತರ ಜನರು ಒಂದೆಡೆ ಸೇರಿದ್ದಾರೆ. ಭದ್ರತೆಗಾಗಿ ಹಲವು ಸಂಖ್ಯೆಯಲ್ಲಿ ಆರಕ್ಷಕರಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವುದು ಜರ್ಮನ್ನಿನ ನಾಯಿ!
ಭದ್ರತೆಯಲ್ಲಿ ಇದರ ಪಾತ್ರವೂ ಬಹಳ ಮುಖ್ಯ. ಮೀಸಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೀಜರ್ ಬಾಂಬ್ ಪತ್ತೆ ಹಚ್ಚುವಲ್ಲಿ ಸಿದ್ಧಹಸ್ತವಾಗಿದೆ. ಈ ಹಿಂದೆ ಬೆಂಗಳೂರಿನ ಆಡುಗೋಡಿಯಲ್ಲಿ ಕಾರ್ಯನಿರ್ವಹಿಸಿದ್ದ, ಈ ನಾಯಿ ಈಗ ಬಾಗಲಕೋಟೆಯ ಮೀಸಲು ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
ಹದಿನೈದು ದಿನಕ್ಕೊಮ್ಮೆ ಸ್ನಾನ: ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏಳುವ ಸೀಜರ್, ವಾಯುವಿಹಾರ ಮುಗಿಸಿ ವಿರಮಿಸಿಕೊಳ್ಳುತ್ತದೆ. ನಂತರ ರಾಗಿ ಗಂಜಿ, ಮೊಟ್ಟೆ, ಹಾಲು, ಮಾಂಸ ಸೇವಿಸುತ್ತದೆ. ಜತೆಗೆ ಹದಿನೈದು ದಿನಕ್ಕೆ ಒಂದು ಬಾರಿ ಸ್ನಾನ ಮಾಡು ತ್ತದೆ ಎಂದು ಸೀಜರನ್ನು ನೋಡಿ ಕೊಳ್ಳುತ್ತಿರುವ ಮೀಸಲು ಪಡೆಯ ಪೊಲೀಸ್ ಸಚಿನ್ ಪಾಟೀಲ್ ಮಾಹಿತಿ ನೀಡಿದರು.
ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನ: ಸೀಜರ್‌ನನ್ನು ನೋಡಿಕೊಳ್ಳಲು ಇಬ್ಬರಿದ್ದಾರೆ. ಪ್ರತಿನಿತ್ಯ ಸೀಜರ್ ಚಟುವಟಿಕೆಯಿಂದ ಹಲವು ಕಾರ್ಯಗಳಲ್ಲಿ ಭಾಗವಹಿಸುತ್ತದೆ. ರಾಜ್ಯಮಟ್ಟ ಮತ್ತು ಜಿಲ್ಲಾಮಟ್ಟದ ಹಲವು ಸ್ಪರ್ಧೆಗಳಲ್ಲಿ ಸೀಜರ್ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಬಾಂಬ್ ನಿಷ್ಕ್ರಿಯಗೊಳಿಸುವ ಸಂಬಂಧ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಚಿನ್ ಪಾಟೀಲ್ ಹೇಳಿದರು. ನಾಡಿನ ಹಲವೆಡೆ ನಡೆದ ಹೆಸರಾಂತ ಸಭೆ- ಸಮಾರಂಭಗಳಲ್ಲೂ ಈ ನಾಯಿ ರಕ್ಷಣೆಯಲ್ಲಿ ಭಾಗವಹಿಸಿದೆ.
* ದೇವೇಶ ಸೂರಗುಪ್ಪ