Advertisement

ಜಾರ್ಜ್‌ ರಾಜಿನಾಮೆ ಆಗ್ರಹಿಸಿ ಸೆ. 16ರಂದು ಬಿಜೆಪಿ ಪ್ರತಿಭಟನೆ

06:45 AM Sep 12, 2017 | Team Udayavani |

ಬೆಂಗಳೂರು: ಡಿವೈಎಸ್ಪಿ ಗಣಪತಿ ಸಂಶಯಾಸ್ಪದ ಸಾವು ಕುರಿತು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿರುವುದರಿಂದ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಸೆ. 16ರಂದು ಬಿಜೆಪಿ ಬೆಂಗಳೂರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಂಡಿದೆ.

Advertisement

ಸಚಿವ ಜಾರ್ಜ್‌ ರಾಜೀನಾಮೆ ಆಗ್ರಹಿಸಿ ಸೆ. 16ರಂದು ಬೆಂಗಳೂರಿನಲ್ಲಿ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಮುಖಂಡರು ಸತ್ಯಾಗ್ರಹ ನಡೆಸಲಿದ್ದಾರೆ. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಗಣಪತಿ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿ ವಾರ ಕಳೆದರೂ ಸಚಿವ ಜಾರ್ಜ್‌ ರಾಜೀನಾಮೆ ನೀಡಿಲ್ಲ ಮತ್ತು ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸೆ. 16ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ವಿವಿಧ ರೀತಿಯ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಮೂರು ತಿಂಗಳಲ್ಲಿ ಸಿಬಿಐ ತನಿಖೆ ಪೂರ್ಣಗೊಳಿಸಬೇಕು ಎಂದು ಕೋರ್ಟ್‌ ಹೇಳಿದೆ. ತನಿಖೆಯಲ್ಲಿ ಜಾರ್ಜ್‌ ಅವರ ತಪ್ಪಿಲ್ಲ ಎಂಬುದು ಸಾಬೀತಾದರೆ ಅವರು ಮತ್ತೆ ಸಂಪುಟ ಸೇರಲು ನಮ್ಮ ಅಕ್ಷೇಪವಿಲ್ಲ ಎಂದರು.

ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನೀಡಿದ್ದ ಹೇಳಿಕೆಯಲ್ಲಿ ಸಚಿವ ಜಾರ್ಜ್‌ ಮತ್ತು ಐಎಎಸ್‌ ಅಧಿಕಾರಿಗಳಾದ ಎ.ಎಂ.ಪ್ರಸಾದ್‌ ಹಾಗೂ ಪ್ರಣಬ್‌ ಮೊಹಾಂತಿ ಅವರ ಹೆಸರು ಹೇಳಿದ್ದರು. ಈ ಸಂದರ್ಭದಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಆದರೆ, ಎರಡೇ ತಿಂಗಳಲ್ಲಿ ಸಿಐಡಿಯಿಂದ ಕ್ಲೀನ್‌ಚಿಟ್‌ ಕೊಡಿಸಿ ಜಾರ್ಜ್‌ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು ಮತ್ತು ಇಬ್ಬರು ಅಧಿಕಾರಿಗಳನ್ನೂ ಆರೋಪಮುಕ್ತಗೊಳಿಸಲಾಗಿತ್ತು.
ಇದೀಗ ಸಿಐಡಿ ತನಿಖೆಯಲ್ಲೇ ಲೋಪವಿದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಹೀಗಾಗಿ ಸಿಬಿಐ ತನಿಖೆ ಮುಕ್ತವಾಗಿ ನಡೆಯುವ ಉದ್ದೇಶದಿಂದ ಸಚಿವ ಜಾರ್ಜ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

Advertisement

ಸಿಐಡಿಯಿಂದ ಸಾಕ್ಷ್ಯ ತಿರುಚುವ ಯತ್ನ:
ಗಣಪತಿ ಆತ್ಮಹತ್ಯೆ ಕುರಿತು ಸಿಐಡಿ ತನಿಖೆಯಲ್ಲಿ ಲೋಪವಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌ ತನಿಖೆಯನ್ನು ಸಿಬಿಐಗೆ ವಹಿಸಿದ ಬಳಿಕವೂ ಸಿಐಡಿ ಅಧಿಕಾರಿಗಳು ಅನೇಕರಿಗೆ ದೂರವಾಣಿ ಕರೆ ಮಾಡಿ ದಾಖಲೆಗಳು ಮತ್ತು  ಸಾಕ್ಷಿ ಗಳನ್ನು ತಿರುಚುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಯಡಿಯೂರಪ್ಪ, ಸಚಿವ ಜಾರ್ಜ್‌ ಮತ್ತು ಇಬ್ಬರು ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿಗಳು ಸಿಐಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ನಾಲ್ಕೈದು ದಿನಗಳಲ್ಲಿ ಆರೋಪಪಟ್ಟಿ ಬಿಡುಗಡೆ
ಬೆಂಗಳೂರು:
ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ಸಚಿವರು, ಶಾಸಕರು ಮಾಡಿರುವ ಅಕ್ರಮಗಳ ಕುರಿತ ದಾಖಲೆ ಸಹಿತ ಆರೋಪಪಟ್ಟಿನ್ನು ಇನ್ನು ನಾಲ್ಕೈದು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಆರೋಪಪಟ್ಟಿಗೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ, ಸರ್ಕಾರದ ಕಡೆಯಿಂದ ಅಧಿಕೃತ ದಾಖಲೆಗಳನ್ನು ನೀಡುತ್ತಿಲ್ಲ. ಇನ್ನೆರಡು ದಿನಗಳಲ್ಲಿ ದಾಖಲೆಗಳು ಕೈಸೇರಲಿದ್ದು, ನಂತರ ಆರೋಪಪಟ್ಟಿ ಅಂತಿಮಗೊಳಿಸಿ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಯಡಿಯೂರಪ್ಪ ಅವರು ಹಿಟ್‌ ಅಂಡ್‌ ರನ್‌ ಕೇಸ್‌. ವಿನಾ ಕಾರಣ ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರದ ಪಿತ್ತ ನೆತ್ತಿಗೇರಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾವು ಸಾಚಾಗಳು, ನಮ್ಮ ಮೇಲೆ ಯಾವುದೇ ಆರೋಪಗಳಿಲ್ಲ ಎಂದು ತಮಗೆ ತಾವೇ ಶಹಬ್ಟಾಷ್‌ಗಿರಿ ಕೊಟ್ಟುಕೊಳ್ಳುತ್ತಿದ್ದಾರೆ. ಆದರೆ, ಅವರ ಅಕ್ರಮಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಖಚಿತ ದಾಖಲೆಗಳಿದ್ದು, ಅವುಗಳನ್ನು ಬಿಡುಗಡೆ ಮಾಡಿದ ವೇಳೆ ಸಾಚಾತನ ಬಯಲಿಗೆ ಬರುತ್ತದೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next