Advertisement

ಮಳೆ ಹಾನಿ ತಡೆಯಲು ಜಾರ್ಜ್‌ ಸೂಚನೆ 

12:27 PM Jun 02, 2017 | Team Udayavani |

ಬೆಂಗಳೂರು: ಮಳೆಗೆ ಜಲಾವೃತವಾಗಿ ಸಮಸ್ಯೆಗೆ ಗುರಿಯಾಗುವ ಕೋಡಿಚಿಕ್ಕನಹಳ್ಳಿ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಗಾಲದ ಅನಾಹುತಗಳು ತಡೆಯುವ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅಧಿಕಾರಿಗಳಿಗೆ ಆದೇಶಿಸಿದರು.

Advertisement

ಇತ್ತೀಚೆಗೆ ನಗರದಲ್ಲಿ ಸುರಿದ ಮುಂಗಾರು ಪೂರ್ವ ಮಳೆಗೆ ಅನಾಹುತಕ್ಕೆ ಒಳಗಾದ ಬೊಮ್ಮನಹಳ್ಳಿ ವಲಯದ ಪ್ರದೇಶಗಳು ಹಾಗೂ ಪಾಲಿಕೆಯಿಂದ ನಡೆಸುತ್ತಿರುವ ಕಾಲುವೆ ದುರಸ್ಥಿ ಕಾಮಗಾರಿ ಸ್ಥಳಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಾರ್ಜ್‌, ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. 

ಕಳೆದ ವರ್ಷ ಮಳೆಯಿಂದ ಜಲಾವೃತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸಿದ್ದ ಕೋಡಿಚಿಕ್ಕನಹಳ್ಳಿ ಭಾಗದ ಡಿಯೋ ಎನ್‌ಕ್ಲೇವ್‌, ಅನುಗ್ರಹ ಬಡಾವಣೆ, ಆರ್‌.ಆರ್‌.ಬಡಾವಣೆ, ಶಾಂತಿನಿಕೇತನ ಬಡಾವಣೆ, ಅವನೀ ಶೃಂಗೇರಿ ನಗರಗಳಿಗೆ ಭೇಟಿ ನೀಡಿದ ಅವರು,  ಸ್ಥಳೀಯರಿಂದ ಮಳೆಗಾಲದಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆದರು. 

ಈ ವೇಳೆ ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, “ಕೆರೆ ದಂಡೆಯನ್ನು ಅರಣ್ಯ ಇಲಾಖೆಯಿಂದ ಎತ್ತರಿಸಿರುವುದರಿಂದ ಮಳೆ ನೀರು ಕೆರೆಗೆ ಪ್ರವೇಶಿಸದೆ ಹಿಮ್ಮುಖವಾಗಿ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಹೀಗಾಗಿ ಕೆರೆಯ ದಂಡೆಯ ಎತ್ತರ ಕಡಿಮೆ ಮಾಡುವಂತೆ ಸೂಚಿಸಿ,’ ಎಂದು ಜಾರ್ಜ್‌ ಅವರಿಗೆ ಮನವಿ ಮಾಡಿದರು. 

ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌, “ಮಡಿವಾಳ ಕೆರೆಗೆ ಒಳಚರಂಡಿ ನೀರು ಹರಿಸುವುದರಿಂದ ಕೆರೆ ಮಲಿನವಾಗಲಿದೆ ಎಂಬ ಕಾರಣದಿಂದಾಗಿ ದಂಡೆಯನ್ನು ಎತ್ತರಿಸಲಾಗಿದೆ,’ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ ಸತೀಶ್‌ ರೆಡ್ಡಿ, “ಕೆರೆಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಇತರೆ ಭಾಗಗಳಿಂದ ಶುದ್ಧೀಕರಿಸದ ಒಳಚರಂಡಿ ನೀರು ಕೆರೆಗೆ ಪ್ರವೇಶಿಸುತ್ತಿದೆ,’ ಎಂದರು. 

Advertisement

ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್‌, “ಮಳೆಗಾಲದಲ್ಲಿ ನೀರು ಹಿಮ್ಮುಖವಾಗುತ್ತಿರವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಕೆರೆಯ ದಂಡೆಯನ್ನು ಕಡಿಮೆ ಮಾಡಿ ಹಾಗೂ ಒಳಹರಿವು ಹೆಚ್ಚಿದಾಗ ಕೆರೆಯ ನೀರನ್ನು ಹೊರಗೆ ಹರಿಸಿ,’ ಎಂದು ರವಿ ಕುಮಾರ್‌ ಹಾಗೂ ಕರ್ನಾಟಕ ಸರೋವರ ಅಭಿವೃದ್ಧಿ ಮತ್ತು ಮೂಲಸೌಕರ್ಯ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕೂಡಲೇ 25 ಕೋಟಿ ರೂ. ಬಿಡುಗಡೆ!:  ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ನಿರೀಕ್ಷಿಸಿ ಕೂಡಲೇ 25 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಕೂಡಲೇ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ ಎಂದು ಬಿಬಿಎಂಪಿ ಆಯುಕ್ತರಿಗೆ ಇದೇ ವೇಳೆ ಜಾರ್ಜ್‌ ಸೂಚಿಸಿದರು.  ಕೋಡಿಚಿಕ್ಕನಹಳ್ಳಿ ಭಾಗದಲ್ಲಿ ಅನಾಹುತ ತಪ್ಪಿಸಲು ಪಾಲಿಕೆಯಿಂದ ಬದಲಿ ಕಾಲುವೆ ನಿರ್ಮಾಣ ಯೋಜನೆ ರೂಪಿಸಲಾಗಿತ್ತು.

ಆದರೆ, ಈವರೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಮುಖ್ಯಮಂತ್ರಿಗಳು ಕಳೆದ ವರ್ಷ ಮಳೆ ಅನಾಹುತ ತಡೆಯಲು 139 ಕೋಟಿ ರೂ. ನೀಡಿದ್ದಾರೆ. ಹಣ ಬಿಡುಗಡೆಗೆ ಕ್ಯಾಬಿನೆಟ್‌ ಅನುಮೋದನೆ ಬೇಕಾಗಿದ್ದು, ಸದ್ಯ ಕಾಮಗಾರಿಗಾಗಿ ಸರ್ಕಾರದ ಅನುಮೋದನೆ ನಿರೀಕ್ಷಿಸಿದ 25 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಹಾಗೂ ಉಳಿದ ಹಣ ಬಿಡುಗಡೆಗೆ ಕ್ಯಾಬಿನೆಟ್‌ ಒಪ್ಪಿಗೆ ಪಡೆಯಲಾಗುವುದು,’ ಎಂದು ಭರವಸೆ ನೀಡಿದರು. 

ಟಿಡಿಆರ್‌ಗೆ ಒಪ್ಪಿಸುವುದು ನಿಮ್ಮ ಜವಾಬ್ದಾರಿ!: ಕೋಡಿಚಿಕ್ಕನಹಳ್ಳಿ ಸುತ್ತಮುತ್ತಲಿನ ಭಾಗಗಳಿಗೆ ಒಳಚರಂಡಿ ಪೈಪ್‌ಲೈನ್‌ ಅಳವಡಿಕೆಗೆ ಸಂಬಂಧಿಸಿದಂತೆ ಸಿಲ್ಕ್ಬೋರ್ಡ್‌ ಬಳಿ ಭೂಸ್ವಾಧೀನ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದರು. ಈ ವೇಳೆ ಮಾತನಾಡಿದ ಜಾರ್ಜ್‌ ಅವರು, ಪಾಲಿಕೆ ಟಿಡಿಆರ್‌ ನೀಡಲು ಸಿದ್ದವಿದೆ. ಮಾಲೀಕರನ್ನು ನೀವು ಒಪ್ಪಿಸಿ ಎಂದು ಶಾಸಕ ಸತೀಶ್‌ ರೆಡ್ಡಿಗೆ ಸೂಚಿಸಿದರು. ಜತೆಗೆ ಕೂಡಲೇ ಭೂ ಸ್ವಾಧೀನಪಡಿಸಿಕೊಂಡು ಕಾಮಗಾರಿ ನಡೆಯಲು ಅನುಕೂಲ ಮಾಡಿಕೊಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. 

ನಕಾರಾತ್ಮಕ ಅಂಶಗಳನ್ನೇ ತೋರಿಸುತ್ತೀರಾ!: ಕೋಡಿಚಿಕ್ಕನಹಳ್ಳಿಯ ವಿವಿಧ ಭಾಗಗಳಲ್ಲಿ ಪಾಲಿಕೆಯಿಂದ ಪೂರ್ಣಗೊಳಿಸಿರುವ ಕಾಮಗಾರಿಗಳನ್ನು ಹಾಗೂ ಪಾಲಿಕೆಯಿಂದ ನಡೆಸಲಾಗುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸುವ ವೇಳೆ ಶಾಂತಿನಿಕೇತನ ಬಡಾವಣೆಯಲ್ಲಿ ಚರಂಡಿಗಳಲ್ಲಿ ನಿಂತಿದ್ದ ನೀರನ್ನು ಸೆರೆ ಹಿಡಿಯಲು ದೃಶ್ಯ ಮಾಧ್ಯಮಗಳು ಮುಂದಾದರು. ಇದರಿಂದ ಕೊಂಚ ಸಿಟ್ಟುಗೊಂಡಂತೆ ಕಂಡ ಜಾರ್ಜ್‌ ಅವರು, ಎಷ್ಟೊಂದು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೆ, ನೀವು ಸದಾ ನಕಾರಾತ್ಮಕ ಅಂಶಗಳನ್ನೇ ತೋರಿಸುತ್ತೀರಾ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next